ನನಗೆ ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ಆಸಕ್ತಿ ಮೂಡಿಸಿದ್ದು ಸಂಗೀತ; ಇಂಟರೆಸ್ಟಿಂಗ್ ವಿಚಾರ ತಿಳಿಸಿದ ಸಚಿವ ಎಸ್.ಜೈಶಂಕರ್
ನಾನು ಮೊದಲ ಬಾರಿಗೆ ಅಮೆರಿಕನ್ ಸಂಗೀತ ಕೇಳಿದ್ದು 1959ರಲ್ಲಿ. ಅದು ಅಮೆರಿಕದ ಅಲ್ಬಮ್ ಹಿಟ್ಮೇಕರ್ಸ್ದ್ದಾಗಿತ್ತು.ನನಗೆ ಅದು ಈಗಲೂ ತುಂಬ ಇಷ್ಟ. ಆಗಾಗ ಕೇಳುತ್ತಿರುತ್ತೇನೆ ಎಂದೂ ಜೈಶಂಕರ್ ಹೇಳಿದ್ದಾರೆ.
ದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಈ ಸ್ಥಾನಕ್ಕೆ ಏರುವುದಕ್ಕೂ ಮೊದಲು ರಾಜತಾಂತ್ರಿಕ ಕ್ಷೇತ್ರದಲ್ಲಿ ಸುದೀರ್ಘ ಕಾಲದಿಂದ ವೃತ್ತಿಯಲ್ಲಿ ಇದ್ದವರು. ರಾಜತಾಂತ್ರಿಕ ವಿಭಾಗದಲ್ಲಿರುವ ಅವರ ಗಟ್ಟಿ ಅನುಭವದ ಕಾರಣದಿಂದಲೇ ಸುಷ್ಮಾ ಸ್ವರಾಜ್ ಬಳಿಕ ಆ ಹುದ್ದೆಗೆ ಏರಲು ಸಾಧ್ಯವಾಯಿತು ಎಂದು ಅನೇಕರು ಹೇಳುತ್ತಾರೆ. ಆದರೆ ಇದರೊಂದಿಗೆ ಇನ್ನೊಂದು ಕುತೂಹಲಕಾರಿ ವಿಚಾರವನ್ನು ಅವರು ತಿಳಿಸಿದ್ದಾರೆ. ತಮಗೆ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಆಸಕ್ತಿ ಹುಟ್ಟಲು, ಅದನ್ನು ಹೆಚ್ಚಿಸಲು ಸಂಗೀತವೂ ಕಾರಣ ಎಂದು ಎಸ್.ಜೈಶಂಕರ್ ತಿಳಿಸಿದ್ದಾರೆ. ವಾಷಿಂಗ್ಟನ್ ಡಿಸಿಯ ಹೊವಾರ್ಡ್ ವಿಶ್ವ ವಿದ್ಯಾಲಯದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅವರು ಅಲ್ಲಿನ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸುತ್ತ ಈ ಇಂಟರೆಸ್ಟಿಂಗ್ ವಿಷಯ ಬಿಚ್ಚಿಟ್ಟಿದ್ದಾರೆ.
‘ನನ್ನಲ್ಲಿ ಇಡೀ ವಿಶ್ವದ ಬಗ್ಗೆ ಕುತೂಹಲ, ಆಸಕ್ತಿ ಮೂಡಿಸಿದ್ದು ಸಂಗೀತ. ಅದು ಹೇಗೆ ಎಂಬ ಪ್ರಶ್ನೆ ಏಳುತ್ತದೆ. ಭಾರತದಲ್ಲಿರುವ ವಿವಿಧ ಪ್ರಕಾರದ ಸಂಗೀತದ ಹೊರತಾಗಿಯೂ ನಾನು ಬೇರೆಬೇರೆ ದೇಶಗಳ ಸಂಗೀತವನ್ನು ಕೇಳುತ್ತಿದ್ದೆ. ಅದರ ರಾಗ, ಗಾಯನವನ್ನು ನೋಡಿ ಕೇಳುತ್ತಿದ್ದೆ ಹೊರತು ನನಗೆ ಅದ್ಯಾವ ದೇಶದ್ದು, ಯಾವ ಪ್ರಕಾರದ್ದು ಎಂಬ ಬಗ್ಗೆ ಮಾಹಿತಿ ಇರುತ್ತಿರಲಿಲ್ಲ. ಆದರೆ ಒಮ್ಮೆ ಕೇಳಿದ ಮೇಲೆ ನನಗೆ ಕುತೂಹಲ ಮೂಡುತ್ತಿತ್ತು. ಇಂಥ ಸಂಗೀತ, ಹಾಡು ಯಾವ ರಾಷ್ಟ್ರದ್ದಿರಬಹುದು, ಎಲ್ಲಿಯದ್ದಾಗಿರಬಹುದು, ಯಾವ ಜನಾಂಗದ ಸಾಂಪ್ರಾದಾಯಿಕ ಹಾಡು ಇದಾಗಿರಬಹುದು ಎಂಬ ಪ್ರಶ್ನೆ ನನ್ನಲ್ಲಿ ಮೂಡುತ್ತಿತ್ತು. ಅದರ ಬಗ್ಗೆ ನಾನು ಸರ್ಚ್ ಮಾಡುತ್ತಿದ್ದೆ. ಮಾಹಿತಿ ಸಂಗ್ರಹಕ್ಕೆ ಮುಂದಾಗುತ್ತಿದ್ದೆ. ಇದೇ ನನ್ನಲ್ಲಿ ಅಂತಾರಾಷ್ಟ್ರೀಯ ಸಂಬಂಧದ ಬಗೆಗಿನ ಆಸಕ್ತಿಯನ್ನೂ ಮೂಡಿಸಿತು’ ಎಂದು ಜೈಶಂಕರ್ ಹೇಳಿದ್ದಾರೆ.
ನಾನು ಮೊದಲ ಬಾರಿಗೆ ಅಮೆರಿಕನ್ ಸಂಗೀತ ಕೇಳಿದ್ದು 1959ರಲ್ಲಿ. ಅದು ಅಮೆರಿಕದ ಅಲ್ಬಮ್ ಹಿಟ್ಮೇಕರ್ಸ್ದ್ದಾಗಿತ್ತು.ನನಗೆ ಅದು ಈಗಲೂ ತುಂಬ ಇಷ್ಟ. ಆಗಾಗ ಕೇಳುತ್ತಿರುತ್ತೇನೆ ಎಂದೂ ಜೈಶಂಕರ್ ಹೇಳಿದ್ದಾರೆ. ಹೀಗೆ ವಿಶ್ವದ ಬಗ್ಗೆ ಆಸಕ್ತಿ ಮೂಡಲು ಸಂಗೀತವನ್ನು ಬಿಟ್ಟರೆ ಕಾರಣವಾಗಿದ್ದು ತಿಂಡಿಗಳು ಮತ್ತು ನನ್ನ ಕುಟುಂಬದ ವಾತಾವರಣ. ನನ್ನ ಕುಟುಂಬದಲ್ಲಿಯೇ ಸ್ವಲ್ಪ ಮಟ್ಟಿಗೆ ಅಂತಾರಾಷ್ಟ್ರೀಯ ವಾತಾವರಣವಿತ್ತು. ನಾನು 10 ವರ್ಷದವನಿದ್ದಾಗ ನನ್ನ ತಂದೆ ಅಮೆರಿಕಕ್ಕೆ ಫೆಲೋಶಿಪ್ಗೆ ಬಂದರು. ಇದೂ ಕೂಡ ನನ್ನ ಮೇಲೆ ಪ್ರಭಾವ ಬೀರಿತು ಎಂದು ಹೇಳಿದ್ದಾರೆ. ಹಾಗೇ, ಆಹಾರ ಕೊನೇ ಸ್ಥಾನದಲ್ಲಿದೆ. ಯೂನಿವರ್ಸಿಟಿ, ಶಾಲಾ-ಕಾಲೇಜುಗಳಲ್ಲಿ ವಿದೇಶಿ ವಿಚಾರಕ್ಕೆ ಸಂಬಂಧಪಟ್ಟು ಯಾವುದೇ ಕಾರ್ಯಕ್ರಮಗಳಿದ್ದರೂ ನನಗೆ ಅದರಲ್ಲಿ ತುಂಬ ಉತ್ಸಾಹ ಇರುತ್ತಿತ್ತು ಎಂದೂ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: Ambati Rayudu Catch: ಅತ್ಯದ್ಭುತ ಕ್ಯಾಚ್ ಪಡೆದು ಎಲ್ಲರನ್ನೂ ದಂಗಾಗಿಸಿದ ಅಂಬಾಟಿ ರಾಯುಡು; ಇಲ್ಲಿದೆ ವಿಡಿಯೋ