ಬಿಹಾರದಲ್ಲಿ ಕಬ್ಬಿಣದ ಸೇತುವೆಗಳನ್ನು ರದ್ದಿ ಎಂದು ಗುರುತಿಸಿ ಹರಾಜು ಹಾಕಲು ಸರ್ಕಾರದ ನಿರ್ಧಾರ; 60 ಅಡಿ ಉದ್ದದ ಬ್ರಿಡ್ಜ್​​ ಕಳವಾದ ಬೆನ್ನಲ್ಲೇ ಕ್ರಮ

| Updated By: Lakshmi Hegde

Updated on: Apr 13, 2022 | 11:32 AM

ಈ ಬಗ್ಗೆ ಬಿಹಾರದ ಸಂಪನ್ಮೂಲ ಸಚಿವ ಸಂಜಯ್​ ಕುಮಾರ್ ಝಾ ಮಾತನಾಡಿ, 60 ಅಡಿ ಉದ್ದದ ಸೇತುವೆ ಕಳವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾವು ಇಬ್ಬರು ಎಂಜಿನಿಯರ್​​ಗಳನ್ನು ಅಮಾನತು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಬಿಹಾರದಲ್ಲಿ ಕಬ್ಬಿಣದ ಸೇತುವೆಗಳನ್ನು ರದ್ದಿ ಎಂದು ಗುರುತಿಸಿ ಹರಾಜು ಹಾಕಲು ಸರ್ಕಾರದ ನಿರ್ಧಾರ; 60 ಅಡಿ ಉದ್ದದ ಬ್ರಿಡ್ಜ್​​ ಕಳವಾದ ಬೆನ್ನಲ್ಲೇ ಕ್ರಮ
ಸಾಂದರ್ಭಿಕ ಚಿತ್ರ
Follow us on

ಬಿಹಾರ ರಾಜ್ಯಾದ್ಯಂತ ಇರುವ ಎಲ್ಲ ಬಳಕೆಯಾಗದ ಕಬ್ಬಿಣದ ಸೇತುವೆಗಳನ್ನು ಹರಾಜು ಹಾಕಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಕೆಲವು ಕಡೆ ಸೇತುವೆ ಇದ್ದರೂ ಅಲ್ಲಿ ಜನಸಂಚಾರ ಇಲ್ಲ. ಕೆಲವು ಸೇತುವೆಗಳು ಶಿಥಿಲಗೊಂಡಿರುವಂಥದ್ದಿದೆ. ಪಾಳು ಬಿದ್ದಿರುವ ಬ್ರಿಜ್​​ಗಳೂ ಇವೆ. ಅಂಥವುಗಳನ್ನು ರದ್ದಿ ಎಂದು ಗುರುತಿಸಿ, ಹರಾಜು ಹಾಕುವುದಾಗಿ ಸರ್ಕಾರ ತಿಳಿಸಿದೆ. ಇತ್ತೀಚೆಗೆ ಬಿಹಾರದ ರೋಹ್ತಾಸ್​ ಜಿಲ್ಲೆಯಲ್ಲಿ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನು ಕಳ್ಳರು ಕದ್ದಿದ್ದರು. ಅದೊಂದು ಅರ್ಧಂಬರ್ಧ ಹಾಳಾದ ಕಬ್ಬಿಣದ ಸೇತುವೆ. ಅದಕ್ಕೆ ಬಳಕೆಯಾಗಿದ್ದ ಎಲ್ಲ ವಸ್ತುಗಳನ್ನೂ ಕಳವು ಮಾಡಲಾಗಿತ್ತು. ಅದರಿಂದ ಎಚ್ಚೆತ್ತಿಕೊಂಡಿರುವ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಹೀಗೆ ಪಾಳುಬಿದ್ದ, ಅರ್ಧಂಬರ್ಧ ಶಿಥಿಲವಾಗಿರುವ ಎಲ್ಲ ಸೇತುವೆಗಳನ್ನೂ ಗುರುತಿಸಿ, ಹರಾಜಿಗೆ ವ್ಯವಸ್ಥೆ ಮಾಡಿ ಎಂದು ಎಲ್ಲ ವಿಭಾಗೀಯ ಎಂಜಿನಿಯರ್​​ಗಳಿಗೆ ಜಲ ಸಂಪನ್ಮೂಲ ಇಲಾಖೆ ಸೂಚನೆ ನೀಡಿದೆ. 

ಈ ಬಗ್ಗೆ ಬಿಹಾರದ ಸಂಪನ್ಮೂಲ ಸಚಿವ ಸಂಜಯ್​ ಕುಮಾರ್ ಝಾ ಮಾತನಾಡಿ, 60 ಅಡಿ ಉದ್ದದ ಸೇತುವೆ ಕಳವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾವು ಇಬ್ಬರು ಎಂಜಿನಿಯರ್​​ಗಳನ್ನು ಅಮಾನತು ಮಾಡಿದ್ದೇವೆ. ಹಾಗೇ, ಮುಖ್ಯ ಎಂಜಿನಿಯರ್​ ಮತ್ತು ಸೂಪರಿಂಟೆಂಡಿಂಗ್ ಎಂಜಿನಿಯರ್​ಗಳಿಗೆ ಶೋಕಾಸ್​ ನೋಟಿಸ್​ ನೀಡಿದ್ದೇವೆ. ಮುಂದೆ ಇಂಥ ಘಟನೆ ನಡೆಯಬಾರದು ಎಂದು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಪ್ರತಿ ಜಿಲ್ಲೆಗಳಲ್ಲೂ ಇರುವ, ಬಳಕೆಯಾಗದ ಸೇತುವೆಗಳನ್ನು ಹರಾಜು ಹಾಕಲಾಗುವುದು ಎಂದು ಮಾಹಿತಿ ನೀಡಿದ್ದಾರೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಬಿಹಾರದಲ್ಲಿ ಹೀಗೆ ಹಾಳಾದ, ಬಳಕೆಯಾಗದ ಸೇತುವೆಗಳ ಸಂಖ್ಯ ಎಷ್ಟಿರಬಹುದು ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ನಮ್ಮ ಎಂಜಿನಿಯರ್​ಗಳು ಅದನ್ನು ಲೆಕ್ಕ ಹಾಕುತ್ತಿದ್ದಾರೆ. ರೋಹ್ತಾಸ್​ ಜಿಲ್ಲೆಯಲ್ಲಿ ನಡೆದ ಘಟನೆ ಸಂಬಂಧಿಸಿ ಎಂಟು ಮಂದಿಯನ್ನು ಬಂಧಿಸಲಾಗಿದೆ.  ಏಪ್ರಿಲ್​ 4ರಂದು ಕಳವಾದ ಬ್ರಿಡ್ಜ್​ 1972ರಲ್ಲಿ ಕಟ್ಟಿದ್ದಾಗಿತ್ತು. 2002ರಿಂದಲೂ ಈ ಸೇತುವೆ ಬಳಕೆಯಾಗುತ್ತಿರಲಿಲ್ಲ. ಅದಕ್ಕೆ ಸಮಾನಾಂತರವಾಗಿ ಸ್ವಲ್ಪ ದೂರದಲ್ಲಿ ಹೊಸ ಸೇತುವೆ ಕಟ್ಟಿದ್ದರಿಂದ ಇದು ಸಹಜವಾಗಿ ಪಾಳುಬಿದ್ದಿತ್ತು ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿಹಾರ: ಸರ್ಕಾರಿ ಅಧಿಕಾರಿಗಳಂತೆ ನಟಿಸಿ 60 ಅಡಿ ಉದ್ದದ ಸೇತುವೆಯನ್ನೇ ಕದ್ದ ಕಳ್ಳರು; ಹಾಡುಹಗಲೇ ನಡೆಯಿತು ಲೂಟಿ! 

Published On - 8:29 am, Wed, 13 April 22