Kerala: ಬೆರಳಿನ ಶಸ್ತ್ರಚಿಕಿತ್ಸೆ ಬದಲಿಗೆ ತಪ್ಪಾಗಿ ಮಗುವಿನ ನಾಲಿಗೆ ಆಪರೇಷನ್ ಮಾಡಿದ ವೈದ್ಯರು
ಮಗುವಿನ ಸಂಬಂಧಿಕರ ಹೇಳಿಕೆಯ ಪ್ರಕಾರ, ಮಗುವಿನ ಒಂದು ಕೈಯಲ್ಲಿ ಆರು ಬೆರಳುಗಳಿದ್ದ ಕಾರಣ ಅದನ್ನು ತೆಗೆಸಲು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಂತೆ ಮಗುವಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಶಸ್ತ್ರಚಿಕಿತ್ಸೆಯ ಕೆಲ ಹೊತ್ತಿನ ಬಳಿಕ ಮಗುವನ್ನು ನೋಡಲು ಹೋದ ಪೋಷಕರಿಗೆ ಆಘಾತವಾಗಿದೆ.
ಕೋಝಿಕ್ಕೋಡ್, ಕೇರಳ: ಕೈ ಬೆರಳಿನ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಗುವಿಗೆ ತಪ್ಪಾಗಿ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರ ಎಡವಟ್ಟಿನ ಘಟನೆ ಕೋಝಿಕ್ಕೋಡ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ನಡೆದಿದೆ. ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರ ಈ ನಿರ್ಲಕ್ಷ್ಯಕ್ಕೆ ಮಗುವಿನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಗುವಿನ ಸಂಬಂಧಿಕರ ಹೇಳಿಕೆಯ ಪ್ರಕಾರ, ಮಗುವಿನ ಒಂದು ಕೈಯಲ್ಲಿ ಆರು ಬೆರಳುಗಳಿದ್ದ ಕಾರಣ ಅದನ್ನು ತೆಗೆಸಲು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಂತೆ ಮಗುವಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಶಸ್ತ್ರಚಿಕಿತ್ಸೆಯ ಕೆಲ ಹೊತ್ತಿನ ಬಳಿಕ ಮಗುವನ್ನು ನೋಡಲು ಹೋದ ಪೋಷಕರಿಗೆ ಆಘಾತವಾಗಿದೆ. ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವ ಬದಲಾಗಿ ವೈದ್ಯರು ಮಗುವಿನ ಬಾಯಿಗೆ ಪ್ಲಾಸ್ಟರ್ ಹಾಕಿ ಕಳುಹಿಸಿದ್ದಾರೆ. ಮಗುವಿನ ಕೈಯನ್ನು ಪರೀಕ್ಷಿಸಿದಾಗ ಆರನೇ ಬೆರಳು ಹಾಗೆಯೇ ಇತ್ತು. ಕೆಲ ಹೊತ್ತಿನ ಬಳಿಕ ಬೆರಳಿನ ಆಪರೇಷನ್ ಬದಲಾಗಿ ತಪ್ಪಾಗಿ ವೈದ್ಯರು ನಾಲಿಗೆ ಆಪರೇಷನ್ ಮಾಡಿರುವುದು ತಿಳಿದುಬಂದಿದೆ.
ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಅಸಮಾಧಾನ ಹೊರ ಹಾಕುತ್ತಿದ್ದಂತೆ ವೈದ್ಯರು ಬಂದು ತಪ್ಪಿಗೆ ಕ್ಷಮೆಯಾಚಿಸಿದ್ದು, ಮತ್ತೆ ಮಗುವನ್ನು ಕರೆದುಕೊಂಡು ಹೋಗಿ ಬೆರಳಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ದ ಪೋಷಕರು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Thu, 16 May 24