ಗುಡ್ ನ್ಯೂಸ್: ಶುಗರ್, ಹೃದ್ರೋಗ ಸೇರಿ 41 ಔಷಧಿಗಳ ಬೆಲೆ ಕಡಿತಗೊಳಿಸಿದ ಕೇಂದ್ರ
Medicines prices: ಮಧುಮೇಹ, ಹೃದ್ರೋಗ ಮತ್ತು ಯಕೃತ್ತಿನ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸುವ 41 ಔಷಧಿಗಳ ಬೆಲೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಅತಿ ಹೆಚ್ಚು ಬೇಡಿಕೆ ಇರುವ ಔಷಧಗಳ ಬೆಲೆ ಇಳಿಕೆ (Medicine Price) ಮಾಡಿ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (NPPA) ಆದೇಶ ಹೊರಡಿಸಿದೆ. ಹಾಗಾದ್ರೆ, ಯಾವುವು ಔಷಧಿ ಬೆಲೆ ಕಡಿಮೆಯಾಗಿದೆ ಎನ್ನುವ ವಿವರ ಇಲ್ಲಿದೆ.
ನವದೆಹಲಿ, (ಮೇ 16): ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್‌ಗಳ ಬೆಲೆಯನ್ನು ಕೇಂದ್ರ ಸರ್ಕಾರ (Central Government) ಇಳಿಸಿದೆ. ಹೃದ್ರೋಗ , ಮಧುಮೇಹ, ಮೈಕೈ ನೋವು, ಹೃದಯರಕ್ತನಾಳದ ಕಾಯಿಲೆಗಳು, ಯಕೃತ್ತಿನ ಸಮಸ್ಯೆಗಳು, ಆಂಟಾಸಿಡ್‌ಗಳು, ಸೋಂಕುಗಳು, ಅಲರ್ಜಿಗಳು, ಮಲ್ಟಿವಿಟಮಿನ್‌ಗಳು ಮತ್ತು ಆಂಟಿಬಯೋಟಿಕ್‌ಗಳಿಗೆ ಮೀಸಲಾದ ಔಷಧಿಗಳ ಬೆಲೆಗಳನ್ನು ಔಷಧೀಯ ಮತ್ತು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ (NPPA) ಅಧಿಸೂಚನೆಯ ಪ್ರಕಾರ ಕಡಿತಗೊಳಿಸಿ ಆದೇಶ ಹೊರಡಿಸಿದೆ.
ಯಾವ ಕಾಯಿಲೆಗಳ ಔಷಧ ಬೆಲೆ ಇಳಿಕೆ?
ಸಾರ್ವಜನಿಕರಿಗೆ ಅನುಕೂಲವಾಗುವ ಔಷಧಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಬೆಲೆ ಇಳಿಕೆಯು ಒಂದು ನಿಯಮಿತ ಪ್ರಕ್ರಿಯೆಯಾಗಿದ್ದು, ಪ್ರಾಧಿಕಾರವು ಅದನ್ನು ಅನುಸರಿಸಿದೆ” ಎಂದು ಎನ್‌ಪಿಪಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ರಕ್ತದ ಗ್ಲುಕೋಸ್ ಕಡಿಮೆಯಾದಾಗ ಬಳಿಸುವ Dapagliflozin Metformin Hydrochlorideಗೆ ಮೊದಲು 30 ರೂ. ಇತ್ತು. ಈಗ ಅದಕ್ಕೆ 16 ರೂ. ನಿಗದಿಪಡಿಸಲಾಗಿದೆ. ಅಸ್ತಮಾ ಹಾಗೂ ಶ್ವಾಸಕೋಶದ ಸಮಸ್ಯೆ ಇದ್ದವರು ತೆಗೆದುಕೊಳ್ಳವ ಬ್ಯೂಡ್‌ಸೊನೈಡ್ ಹಾಗೂ ಫಾರ್ಮೊಟೆರೋಲ್‌ನ ಒಂದು ಡೋಸ್ ಬೆಲೆಯನ್ನು 6.62 ರೂ.ಗೆ ಇಳಿಕೆ ಮಾಡಲಾಗಿದೆ.
ಇದನ್ನೂ ಓದಿ: Kerala: ಬೆರಳಿನ ಶಸ್ತ್ರಚಿಕಿತ್ಸೆ ಬದಲಿಗೆ ತಪ್ಪಾಗಿ ಮಗುವಿನ ನಾಲಿಗೆ ಆಪರೇಷನ್ ಮಾಡಿದ ವೈದ್ಯರು
ಸಕ್ಕರೆ ಕಾಯಿಲೆ ಮಾತ್ರೆ, ಇನ್ಸುಲಿನ್ ಬೆಲೆ ಕಡಿತ
ಮಧುಮೇಹ, ಹೃದ್ರೋಗ, ಯಕೃತ್ತಿನ ಸಮಸ್ಯೆ, ಆ್ಯಂಟಿಬಯೋಟಿಕ್ಸ್, ಮಲ್ಟಿ ವಿಟಮಿನ್ ಸೇರಿ ಹಲವು ಔಷಧಗಳ ಬೆಲೆಯನ್ನು ಎನ್‌ಪಿಪಿಎ ಇಳಿಕೆ ಮಾಡಿದೆ. ಭಾರತದಲ್ಲಿ 10 ಕೋಟಿಗೂ ಅಧಿಕ ಜನ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚು ಮಧುಮೇಹಿಗಳು ಇರುವ ದೇಶಗಳಲ್ಲಿ ಭಾರತವೂ ಸೇರಿದೆ. ಹಾಗಾಗಿ, ಸಕ್ಕರೆ ಕಾಯಿಲೆಗೆ ಬಳಸುವ ಮಾತ್ರೆಗಳು ಹಾಗೂ ಇನ್ಸುಲಿನ್‌ಗಳ ಬೆಲೆಯನ್ನು ಇಳಿಕೆ ಮಾಡಿರುವುದು ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ.
ಕೆಲ ತಿಂಗಳ ಹಿಂದಷ್ಟೇ ಔಷಧಗಳ ಬೆಲೆ ಏರಿಕೆ ಕುರಿತು ವದಂತಿಗಳು ಹರಡಿದ್ದವು. ಆದರೆ, ಕೇಂದ್ರ ಸರ್ಕಾರವು ಇದನ್ನು ಅಲ್ಲಗಳೆದಿತ್ತು. ಏಪ್ರಿಲ್ 1ರಿಂದ 500ಕ್ಕೂ ಅಧಿಕ ಔಷಧಗಳ ಬೆಲೆಯಲ್ಲಿ ಶೇ.12ರಷ್ಟು ಬೆಲೆ ಏರಿಕೆಯಾಗಿದೆ ಎಂಬ ವದಂತಿಗಳು ವರದಿಗಳು ಸತ್ಯಕ್ಕೆ ದೂರವಾಗಿವೆ. ಜನರ ಹಾದಿ ತಪ್ಪಿಸಲು ಇಂತಹ ವರದಿಗಳನ್ನು ಹರಿಬಿಡಲಾಗಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು ಸಗಟು ಬೆಲೆ ಸೂಚ್ಯಂಕದ ಆಧಾರದ ಬೆಲೆ ಏರಿಕೆ ಮಾಡುತ್ತದೆ. ಆದರೆ, 782 ಔಷಧಗಳ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಇನ್ನು ಸುಮಾರು 54 ಔಷಧಗಳ ಬೆಲೆಯು ಒಂದು ಪೈಸೆ ಮಾತ್ರ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿತ್ತು. ಇದರ ಬೆನ್ನಲ್ಲೇ, ಅಗತ್ಯ ಔಷಧಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:40 pm, Thu, 16 May 24