AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

25 ವರ್ಷಗಳ ಹಳೇ ಸಾಲ ತೀರಿಸಲು ಕೇರಳದಿಂದ ತೆಲಂಗಾಣಕ್ಕೆ ಬಂದ ಸ್ನೇಹಿತ

25 ವರ್ಷಗಳ ಹಳೇ ಸಾಲ ತೀರಿಸಲು ಕೇರಳದ ಮೊಹಮ್ಮದ್ ಇಸ್ಮಾಯಿಲ್ ತೆಲಂಗಾಣಕ್ಕೆ ಬಂದಿದ್ದಾರೆ. ಸೌದಿ ಅರೇಬಿಯಾದಲ್ಲಿ ಪಡೆದ ₹25,000 ಸಾಲವನ್ನು ತೀರಿಸಲು ಗೂಗಲ್ ಮ್ಯಾಪ್ ಬಳಸಿಕೊಂಡು ತಮ್ಮ ಹಳೆಯ ಸ್ನೇಹಿತ ಲಚ್ಚಣ್ಣನ ಮನೆ ತಲುಪಿದರು. ಕಳೆದುಹೋಗಿದ್ದ ಸ್ನೇಹ ಮತ್ತೆ ಒಂದಾಯಿತು. ಪ್ರಾಮಾಣಿಕತೆ ಮತ್ತು ಗೆಳೆತನಕ್ಕೆ ಇದೊಂದು ಅದ್ಭುತ ಉದಾಹರಣೆಯಾಗಿ ನಿಂತಿದೆ.

25 ವರ್ಷಗಳ ಹಳೇ ಸಾಲ ತೀರಿಸಲು ಕೇರಳದಿಂದ ತೆಲಂಗಾಣಕ್ಕೆ ಬಂದ ಸ್ನೇಹಿತ
ಇಸ್ಮಾಯಿಲ್
ನಯನಾ ರಾಜೀವ್
|

Updated on: Jul 10, 2026 | 1:00 PM

Share

ಧರ್ಮಪುರಿ, ಜುಲೈ 10: ಇಂದಿನ ದಿನಗಳಲ್ಲಿ ನೂರು-ಸಾವಿರ ರೂಪಾಯಿ ಸಾಲ(Debt) ಪಡೆದು ತಲೆಮರೆಸಿಕೊಂಡು ತಿರುಗುವವರೇ ಹೆಚ್ಚು. ಇಂತಹ ಕಾಲದಲ್ಲೂ, ಬರೋಬ್ಬರಿ 25 ವರ್ಷಗಳ ಹಿಂದೆ ತಾನು ಪಡೆದಿದ್ದ ಸಾಲವನ್ನು ನೆನಪಿನಲ್ಲಿಟ್ಟುಕೊಂಡು, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾವಿರಾರು ಕಿಲೋಮೀಟರ್ ದೂರ ಪ್ರಯಾಣ ಬೆಳೆಸಿದ ಅಪರೂಪದ ಘಟನೆಯೊಂದು ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಧರ್ಮಪುರಿಯಲ್ಲಿ ನಡೆದಿದೆ.

ಕೇರಳಂನ ಪಾಲಕ್ಕಾಡ್ ಮೂಲದ ಮೊಹಮ್ಮದ್ ಇಸ್ಮಾಯಿಲ್ ಎಂಬುವವರು ಧರ್ಮಪುರಿಯ ಎಡ್ಲಾ ಲಚ್ಚಣ್ಣ ಎಂಬ ತನ್ನ ಹಳೆಯ ಸ್ನೇಹಿತನಿಗೆ 25,000 ರೂ. ಹಣ ಮರುಪಾವತಿಸುವ ಮೂಲಕ ಪ್ರಾಮಾಣಿಕತೆ ಮತ್ತು ಕೃತಜ್ಞತೆಗೆ ಅತ್ಯುನ್ನತ ಉದಾಹರಣೆಯಾಗಿ ನಿಂತಿದ್ದಾರೆ.

ಸೌದಿ ಅರೇಬಿಯಾದಲ್ಲಿ ಚಿಗುರಿದ್ದ ಸ್ನೇಹ, ಕಡಿತಗೊಂಡಿದ್ದ ಸಂಪರ್ಕ ಕಥೆ ಶುರುವಾಗುವುದು 25 ವರ್ಷಗಳ ಹಿಂದೆ. ಮೊಹಮ್ಮದ್ ಇಸ್ಮಾಯಿಲ್ ಮತ್ತು ಧರ್ಮಪುರಿಯ ಎಡ್ಲಾ ಲಚಣ್ಣ ಇಬ್ಬರೂ ಸೌದಿ ಅರೇಬಿಯಾದ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಇಸ್ಮಾಯಿಲ್ ಅವರಿಗೆ ತುರ್ತು ಹಣದ ಅಗತ್ಯಬಿದ್ದಾಗ, ಗೆಳೆಯ ಲಚ್ಚಣ್ಣ ಧನಸಹಾಯ ಮಾಡಿದ್ದರು. ಭಾರತಕ್ಕೆ ಮರಳಿದ ತಕ್ಷಣ ನಿನ್ನ ಸಾಲ ತೀರಿಸುತ್ತೇನೆ ಎಂದು ಇಸ್ಮಾಯಿಲ್ ಮಾತು ಕೊಟ್ಟಿದ್ದರು.

ಮತ್ತಷ್ಟು ಓದಿ: ಸಾಲ ಕೊಡುವ ಮುನ್ನ ಹುಷಾರ್​​! ಕಿಡ್ನ್ಯಾಪ್​​ ಮಾಡಿ ವ್ಯಕ್ತಿಗೆ ಚಿತ್ರಹಿಂಸೆ ಕೊಟ್ಟ ದುಷ್ಕರ್ಮಿಗಳು

ಆದರೆ, ಇಬ್ಬರೂ ಸ್ವದೇಶಕ್ಕೆ ಮರಳಿದ ನಂತರ ಅನಿವಾರ್ಯ ಕಾರಣಗಳಿಂದ ಒಬ್ಬರನ್ನೊಬ್ಬರು ಸಂಪರ್ಕಿಸಲು ಸಾಧ್ಯವಾಗದೆ ಫೋನ್ ನಂಬರ್, ವಿಳಾಸ ಎಲ್ಲವೂ ಕಳೆದುಹೋಗಿತ್ತು. ದಿನಗಳು ಉರುಳಿ ವರ್ಷಗಳೇ ಕಳೆದರೂ ಇಸ್ಮಾಯಿಲ್ ಮನಸ್ಸಿನಲ್ಲಿದ್ದ ಸಾಲದ ಆ ಭಾರ ಮಾತ್ರ ಇಳಿದಿರಲಿಲ್ಲ.

ವಿಳಾಸವಿಲ್ಲದಿದ್ದರೂ ಗೂಗಲ್ ಮ್ಯಾಪ್ ನಂಬಿ ಬಂದ ಗೆಳೆಯ

ಗೆಳೆಯನ ಸಾಲವನ್ನು ತೀರಿಸಲೇಬೇಕೆಂದು ಹಠ ತೊಟ್ಟ ಇಸ್ಮಾಯಿಲ್ ಅವರ ಬಳಿ ಲಚ್ಚಣ್ಣನ ಫೋನ್ ನಂಬರ್ ಆಗಲಿ, ಪೂರ್ಣ ವಿಳಾಸವಾಗಲಿ ಇರಲಿಲ್ಲ. ಅವರ ಬಳಿ ಇದ್ದ ಒಂದೇ ಒಂದು ಮಾಹಿತಿ ಅಂದರೆ ಗೆಳೆಯನ ಊರು ಧರ್ಮಪುರಿ. ಇದನ್ನೇ ಗೂಗಲ್‌ನಲ್ಲಿ ಹುಡುಕುತ್ತಾ ಕೇರಳದಿಂದ ಸಾವಿರಾರು ಕಿಲೋಮೀಟರ್ ಪ್ರಯಾಣ ಬೆಳೆಸಿ ಜಗ್ತಿಯಾಲ್ ಜಿಲ್ಲೆಯ ಧರ್ಮಪುರಿ ಪಟ್ಟಣ ತಲುಪಿದರು.

ಅಲ್ಲಿನ ಸ್ಥಳೀಯರನ್ನು ವಿಚಾರಿಸುತ್ತಾ, ಅಂತಿಮವಾಗಿ ಗುರುವಾರ ಮಧ್ಯಾಹ್ನ ಲಚಣ್ಣ ಅವರ ಮನೆ ಬಾಗಿಲು ತಟ್ಟುವಲ್ಲಿ ಯಶಸ್ವಿಯಾದರು.

ಫೋನ್‌ನಲ್ಲಿ ಹಳೇ ದೋಸ್ತ್ ಧ್ವನಿ ಕೇಳಿ ಕಣ್ಣೀರಿಟ್ಟ ಲಚ್ಚಣ್ಣ

ಇಸ್ಮಾಯಿಲ್ ಮನೆಗೆ ಹೋದಾಗ ಲಚಣ್ಣ ಪ್ರಸ್ತುತ ಮತ್ತೆ ಉದ್ಯೋಗಕ್ಕಾಗಿ ಗಲ್ಫ್ ದೇಶಕ್ಕೆ ತೆರಳಿರುವುದು ತಿಳಿಯಿತು. ಇಸ್ಮಾಯಿಲ್ ಲಚಣ್ಣ ಅವರ ಕುಟುಂಬಸ್ಥರಿಗೆ ತಮ್ಮನ್ನು ಪರಿಚಯಿಸಿಕೊಂಡು, ಅಲ್ಲಿಂದಲೇ ಲಚಣ್ಣ ಅವರಿಗೆ ಫೋನ್ ಮಾಡಿದರು.

ತಾನು ನೀಡಿದ್ದ ಸಾಲದ ಬಗ್ಗೆ ಸಂಪೂರ್ಣವಾಗಿ ಮರೆತೇ ಹೋಗಿದ್ದ ಲಚ್ಚಣ್ಣ ಅವರಿಗೆ 25 ವರ್ಷಗಳ ನಂತರ ತನ್ನ ಹಳೆಯ ಮಿತ್ರನ ಧ್ವನಿ ಕೇಳಿ ಒಂದು ಕ್ಷಣ ಆಶ್ಚರ್ಯವಾಗಿ, ಕಣ್ಣಾಲಿಗಳು ತುಂಬಿ ಬಂದವು. ಫೋನ್‌ನಲ್ಲೇ ಇಬ್ಬರೂ ಹಳೆಯ ದಿನಗಳನ್ನು ನೆನೆದು ಅತ್ಯಂತ ಪ್ರೀತಿಯಿಂದ ಮಾತನಾಡಿದರು.

ಮನದ ಭಾರ ಇಳಿಸಿಕೊಂಡ ಇಸ್ಮಾಯಿಲ್

ಬಳಿಕ ಮೊಹಮ್ಮದ್ ಇಸ್ಮಾಯಿಲ್ ಅವರು ಲಚ್ಚಣ್ಣನ ಕುಟುಂಬದ ಕೈಗೆ 25,000 ರೂ. ನಗದು ಹಣವನ್ನು ಹಸ್ತಾಂತರಿಸಿದರು. ಇಷ್ಟು ವರ್ಷಗಳಿಂದ ನನ್ನ ಮನಸ್ಸಿನ ಮೇಲೆ ದೊಡ್ಡ ಭಾರವಿತ್ತು, ಕೊಟ್ಟ ಮಾತನ್ನು ಇಂದು ನೆರವೇರಿಸಿದ್ದೇನೆ ಎಂದು ಇಸ್ಮಾಯಿಲ್ ಭಾವುಕರಾದರು.

ತಮ್ಮ ತಂದೆಯ ಸ್ನೇಹಿತ ಇಷ್ಟು ವರ್ಷಗಳ ನಂತರ ಕೇವಲ ನಂಬಿಕೆ ಮತ್ತು ಪ್ರಾಮಾಣಿಕತೆಗಾಗಿ ಕೇರಳದಿಂದ ಹುಡುಕಿಕೊಂಡು ಬಂದಿದ್ದನ್ನು ಕಂಡು ಲಚಣ್ಣನ ಕುಟುಂಬದ ಕಣ್ಣುಗಳು ತೇವಗೊಂಡವು. ಸ್ಥಳೀಯರು ಈ ಇಬ್ಬರು ಸ್ನೇಹಿತರ ಬಾಂಧವ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಸಂಬಂಧಗಳು ಮತ್ತು ನಂಬಿಕೆಗೆ ಇಂದಿಗೂ ಬೆಲೆ ಇದೆ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us