ಬುಡಕಟ್ಟು ಸಮುದಾಯಗಳ ಏಳ್ಗೆಗೆ ಕೇಂದ್ರದಿಂದ ‘ಆದಿ ಕರ್ಮಯೋಗಿ’ ಆಂದೋಲನ; 20 ಲಕ್ಷ ಜನರ ತಂಡ ಅಖಾಡಕ್ಕೆ
Aadi Karmayogi movement to develop tribal communities: ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆಂದು ಕೇಂದ್ರ ಸರ್ಕಾರ ಬಹಳ ಮಹತ್ವಾಕಾಂಕ್ಷೆಯಿಂದ ‘ಆದಿ ಕರ್ಮಯೋಗಿ’ ಎನ್ನುವ ದೊಡ್ಡ ಆಂದೋಲನವನ್ನೇ ಆರಂಭಿಸಿದೆ. ಇದರಲ್ಲಿ 20 ಲಕ್ಷ ಆದಿ ಕರ್ಮಯೋಗಿಗಳಿಗೆ ನುರಿತ ತರಬೇತಿ ನೀಡಿ ಅಖಾಡಕ್ಕೆ ಇಳಿಸಲಾಗುತ್ತದೆ. ರಾಷ್ಟ್ರಮಟ್ಟದ, ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ, ಬ್ಲಾಕ್ ಮಟ್ಟದ ತರಬೇತುದಾರರು ಆದಿ ಕರ್ಮಯೋಗಿಯಲ್ಲಿ ಕೈಸೇರಿಸಲಿದ್ದಾರೆ.

ನವದೆಹಲಿ, ಆಗಸ್ಟ್ 10: ದೇಶಾದ್ಯಂತ ಬುಡಕಟ್ಟು ಸಮುದಾಯಗಳ ಬಾಹುಳ್ಯ ಇರುವ ಒಂದು ಲಕ್ಷ ಗ್ರಾಮಗಳು ಹಾಗೂ 10 ಕೋಟಿಗೂ ಅಧಿಕ ಬುಡಕಟ್ಟು ಜನರ ಏಳ್ಗೆ ದೃಷ್ಟಿಯಿಂದ ಕೇಂದ್ರ ಸರ್ಕಾರ (government) ಮಹತ್ವಾಕಾಂಕ್ಷಿ ಕೈಂಕರ್ಯಕ್ಕೆ ಕೈಹಾಕಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ‘ಆದಿ ಕರ್ಮಯೋಗಿ’ (Aadi Karmayogi) ಎನ್ನುವ ಆಂದೋಲನವನ್ನೇ ಆರಂಭಿಸಿದೆ. ಅಭಿವೃದ್ಧಿಯ ಫಲದಿಂದ ಸಾಕಷ್ಟು ವಂಚಿತರಾಗಿರುವ ಬುಡಕಟ್ಟು ಸಮುದಾಯಗಳನ್ನು ಅಭಿವೃದ್ಧಿಪಥದತ್ತ ತರುವುದು ಈ ಆಂದೋಲನದ ಉದ್ದೇಶವಾಗಿದೆ.
20 ಲಕ್ಷ ಕಾರ್ಯಕರ್ತರ ನಿಯೋಜನೆ…
ಆದಿ ಕರ್ಮಯೋಗಿ ಸರ್ಕಾರದ ಒಂದು ಸ್ಕೀಮ್ ಅಲ್ಲ, ಅದೊಂದು ಜನಾಂಲೋಲನ ಎಂದು ಬಣ್ಣಿಸಲಾಗಿದೆ. ತರಬೇತಿ ಪಡೆದ 20 ಲಕ್ಷ ಮಂದಿ ಉತ್ಸಾಹಿಗಳ ಪಡೆಯೊಂದನ್ನು ನಿರ್ಮಿಸುವುದು ಈ ಆಂದೋಲನದ ಪ್ರಮುಖ ಕಾರ್ಯಗಳಲ್ಲಿ ಒಂದು. ದೇಶಾದ್ಯಂತ 30 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, 550ಕ್ಕೂ ಅಧಿಕ ಜಿಲ್ಲೆಗಳು ಮತ್ತು 3,000 ಬ್ಲಾಕ್ಗಳಲ್ಲಿ ಒಂದು ಲಕ್ಷದಷ್ಟು ಬುಡಕಟ್ಟು ಗ್ರಾಮಗಳಲ್ಲಿ ಈ 20 ಲಕ್ಷ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. 10 ಕೋಟಿಗೂ ಅಧಿಕ ಬುಡಕಟ್ಟು ಸಮುದಾಯದವರನ್ನು ಮೇಲೆತ್ತುವ ಕಾರ್ಯದಲ್ಲಿ ಸಹಾಯವಾಗಲಿದ್ದಾರೆ. ಈ 20 ಲಕ್ಷ ಕಾರ್ಯಕರ್ತರನ್ನು ಆದಿ ಕರ್ಮಯೋಗಿಗಳೆಂದು ಕರೆಯಲಾಗಿದೆ. ಅವರ ಈ ಆಂದೋಲನದ ಕೇಂದ್ರಬಿಂದು ಮತ್ತು ಶಕ್ತಿ.
ಇದನ್ನೂ ಓದಿ: ಬಿಹಾರದ ಯಾವುದೇ ಮತದಾರರನ್ನು ಪೂರ್ವ ಸೂಚನೆ ಇಲ್ಲದೆ ಪಟ್ಟಿಯಿಂದ ತೆಗೆದುಹಾಕುವುದಿಲ್ಲ: ಚುನಾವಣಾ ಆಯೋಗ
ಯಾರಾಗಲಿದ್ದಾರೆ ಆದಿ ಕರ್ಮಯೋಗಿಗಳು?
ಸರ್ಕಾರಿ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಯುವ ಮುಖಂಡರು, ಶಿಕ್ಷಕರು, ಆರೋಗ್ಯ ಕಾರ್ಯಕರ್ತರು, ಸಮಾಜ ಸೇವಕರು, ಸಾಂಪ್ರದಾಯಿಕ ಜ್ಞಾನವಂತರು, ಸ್ವಯಂಸೇವಕರು ಮೊದಲಾದವರನ್ನು ಆದಿ ಕರ್ಮಯೋಗಿಗಳಾಗಿ ಆಯ್ಕೆ ಮಾಡಲಾಗುತ್ತದೆ. ಇವರೆಲ್ಲರೂ ನಿರ್ದಿಷ್ಟ ಉದ್ದೇಶಗಳನ್ನು ಈಡೇರಿಸಲು ಬುಡಕಟ್ಟು ಪ್ರದೇಶಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಸರ್ಕಾರದ ಯೋಜನೆಗಳ ಫಲ ಈ ಸಮುದಾಯವನ್ನು ತಲುಪವಂತೆ ನೋಡಿಕೊಳ್ಳುವುದು; ತಳಮಟ್ಟದಿಂದ ಇವರ ಏಳ್ಗೆಗೆ ಯೋಜಿಸುವುದು; ಇವರ ಸಂಸ್ಕೃತಿ ಮತ್ತು ಭಾಷೆಗಳನ್ನು ಉಳಿಸುವುದು; ಬುಡಕಟ್ಟು ಸಮುದಾಯಗಳು ಹಾಗೂ ಸರ್ಕಾರಿ ಸಂಸ್ಥೆಗಳ ನಡುವಿನ ಅಂತರವನ್ನು ನಿವಾರಿಸುವುದು ಇವೇ ಮುಂತಾದ ಜವಾಬ್ದಾರಿ ನಿಭಾಯಿಸುವುದು ಈ ಆದಿ ಕರ್ಮಯೋಗಿಗಳ ಗುರಿಯಾಗಿರುತ್ತದೆ.
ಆದಿ ಕರ್ಮಯೋಗಿಗಳಿಗೆ ಸಕಲ ತರಬೇತಿ
ಆದಿ ಕರ್ಮಯೋಗಿಗಳಿಗೆ ತರಬೇತಿ ನೀಡಲು ವಿನೂತನ ವ್ಯವಸ್ಥೆ ಮಾಡಿದೆ ಸರ್ಕಾರ. ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ಗಳು, ಜಿಲ್ಲಾ ಮಟ್ಟದ ಟ್ರೈನರ್ಗಳು, ಬ್ಲಾಕ್ ಮಟ್ಟದ ಮಾಸ್ಟರ್ ಟ್ರೈನರ್ಗಳನ್ನು ಅಣಿಗೊಳಿಸಲಾಗುತ್ತಿದೆ.
ಇದನ್ನೂ ಓದಿ: ರೈತರ ಹಿತರಕ್ಷಣೆಗೆ ಪ್ರಧಾನಿ ಮೋದಿಗಿರುವ ಬದ್ಧತೆಯನ್ನು ಮೆಚ್ಚಿದ ಮಾಜಿ ಡಬ್ಲ್ಯುಎಚ್ಒ ಡಿಡಿಜಿ ಸೌಮ್ಯಾ ಸ್ವಾಮಿನಾಥನ್
210 ರಾಜ್ಯಮಟ್ಟದ ಮಾಸ್ಟರ್ ಟ್ರೈನರ್ಗಳಿರುತ್ತಾರೆ. ಇವರಿಗೆ ಆರು ಪ್ರಾದೇಶಿಕ ಪ್ರೋಸಸ್ ಲ್ಯಾಬ್ಗಳಲ್ಲಿ ಏಳು ದಿನಗಳ ಅವಧಿ ತರಬೇತಿ ನೀಡಲಾಗುತ್ತದೆ. ನಾಯಕತ್ವ, ಡಿಜಿಟಲ್ ಪರಿಕರ ಇತ್ಯಾದಿ ತರಬೇತಿಯನ್ನು ಇವರಿಗೆ ನೀಡಲಾಗುತ್ತದೆ.
2,750 ಜಿಲ್ಲಾ ಮಟ್ಟದ ಟ್ರೈನರ್ಗಳನ್ನು ಸಿದ್ಧಗೊಳಿಸಲಾಗುತ್ತದೆ. ಜೊತೆಗೆ, ಪ್ರತೀ ಜಿಲ್ಲೆಯಿಂದಲೂ 50ಕ್ಕೂ ಅಧಿಕ ಚೇಂಜ್ ಏಜೆಂಟ್ಗಳಿಗೆ ತರಬೇತಿ ಕೊಡಲಾಗುತ್ತದೆ. 15,000 ಬ್ಲಾಕ್ ಮಟ್ಟದ ತರಬೇತುದಾರರಿಗೂ ಟ್ರೈನಿಂಗ್ ಕೊಡಲಾಗುತ್ತದೆ.
ಈ ವ್ಯವಸ್ಥಿತ ರೀತಿಯಲ್ಲಿ ರೂಪಿಸಲಾಗಿರುವ ಜನರ ತಂಡವು ತಳಮಟ್ಟದಿಂದ ಬುಡಕಟ್ಟು ಸಮುದಾಯದವರಲ್ಲಿ ಬದಲಾವಣೆ ತರುವ ಕೆಲಸ ಮಾಡಲಿದೆ. ಎಲ್ಲವೂ ಯೋಜಿತವಾಗಿ ಮತ್ತು ಆಧುನಿಕ ಪರಿಕರಗಳ ಮೂಲಕವಾಗಿ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




