ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿಗೆ ಅನಾರೋಗ್ಯ, ಶಸ್ತ್ರಚಿಕಿತ್ಸೆಗೊಳಗಾದ ನಟಿ
ಕರ್ನಾಟಕ ಮೂಲದ ಬಾಲಿವುಡ್ ಚೆಲುವೆ ಶಿಲ್ಪಾ ಶೆಟ್ಟಿಯ ಸಹೋದರಿ ಶಮಿತಾ ಶೆಟ್ಟಿಗೆ ಅನಾರೋಗ್ಯ ಉಂಟಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳ ಹೋಗುವ ಮುನ್ನ ಸಂದೇಶವೊಂದನ್ನು ಶಮಿತಾ ನೀಡಿದ್ದು, ಮಹಿಳೆಯರಿಗೆ ಜಾಗರೂಕರಾಗಿರುವಂತೆ ಹೇಳಿದ್ದಾರೆ.
ಕರ್ನಾಟಕ ಮೂಲದ ನಟಿ ಶಿಲ್ಪಾ ಶೆಟ್ಟಿ (Shilpa Shetty) ಬಾಲಿವುಡ್ (Bollywood) ಮಾತ್ರವಲ್ಲದೆ ದಕ್ಷಿಣ ಭಾರತದಲ್ಲಿಯೂ ಜನಪ್ರಿಯ ನಟಿ. ಅವರ ಸಹೋದರಿ ಶಮಿತಾ ಶೆಟ್ಟಿ ಸಹ ನಟಿಯೇ. ಶಮಿತಾ ಶೆಟ್ಟಿ ಅಕ್ಕನಂತೆ ದೊಡ್ಡ ಮಟ್ಟದಲ್ಲಿ ಮಿಂಚಲು ಸಾಧ್ಯವಾಗಲಿಲ್ಲವಾದರೂ ಬಾಲಿವುಡ್ನಲ್ಲಿ ತಕ್ಕಮಟ್ಟಿಗೆ ಹೆಸರು ಮಾಡಿದ್ದಾರೆ. ಸಿನಿಮಾಗಳು ಮಾತ್ರವೇ ಅಲ್ಲದೆ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಶಮಿತಾ ಶೆಟ್ಟಿ ಭಾಗಿಯಾಗಿದ್ದಾರೆ. ಇದೀಗ ನಟಿ ಶಮಿತಾ ಶೆಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮತ್ತು ತಮ್ಮ ಆರೋಗ್ಯ ಸ್ಥಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆಸ್ಪತ್ರೆಯ ಬೆಡ್ ಮೇಲೆ ಕುಳಿತು ವಿಡಿಯೋ ಒಂದನ್ನು ರೆಕಾರ್ಡ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಶಮಿತಾ ಶೆಟ್ಟಿ. ಈ ವಿಡಿಯೋನಲ್ಲಿ ತಮಗೆ ಬಂದಿರುವ ಖಾಯಿಲೆ, ಅದರ ಲಕ್ಷಣಗಳು ಚಿಕಿತ್ಸೆಗಳು ಇನ್ನಿತರೆ ವಿಷಯಗಳ ಬಗ್ಗೆ ಶಮಿತಾ ಮಾತನಾಡಿದ್ದಾರೆ. ವಿಡಿಯೋವನ್ನು ರೆಕಾರ್ಡ್ ಮಾಡಿರುವುದು ನಟಿ ಶಿಲ್ಪಾ ಶೆಟ್ಟಿ. ವಿಡಿಯೋನಲ್ಲಿ ಮಾತನಾಡಿರುವ ಶಮಿತಾ ಶೆಟ್ಟಿ ತಾವು ಎಂಡೋಮೆಟ್ರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಎಲ್ಲ ಮಹಿಳೆಯರು ಈ ಸಮಸ್ಯೆ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.
‘ಎಲ್ಲ ಮಹಿಳೆಯರು ದಯವಿಟ್ಟು ಎಂಡೋಮೆಟ್ರಿಯಾಸಿಸ್ ಎಂದರೇನು ಎಂದು ತಿಳಿದುಕೊಳ್ಳಿ, ಶೇ 40 ಮಹಿಳೆಯರಿಗೆ ಈ ಸಮಸ್ಯೆ ಇರುತ್ತದೆ. ಎಂಡೋಮೆಟ್ರಿಯಾಸಿಸ್ ತೀವ್ರ ನೋವು ಉಂಟು ಮಾಡುವ, ಡಿಸ್ ಕಂಫರ್ಟ್ ಮಾಡುವ ವ್ಯಾದಿ. ನಿಮ್ಮ ದೇಹದಲ್ಲಿ ಯಾವುದೇ ನೋವು ಕಾಣಿಸಿಕೊಂಡಾಗ ಅದನ್ನು ಗುರುತಿಸಿ ಅದರ ಮೂಲ ಹುಡುಕಿ, ದೇಹದ ಬಗ್ಗೆ ಧನಾತ್ಮಕವಾಗಿರಿ. ಎಷ್ಟೋ ಮಂದಿ ಮಹಿಳೆಯರಿಗೆ ಎಂಡೋಮೆಟ್ರಿಯಾಸಿಸ್ ಎಂದರೇನು ಎಂಬುದು ಸಹ ಗೊತ್ತಿಲ್ಲ. ಸಾಧ್ಯವಾದಷ್ಟು ಈ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ:Shilpa Shetty: ಮನೆ ಮುಟ್ಟುಗೋಲು ಬೆನ್ನಲ್ಲೇ ಕುಟುಂಬ ಸಮೇತ ದೈವದ ಮೊರೆ ಹೋದ ನಟಿ ಶಿಲ್ಪಾ ಶೆಟ್ಟಿ
‘ನನ್ನ ವೈದ್ಯರಾದ ನೀತಾ ವಾರ್ಟಿ ಮತ್ತು ಸುನಿತಾ ಬ್ಯಾನರ್ಜಿಗೆ ನಾನು ಧನ್ಯವಾದ ಹೇಳಲೇ ಬೇಕು. ಅವರು ನನ್ನ ನೋವಿಗೆ ಕಾರಣ ತಿಳಿಸಿಕೊಟ್ಟರು, ಸಮಸ್ಯೆಯ ಬೇರನ್ನು ನಹುಡುಕಿ ತೆಗೆದರು. ಈಗ ಶಸ್ತ್ರಚಿಕಿತ್ಸೆ ಮೂಲಕ ಆ ಸಮಸ್ಯೆಯನ್ನು ಬೇರಿನಿಂದಲೇ ಕತ್ತರಿಸಿ ತೆಗೆಯಲಿದ್ದಾರೆ. ನಾನು ಅವರಿಗೆ ಆಭಾರಿಯಾಗಿದ್ದೇನೆ’ ಎಂದಿದ್ದಾರೆ ಶಮಿತಾ. ಸಹ ನಟಿಯ ವಿಡಿಯೋಕ್ಕೆ ನಟಿಯರಾದ ಬಿಪಾಷಾ ಬಸು, ದಿಯಾ ಮಿರ್ಜಾ ಇನ್ನೂ ಹಲವು ನಟಿಯರು ಪ್ರತಿಕ್ರಿಯಿಸಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ.
ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಇನ್ನಿತರ ದಿಗ್ಗಜರು ನಟಿಸಿರುವ ‘ಮೊಹಬತ್ತೇನ್’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದ ಶಮಿತಾ ಶೆಟ್ಟಿ ಆರಂಭದಲ್ಲಿ ಭರವಸೆ ಮೂಡಿಸಿದ್ದರು. ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಸಹ ಶಮಿತಾ ಶೆಟ್ಟಿ ನಟಿಸಿದ್ದರು. ಆದರೆ ಕೇವಲ 8 ವರ್ಷಗಳ ಕಾಲ ಮಾತ್ರ ಅವರ ಚಾರ್ಮ್ ನಡೆಯಿತು. 2008ರ ಬಳಿಕ ಚಿತ್ರರಂಗದಿಂದ ಅಚಾನಕ್ಕಾಗಿ ದೂರಾದರು. ಆ ಬಳಿಕ ಬಿಗ್ಬಾಸ್, ಝಲಕ್ ದಿಕ್ಲಾಜಾ, ಸೇರಿದಂತೆ ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಇದೀಗ 2023 ರಲ್ಲಿ ಮತ್ತೆ ಕಮ್ ಬ್ಯಾಕ್ ಮಾಡಿ ‘ದಿ ಕೆನೆಂಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದರು. ಕೆಲವು ವೆಬ್ ಸರಣಿಗಳಲ್ಲಿಯೂ ಸಹ ಶಮಿತಾ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:55 am, Thu, 16 May 24