‘ನನ್ನ ಮದುವೆ ಆಗ್ತೀಯಾ’: ಈ ನಟಿಗೆ ಪ್ರಪೋಸ್ ಮಾಡಿದ್ದರು ಸಲ್ಮಾನ್ ಖಾನ್
ಹಲವು ವರ್ಷಗಳ ಹಿಂದೆ ನಡೆದ ಘಟನೆಯನ್ನು ನಟಿ ಈಗ ವಿವರಿಸಿದ್ದಾರೆ. ಸಿನಿಮಾದ ಶೂಟಿಂಗ್ ನೋಡಲು ಬಂದಿದ್ದ ಇವರಿಗೆ ಸಲ್ಮಾನ್ ಖಾನ್ ಪ್ರಪೋಸ್ ಮಾಡಿದ್ದರು. ಆದರೆ ಸಲ್ಲು ಮಾಡಿದ ಪ್ರಪೋಸಲ್ಗೆ ‘ನೋ’ ಎಂದು ಈ ಹುಡುಗಿ ಉತ್ತರಿಸಿದ್ದರು. ‘ಹೀರಾಮಂಡಿ’ ವೆಬ್ ಸರಣಿಯಿಂದ ಈ ಸುಂದರಿಗೆ ಈಗ ಯಶಸ್ಸು ಸಿಕ್ಕಿದೆ. ಹಳೇ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ.
ಸಲ್ಮಾನ್ ಖಾನ್ (Salman Khan) ಯಾವಾಗ ಮದುವೆ ಆಗ್ತಾರೆ ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. ಕೆಲವು ನಟಿಯರ ಜೊತೆ ಅವರಿಗೆ ರಿಲೇಷನ್ಶಿಪ್ ಇತ್ತು. ಆದರೆ ಕಂಕಣ ಭಾಗ್ಯ ಕೂಡಿ ಬರಲಿಲ್ಲ. ‘ನನಗೂ ಸಲ್ಮಾನ್ ಖಾನ್ ಪ್ರಪೋಸ್ ಮಾಡಿದ್ದರು’ ಎಂದು ನಟಿಯೊಬ್ಬರು ಈಗ ಹೇಳಿಕೊಂಡಿದ್ದಾರೆ. ಸಲ್ಮಾನ್ ಖಾನ್ ಪ್ರಪೋಸ್ ಮಾಡೋದು ಎಂದರೆ ಸಣ್ಣ ಮಾತಲ್ಲ. ಆದರೆ ಸ್ಟಾರ್ ನಟನ ಪ್ರೇಮ ನಿವೇದನೆಯನ್ನು ಈ ನಟಿ ತಿರಸ್ಕರಿಸಿದ್ದರು! ಆ ಘಟನೆಯನ್ನು ಈಗ ಅವರು ನೆನಪಿಸಿಕೊಂಡಿದ್ದಾರೆ. ಅಂದಹಾಗೆ, ನಾವು ಮಾತನಾಡುತ್ತಿರುವುದು ‘ಹೀರಾಮಂಡಿ’ (Heeramandi) ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರ ಮಾಡಿದ ಶರ್ಮಿನ್ ಸೇಗಲ್ ಬಗ್ಗೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶರ್ಮಿನ್ ಸೇಗಲ್ (Sharmin Segal) ಅವರು ಈ ವಿಚಾರ ತಿಳಿಸಿದ್ದಾರೆ.
ಸಲ್ಮಾನ್ ಖಾನ್ ಅವರು ಶರ್ಮಿನ್ ಸೇಗಲ್ಗೆ ಪ್ರಪೋಸ್ ಮಾಡಿದ್ದು ಒಂದು ತಮಾಷೆಯ ಪ್ರಸಂಗ. ಅದು ನಡೆದಿತ್ತು ಅಂದಾಜು 25 ವರ್ಷಗಳ ಹಿಂದೆ. ಆಗ ಶರ್ಮಿನ್ ಸೇಗಲ್ ಅವರು ಪುಟ್ಟ ಬಾಲಕಿ. ಅವರಿಗೆ ಆಗ ಎರಡು ಅಥವಾ ಮೂರು ವರ್ಷ ವಯಸ್ಸು ಇದ್ದಿರಬಹುದು. ಸಿನಿಮಾದ ಶೂಟಿಂಗ್ ಸೆಟ್ನಲ್ಲಿ ಸಲ್ಮಾನ್ ಖಾನ್ ಅವರನ್ನು ನೋಡಲು ಅವರು ಹೋಗಿದ್ದರು. ಆಗ ‘ನನ್ನನ್ನು ಮದುವೆ ಆಗ್ತೀಯಾ’ ಅಂತ ಸಲ್ಮಾನ್ ಖಾನ್ ಅವರು ಆ ಪುಟಾಣಿಗೆ ಕೇಳಿದ್ದರಂತೆ. ಅದಕ್ಕೆ ‘ಇಲ್ಲ’ ಎಂದು ಶರ್ಮಿನ್ ಸೇಗಲ್ ಉತ್ತರ ನೀಡಿದ್ದರು.
ಈಗ ಶರ್ಮಿನ್ ಸೇಗಲ್ ಅವರಿಗೆ 28 ವರ್ಷ ವಯಸ್ಸು. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಸಂಬಂಧಿ ಆಗಿರುವ ಅವರು ‘ಹೀರಾಮಂಡಿ’ ವೆಬ್ ಸರಣಿಯಲ್ಲಿ ಆಲಂಝೇಬ್ ಎಂಬ ಪಾತ್ರ ಮಾಡಿದ್ದಾರೆ. ಅದಿತಿ ರಾವ್ ಹೈದರಿ, ಮನಿಷಾ ಕೊಯಿರಾಲಾ, ರಿಚಾ ಚಡ್ಡಾ, ಸೋನಾಕ್ಷಿ ಸಿನ್ಹಾ ಮುಂತಾದ ನಟಿಯರ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ಹೀರಾಮಂಡಿ’ ವೆಬ್ ಸಿರೀಸ್ ಯಶಸ್ಸಿಗೆ ಗೌರವ ಸಲ್ಲಿಸಿದ ‘ಅಮುಲ್’
‘ಹೀರಾಮಂಡಿ’ ವೆಬ್ ಸರಣಿ ಹಿಟ್ ಆಗಿದೆ. ಆದರೆ ಶರ್ಮಿನ್ ಸೇಗಲ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ‘ನಿರ್ದೇಶಕರ ಸಂಬಂಧಿ ಎಂಬ ಕಾರಣಕ್ಕೆ ಅವರಿಗೆ ಈ ಪಾತ್ರ ಸಿಕ್ಕಿದೆ. ನಟನೆ ಸರಿಯಾಗಿ ಮಾಡಿಲ್ಲ. ಇದು ನೆಪೋಟಿಸಂ’ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಟ್ರೋಲ್ ಕಾಟ ಜಾಸ್ತಿ ಆದ ಬಳಿಕ ಶರ್ಮಿನ್ ಸೇಗಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ಗಳಿಗೆ ಕಮೆಂಟ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.