ಅಯೋಧ್ಯೆಯಲ್ಲಿ ಏನೆಲ್ಲ ಧಾರ್ಮಿಕ ಕಾರ್ಯಗಳು ನಡೆಯುತ್ತವೆ, ಭಕ್ತರಿಗೆ ದರ್ಶನ ಅವಕಾಶ ಯಾವಾಗಿನಿಂದ? ಇಲ್ಲಿದೆ ಮಾಹಿತಿ

|

Updated on: Jan 17, 2024 | 10:03 AM

ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತಿದ್ದು, ಅಂದು ಯಾವೆಲ್ಲ ಧಾರ್ಮಿಕ ಕಾರ್ಯಗಳು ನಡೆಯುತ್ತವೆ? ವಿಧಿ ವಿಧಾನಗಳು ಏನು? ಎಂಬುವುದರ ಕುರಿತು ರಾಮಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿರುವ ಗೋಪಾಲ್​ ಜಿ ಅವರ ಜೊತೆ ಟಿವಿ9 ಡಿಜಿಟಲ್​ ನಡೆಸಿದ ಸಂದರ್ಶನ ಇಲ್ಲಿದೆ..

ಅಯೋಧ್ಯೆಯಲ್ಲಿ ಏನೆಲ್ಲ ಧಾರ್ಮಿಕ ಕಾರ್ಯಗಳು ನಡೆಯುತ್ತವೆ, ಭಕ್ತರಿಗೆ ದರ್ಶನ ಅವಕಾಶ ಯಾವಾಗಿನಿಂದ? ಇಲ್ಲಿದೆ ಮಾಹಿತಿ
ಗೋಪಾಲ್​ ಜಿ
Follow us on

ಅಯೋಧ್ಯೆ, ಜನವರಿ 17: ಜನವರಿ 22 ರಂದು ಅಯೋಧ್ಯೆ (Ayodhya) ರಾಮಮಂದಿರಲ್ಲಿ (Ram Mandir) ಪ್ರಭು ಶ್ರೀರಾಮ (Sri Ram) ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತದೆ. ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಪುಣ್ಯ ಕಾರ್ಯವನ್ನು ಕಣ್ತುಂಬಿಕೊಳ್ಳಲು ಅಸಂಖ್ಯ ಭಕ್ತರು ಕಾದು ಕುಳಿತಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೂ, ಮೇಲಾಗಿ ಅಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗೂ ಮತ್ತು ಕರ್ನಾಟಕಕ್ಕೂ ನಂಟಿದೆ. ಹೌದು ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸುತ್ತಿರುವ ರಾಮಲಲ್ಲಾ (ಬಾಲರಾಮ) ನ ವಿಗ್ರಹವನ್ನು ತಯಾರಿಸಿದ್ದು ನಮ್ಮ ಕರುನಾಡಿನ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್. ಮತ್ತು ವಿಗ್ರಹ ತಯಾರಿಕೆಗೆ ಬಳಸಲಾದ ಕಲ್ಲು ಸಹಿತ ಕರ್ನಾಟಕದ್ದೇ. ಈ ವಿಚಾರ ಗೊತ್ತಿರುವ ಸಂಗತಿ.

ಆದರೆ ಇಡೀ ರಾಮಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿರುವ ಕರ್ನಾಟಕದವರೇ ಎಂಬುವು ಸಂಸತಸದ ಸಂಗತಿ. ಹೌದು ರಾಮಮಂದಿರ ನಿರ್ಮಾಣ ಜವಾಬ್ದಾರಿ ಹೊತ್ತಿರುವ ಗೋಪಾಲ್ ನಾಗರಕಟ್ಟೆ (ಗೋಪಾಲ್​ ಜಿ) ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಇನ್ನು ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತಿದ್ದು, ಅಂದು ಯಾವೆಲ್ಲ ಧಾರ್ಮಿಕ ಕಾರ್ಯಗಳು ನಡೆಯುತ್ತವೆ? ವಿಧಿ ವಿಧಾನಗಳು ಏನು? ಮಂದಿರದ ಕುರಿತು ಸ್ವತಃ ಗೋಪಾಲ್​ ಜಿ ಅವರ ಜೊತೆ ಟಿವಿ9 ಡಿಜಿಟಲ್​ ನಡೆಸಿದ ಸಂದರ್ಶನ ಇಲ್ಲಿದೆ..

ನಿನ್ನೆ (ಜ.16) ರಿಂದ ಧಾರ್ಮಿಕ ವಿಧಿವಾಧನ ಆರಂಭವಾಗಿವೆ. ಪ್ರಭು ಶ್ರೀರಾಮ ಸರಯೂ ನದಿಯಲ್ಲಿ ಸ್ನಾನ ಮಾಡಿದ್ದಾರೆ. ಡಾ. ಅನಿಲ್ ಮಿಶ್ರಾ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ಆರಂಭವಾಗಿವೆ. ಮೂರ್ತಿಯ ಮೇಲೆ ಗಂಧ ತುಪ್ಪ ಹೀಗೆ ಪ್ರಾರಂಭಿಕ ಅಭಿಷೇಕ ಮಾಡಲಾಗಿದೆ. ಇಂದು (ಜ.17) ಮೂರ್ತಿ ದೇವಾಲಯದೊಳಗೆ ಪ್ರವೇಶ ಮಾಡಲಿದೆ ಎಂದು ಹೇಳಿದರು.

ನಾಳೆ (ಜ.18)ರ ಮಧ್ಯಾಹ್ನ 12 ಗಂಟೆಗೆ ಅಭಿಜಿತ್ ಮೂಹುರ್ತದಲ್ಲಿ ಗರ್ಭಗೃಹದೊಳಗೆ ಮೂರ್ತಿ ಪ್ರವೇಶ ಮಾಡಲಿದೆ. ಬಳಿಕ ಜಲಾಧಿವಾಸ, ಅನ್ನಾಧಿವಾಸ, ಫಲಾಧಿವಾಸ, ಆಜ್ಯಾಧಿವಾಸ, ಹೀಗೆ 12 ರೀತಿಯ ಅಧಿವಾಸಗಳು ನಡೆಯಲಿದೆ. ನಾಲ್ಕು ದಿನದಲ್ಲಿ ಅಧಿವಾಸ ಮುಗಿಯಲಿದೆ. 18,19,20,21ರ ವರೆಗೆ ನಾಲ್ಕು ದಿನ ಅಧಿವಾಸಗಳು ಮುಗಿಯಲಿದೆ. 22ರ ಮಧ್ಯಾಹ್ನ 12.20 ಕ್ಕೆ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Ram Janmbhoomi Case 1992ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದ ಅಯೋಧ್ಯೆ ರಾಮಮಂದಿರ ನಿರ್ಮಾಣದವರೆಗೆ; ಟೈಮ್​ಲೈನ್

ಕರ್ನಾಟಕ ಹಾಗೂ ಅಯೋಧ್ಯೆ ಸಂಬಂಧ

ಪ್ರಭು ಶ್ರೀರಾಮನ ಬಂಟ ಹನುಮ‌ ಕರ್ನಾಟಕದವನು. ರಾಮ ಅಯೋಧ್ಯೆಯವನು. ಹನುಮ ರಾಮನ ಸೇವೆಗೆ ಬಂದಿದ್ದನು. ಇನ್ನು ಅಯೋಧ್ಯೆ ಆಂದೋಲನದ ಹೊಣೆ ಹೊತ್ತಿದ್ದ ಪೇಜಾವರದ ವಿಶ್ವೇಶ ತೀರ್ಥ ಶ್ರೀಗಳು ಇವತ್ತಿಲ್ಲ. ಅವರ ಶಿಷ್ಯರು ಜವಾಬ್ದಾರಿ ಹೊತ್ತಿದ್ದಾರೆ, ಟ್ರಸ್ಟಿ ಆಗಿದ್ದಾರೆ. ನನಗೆ (ಗೋಪಾಲ್​ ಜಿ) ಅವಕಾಶ ಸಿಕ್ಕಿದೆ, ಕರ್ನಾಟಕದ ಗ್ರಾನೇಟ್ ಉಪಯೋಗ ಆಗಿದೆ. ಕರ್ನಾಟಕ ಮೂಲದ ಸಂಸ್ಥೆ ವಿದ್ಯುದಿಕರಣ ಮಾಡಿದೆ. ಅರುಣ್, ಗಣೇಶ್ ಭಟ್ ಮೂರ್ತಿ ಕೆತ್ತಿದ್ದಾರೆ. ಅದರಲ್ಲಿ ಅರುಣ್​ ಮೂರ್ತಿ ಅವರ ವಿಗ್ರಹ ಆಯ್ಕೆಯಾಗಿದೆ ಎಂದು ಹೇಳಿದರು.

ರಾಮಲಲ್ಲಾ ಮೂರ್ತಿ ಹೇಗಿದೆ?

ಪ್ರಭು ಶ್ರೀರಾಮ ಕಮಲದ ಮೇಲೆ ನಿಂತಿದ್ದಾನೆ. ಬಾಲಕನ ಮುಖಚರ್ಯೆ ಇದೆ. ರಾಮ ಹಸನ್ಮುಖಿಯಾಗಿದ್ದಾನೆ. 23 ರ ಬೆಳಿಗ್ಗೆ 7 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

ಅಪೂರ್ಣ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಆರೋಪ

ಧಾರ್ಮಿಕ ರೀತಿಯಲ್ಲಿ ಎರಡು ವಿಧಾನ ಇದೆ. ಶಿಖರದವರೆಗೆ ಮಂದಿರ ಪೂರ್ಣ ನಿರ್ಮಾಣವಾಗೋದು ಒಂದು ವಿಧಾನ, ಇನ್ನೊಂದು ಕಟ್ಟಡದ ಒಂದು ಹಂತದ ನಿರ್ಮಾಣ ಆದ ಬಳಿಕ ಪ್ರಾಣ ಪ್ರತಿಷ್ಠಾಪನೆ ಮಾಡುವುದು. ಇದನ್ನ ಕಾಶಿಯ ಗಣೇಶ್ವರ್ ಶಾಸ್ತ್ರಿ ದ್ರವಿಡ್ ಅವರು ಶಾಸ್ತ್ರದಿಂದ ಉಲ್ಲೇಖಿಸಿ ಹೇಳಿದ್ದಾರೆ. ನಮ್ಮ ಪ್ರಕಾರ ರಾಮ ಮಂದಿರ ಬೇರೆ ಮಂದಿರದಂತೆ ಅಲ್ಲ. ಕೋಟ್ಯಾಂತರ ಜನರ ಭಾವನೆ ಇದರಲ್ಲಿದೆ. ಮಂದಿರ ನಿರ್ಮಾಣಕ್ಕೆ ನಡೆದ ಆಂದೋಲನದಲ್ಲಿ 6 ಕೋಟಿ ಜನರು ಭಾಗಿಯಾಗಿದ್ದರು. 13 ಕೋಟಿ ಜನ ಮಂದಿರಕ್ಕಾಗಿ ಕೊಡುಗೆ ಕೊಟ್ಟಿದ್ದಾರೆ. ಶೀಘ್ರವಾಗಿ ರಾಮನ ಪ್ರಾಣಪ್ರತಿಷ್ಠೆ ಆಗಬೇಕು ಎಂಬುದು ಅವರ ಬಯಕೆಯಾಗಿತ್ತು. ಹೀಗಾಗಿ ನಾವು ಮಂದಿರದ ನೆಲ ಮಹಡಿಯನ್ನ ಶೀಘ್ರವಾಗಿ ಪೂರ್ಣಗೊಳಿಸಿದ್ದೇವೆ. ರಾಮನ ದರ್ಶನಕ್ಕೆ ಎಲ್ಲಾ ವ್ಯವಸ್ಥೆ ಮಾಡಿ, ಶೀಘ್ರವಾಗಿ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿದ್ದೇವೆ ಎಂದರು.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:30 am, Wed, 17 January 24