Ambati Rayudu Catch: ಅತ್ಯದ್ಭುತ ಕ್ಯಾಚ್ ಪಡೆದು ಎಲ್ಲರನ್ನೂ ದಂಗಾಗಿಸಿದ ಅಂಬಾಟಿ ರಾಯುಡು; ಇಲ್ಲಿದೆ ವಿಡಿಯೋ

Ambati Rayudu Catch: ಅತ್ಯದ್ಭುತ ಕ್ಯಾಚ್ ಪಡೆದು ಎಲ್ಲರನ್ನೂ ದಂಗಾಗಿಸಿದ ಅಂಬಾಟಿ ರಾಯುಡು; ಇಲ್ಲಿದೆ ವಿಡಿಯೋ
ಅಂಬಾಟಿ ರಾಯುಡು ಹಿಡಿದ ಅದ್ಭುತ ಕ್ಯಾಚ್

CSK vs RCB | Dinesh Karthik | Akash Deep: ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯದಲ್ಲಿ ಅಂಬಾಟಿ ರಾಯುಡು ಹಿಡಿದ ಕ್ಯಾಚ್ ಒಂದು ಸಖತ್ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ.

TV9kannada Web Team

| Edited By: shivaprasad.hs

Apr 13, 2022 | 11:45 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಂಗಳವಾರ ನಡೆದ ಪಂದ್ಯ (IPL 2022) ಹೈಸ್ಕೋರಿಂಗ್ ಕದನಕ್ಕೆ ಸಾಕ್ಷಿಯಾಯಿತು. ಚೆನ್ನೈ ಹಾಗೂ ಬೆಂಗಳೂರು ನಡುವೆ ಯಾವಾಗಲೂ ರೋಚಕ ಹಣಾಹಣಿ ಏರ್ಪಡುತ್ತದೆ. ಮಂಗಳವಾರದ ಪಂದ್ಯ ಕೂಡ ಅದಕ್ಕೆ ಹೊರತಾಗಿರಲಿಲ್ಲ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಫಾಫ್ ಡು ಪ್ಲೆಸಿಸ್ ಬಳಗಕ್ಕೆ ನಿರೀಕ್ಷೆಯಂತೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಮಾಜಿ ಆರ್​ಸಿಬಿ ಆಟಗಾರರಾದ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಚೆನ್ನೈ 4 ವಿಕೆಟ್ ನಷ್ಟಕ್ಕೆ 216 ರನ್ ಪೇರಿಸಿತ್ತು. ಆರ್​ಸಿಬಿ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕವಿದ್ದರೂ ದೊಡ್ಡ ಜತೆಯಾಟ ಮೂಡಿಬರದ ಕಾರಣ ಸೋಲಬೇಕಾಯಿತು. ಸಿಎಸ್​ಕೆ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತುಂಬುವಂತೆ ಅಂಬಾಟಿ ರಾಯುಡು (Ambati Rayudu Catch) ಹಿಡಿದ ಕ್ಯಾಚ್ ಒಂದು ಸಖತ್ ಸುದ್ದಿಯಾಗಿದೆ.

16ನೇ ಓವರ್​ನಲ್ಲಿ 9ನೇ ಕ್ರಮಾಂಕದಲ್ಲಿ ಆಡಲಿಳಿದ ಆಕಾಶ್ ದೀಪ್ ಬ್ಯಾಟಿಂಗ್ ಮಾಡುತ್ತಿದ್ದರು. ಬೌಲಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಗುಡ್ ಲೆಂತ್ ಬಾಲ್ ಎಸೆದರು. ಆಕಾಶ್ ದೀಪ್ ಅದನ್ನು ತುಸುವೇ ಮುಂದಕ್ಕೆ ಹೊಡೆದರು. ಶಾರ್ಟ್ ಕವರ್​ನಲ್ಲಿದ್ದ ಅಂಬಾಟಿ ರಾಯುಡು ತಮ್ಮ ಇಡೀ ದೇಹವನ್ನು ಬಾಗಿಸಿ ಮುಂದಕ್ಕೆ ಜಿಗಿದು ಅದ್ಭುತ ಕ್ಯಾಚ್ ಪಡೆದರು. ಈ ಅದ್ಭುತ ಕ್ಯಾಚ್​ಗೆ ಒಂದು ಕ್ಷಣ ಎಲ್ಲರೂ ಅವಾಕ್ಕಾದರು.

ರಾಯುಡು ಪಡೆದ ಅದ್ಭುತ ಕ್ಯಾಚ್​ನ ವಿಡಿಯೋ ಇಲ್ಲಿದೆ:

ಚೆನ್ನೈ ನೀಡಿದ 217 ರನ್​ಗಳನ್ನು ಗುರಿಯನ್ನು ತಲುಪಲು ಆರ್​ಸಿಬಿಗೆ ಸಾಧ್ಯವಾಗಲಿಲ್ಲ. ಮೊದಲ ಮೂರು ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯ ದೊಡ್ಡ ಹೊಡೆತ ನೀಡಿತು. ಫಾಫ್ ಕಪ್ತಾನನಾಗಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದರೂ ಬ್ಯಾಟಿಂಗ್​ನಿಂದ ಮೊದಲ ಪಂದ್ಯದ ಹೊರತಾಗಿ ದೊಡ್ಡ ಇನ್ನಿಂಗ್ಸ್ ಬಂದಿಲ್ಲ. ಅನುಜ್ ರಾವತ್ ಹೊಸಬರು. ಅವರಿಂದ ಸತತವಾಗಿ ಉತ್ತಮ ಇನ್ನಿಂಗ್ಸ್ ನೀಡಲು ಸಾಧ್ಯವಾಗುತ್ತಿಲ್ಲ. ಸಿಎಸ್​ಕೆ ಮಾಸ್ಟರ್​ ಪ್ಲಾನ್​ಗೆ ವಿರಾಟ್ ಕೊಹ್ಲಿ ಕೂಡ ಬೇಗ ವಿಕೆಟ್ ಒಪ್ಪಿಸಿದರು.

ನಂತರ ಬಂದ ಸುಯಶ್ ಪ್ರಭುದೇಸಾಯಿ, ಶಹ್ಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ ಹೊಡೆಬಡಿ ಆಟವಾಡಿದರೂ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಒಂದು ಜತೆಯಾಟ ಉತ್ತಮವಾಗುತ್ತಿದೆ ಎನ್ನುವಾಗಲೇ ತಂಡವು ವಿಕೆಟ್​ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಬ್ಯಾಟಿಂಗ್​ನಲ್ಲಿ ಸದ್ದು ಮಾಡದ ಜಡೇಜಾ ಬೌಲಿಂಗ್​ನಲ್ಲಿ ಉತ್ತಮ ನಿರ್ವಹಣೆ ನೀಡಿ 3 ವಿಕೆಟ್ ಪಡೆದರು. ಮಹೀಶ್ ತೀಕ್ಷಣ 4 ವಿಕೆಟ್ ಮೂಲಕ ಅರ್​ಸಿಬಿ ಬ್ಯಾಟರ್​ಗಳಿಗೆ ಸಿಂಹಸ್ವಪ್ನವಾದರು. ಪರಿಣಾಮವಾಗಿ ಆರ್​ಸಿಬಿ 23 ರನ್​ಗಳ ಅಂತರದಿಂದ ಸೋಲು ಕಂಡಿತು.

ಈ ಜಯದ ಮೂಲಕ ಚೆನ್ನೈ ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆದಿದೆ. ಜತೆಗೆ ಈ ಪಂದ್ಯಾವಳಿಯ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಆರ್​ಸಿಬಿಗೆ ಸೋಲುಣಿಸಿದ್ದು, ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಚಿಂತೆ ಹೆಚ್ಚಿಸಿದ್ದ ಬೌಲಿಂಗ್ ವಿಭಾಗ ಲಯ ಕಂಡುಕೊಳ್ಳುತ್ತಿದ್ದು, ಮುಂದಿನ ಪಂದ್ಯಗಳಲ್ಲಿ ಇನ್ಷ್ಟು ಸುಧಾರಿಸುವ ನಿರೀಕ್ಷೆ ಇದೆ. ಇತ್ತ ಆರ್​ಸಿಬಿ ತಮ್ಮ ಪ್ರಮುಖ ವೇಗಿ ಹರ್ಷಲ್ ಪಟೇಲ್ ಕೊಡುಗೆಯನ್ನು ದೊಡ್ಡ ಮಟ್ಟದಲ್ಲಿ ಮಿಸ್ ಮಾಡಿಕೊಂಡಿತ್ತು. ಹರ್ಷಲ್ ಮರುಆಗಮನದ ನಂತರ ತಂಡ ಮತ್ತಷ್ಟು ಬಲಿಷ್ಠವಾಗಲಿದೆ.

ಇದನ್ನೂ ಓದಿ: CSK Vs RCB: ಸಿಎಸ್​ಕೆ ವಿರುದ್ಧ ರಾಯಲ್​ ಚಾಲೆಂಜರ್ಸ್​ಗೆ 23 ರನ್​ಗಳ ಸೋಲು; ಸ್ಟಾರ್​ಗಳೇ ತುಂಬಿರುವ ಆರ್​ಸಿಬಿ ಎಡವಿದ್ದೆಲ್ಲಿ?

IPL 2022: ಆರ್​ಸಿಬಿ- ಸಿಎಸ್​ಕೆ ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?

Follow us on

Related Stories

Most Read Stories

Click on your DTH Provider to Add TV9 Kannada