ರೈತರೊಂದಿಗೆ ಮಾತುಕತೆಗೆ ಸಿದ್ಧವೆಂದ ಅಮಿತ್ ಶಾ: ಸಭೆಯ ತೀರ್ಮಾನಕ್ಕೆ ಕಾಯುತ್ತಿರುವ ಧರಣಿ ನಿರತ ರೈತರು
ಸುಮಾರು 400ಕ್ಕೂ ಹೆಚ್ಚು ರೈತರು ಉತ್ತರ ದೆಹಲಿಯ ಬುರಾರಿಯಲ್ಲಿ ಇಷ್ಟವಿಲ್ಲದಿದ್ದರೂ ಶನಿವಾರ ಒಟ್ಟುಗೂಡಿದರು ಮತ್ತು ಸರ್ಕಾರ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಟ್ಟ ಜಾಗದಲ್ಲಿ ಏನೇ ಸಮಸ್ಯೆ ಬಂದರು ಅವುಗಳನ್ನು ಪರಿಗಣಿಸದೆ ಕೃಷಿ ಕಾನೂನಿನ ವಿರುದ್ಧದ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

ದೆಹಲಿ: ದೆಹಲಿಯ ಕೇಂದ್ರ ಭಾಗವನ್ನು ಪ್ರವೇಶಿಸುವುದೇ ನಮ್ಮ ಗುರಿ ಎಂದು ಪಟ್ಟು ಹಿಡಿದಿರುವ ಪ್ರತಿಭಟನಾನಿರತ ರೈತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಮತ್ತು ಪ್ರತಿಭಟನೆಯು ತೀವ್ರಗೊಳ್ಳುತ್ತಿದೆ. ಸದ್ಯ ಪ್ರತಿಭಟನೆಯ ನಿರ್ವಹಣೆ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿದೆ. ನಗರದ ಬುರಾರಿ ಮೈದಾನಕ್ಕೆ ತೆರಳುವಂತೆ ರೈತರಿಗೆ ಸರ್ಕಾರ ಸೂಚನೆ ನೀಡಿದೆ.
ಸುಮಾರು 400ಕ್ಕೂ ಹೆಚ್ಚು ರೈತರು ಉತ್ತರ ದೆಹಲಿಯ ಬುರಾರಿಯಲ್ಲಿ ಶನಿವಾರ ಒಟ್ಟುಗೂಡಿದರು. ಸರ್ಕಾರ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಟ್ಟ ಜಾಗದಲ್ಲಿ ಕೃಷಿ ಕಾನೂನಿನ ವಿರುದ್ಧದ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ದೆಹಲಿ ಚಲೋ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರಿಗೆ ಬುರಾರಿಯ ನಿರಂಕಾರಿ ಮೈದಾನದಲ್ಲಿ ಪ್ರತಿಭಟನೆ ಮಾಡುವಂತೆ ಈ ಹಿಂದೆ ಪೊಲೀಸರು ಸೂಚಿಸಿದ್ದರು. ಆದರೆ ಅದನ್ನು ಒಪ್ಪದ ರೈತರು ಸಿಂಘುವಿನಲ್ಲಿ ಮೂರು ದಿನಗಳಿಂದ ನೆಲೆಸಿದ್ದರು. ಇಂದು (ನ.29) ನಡೆಯಲಿರುವ ನಿರ್ಣಾಯಕ ಸಭೆಯ ಫಲಿತಾಂಶದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದರು.
ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕೈಟ್ ‘ರಾಮ್ಲೀಲಾ ಮೈದಾನದಲ್ಲಿ ಪ್ರತಿಭಟನೆಗಳು ನಡೆಯುತ್ತವೆ, ಹಾಗಾದರೆ ನಾವು ಖಾಸಗಿ ಸ್ಥಳವಾದ ನಿರಂಕಾರಿ ಭವನಕ್ಕೆ ಏಕೆ ಹೋಗಬೇಕು? ನಾವು ಇಂದು ಇಲ್ಲಿಯೇ ಇರುತ್ತೇವೆ’ ಎಂದು ಹೇಳಿದರು.
ದೆಹಲಿಯ ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳು ಮತ್ತು ಪ್ರವೇಶ ಕೇಂದ್ರಗಳನ್ನು ಈಗಾಗಲೇ ನಿರ್ಬಂಧಿಸಿರುವುದರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರೈತರಿಗೆ ಬುರಾರಿ ಮೈದಾನಕ್ಕೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದರು. ರೈತರು ಗೊತ್ತುಪಡಿಸಿದ ಸ್ಥಳಕ್ಕೆ ತೆರಳಿದ ಕೂಡಲೆ ಅವರೊಂದಿಗೆ ಚರ್ಚೆ ನಡೆಸಲು ಕೇಂದ್ರ ಸಿದ್ಧವಾಗಿದೆ ಎಂದು ಅಮಿತ್ ಶಾ ಹೇಳಿದ್ದರು.
ಒಂದು ಕಡೆ ರೈತರಿಗೆ ಬೆಂಬಲ ಸೂಚಿಸುತ್ತಿರುವ ರಾಜಕೀಯ ಪಕ್ಷಗಳು ಇನ್ನೊಂದು ಕಡೆ ಪ್ರತಿಭಟನೆ ತಣ್ಣಗಾಗಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರ ಇವುಗಳ ನಡುವೆ ದೆಹಲಿ ಚಲೋ ರೈತರ ಪ್ರತಿಭಟನೆ ಎಲ್ಲಿಗೆ ಬಂದು ನಿಲ್ಲುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: Delhi Chalo: ಪ್ರತಿಭಟನೆ ಕೊನೆಗೊಳಿಸುವಂತೆ ರೈತರಿಗೆ ಕೇಂದ್ರ ಕೃಷಿ ಸಚಿವ ತೋಮರ್ ಮನವಿ!
Published On - 1:51 pm, Sun, 29 November 20



