Lata Mangeshkar: ಶೀಘ್ರದಲ್ಲೇ ಲತಾ ಮಂಗೇಶ್ಕರ್ ಚಿತ್ರವಿರುವ ಅಂಚಿ ಚೀಟಿ ಬಿಡುಗಡೆ; ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ
ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ನವದೆಹಲಿ: ಭಾರತರತ್ನ ಪುರಸ್ಕೃತೆ, ಸಂಗೀತ ಕ್ಷೇತ್ರದ ದಿಗ್ಗಜರಾದ ಲತಾ ಮಂಗೇಶ್ಕರ್ (Lata Mangeshkar) ಅವರನ್ನು ಗೌರವಿಸಲು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಭಾರತದ ರೈಲ್ವೆ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಈ ಅಂಚೆಚೀಟಿ ‘ನೈಟಿಂಗೇಲ್ ಆಫ್ ಇಂಡಿಯಾ’ ಲತಾ ಮಂಗೇಶ್ಕರ್ ಅವರಿಗೆ ನೀಡುವ ಸೂಕ್ತ ಗೌರವವಾಗಿದೆ ಎಂದು ಹೇಳಿದ್ದಾರೆ.
ಇಂದು ಇಂಡಿಯಾ ಟುಡೇ ಬಜೆಟ್ ರೌಂಡ್ ಟೇಬಲ್‌ನಲ್ಲಿ ಮಾತನಾಡಿರುವ ಅಶ್ವಿನಿ ವೈಷ್ಣವ್, ಅಂಚೆಚೀಟಿಯನ್ನು ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಅಂಚೆ ಇಲಾಖೆಯ ಪ್ರಕಾರ, ಪ್ರಮುಖ ಘಟನೆಗಳು, ವಿವಿಧ ಕ್ಷೇತ್ರಗಳಲ್ಲಿನ ಪ್ರಮುಖ ವ್ಯಕ್ತಿಗಳು, ಪ್ರಕೃತಿಯ ಅಂಶಗಳು, ಸುಂದರ ಅಥವಾ ಅಪರೂಪದ ಸಸ್ಯ ಮತ್ತು ಪ್ರಾಣಿಗಳು, ಪರಿಸರ ಸಮಸ್ಯೆಗಳು, ಕೃಷಿ ಚಟುವಟಿಕೆಗಳು, ರಾಷ್ಟ್ರೀಯ/ಅಂತರರಾಷ್ಟ್ರೀಯ ವಿಷಯಗಳು, ಆಟಗಳು ಇತ್ಯಾದಿಗಳನ್ನು ನೆನಪಿಸುವ ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅಂಚೆ ಚೀಟಿಗಳ ಸಂಗ್ರಹದ ಬ್ಯೂರೋ ಮತ್ತು ಕೌಂಟರ್‌ಗಳಲ್ಲಿ ಅಥವಾ ಅಂಚೆಚೀಟಿಗಳ ಸಂಗ್ರಹದ ಠೇವಣಿ ಖಾತೆ ಯೋಜನೆಯಡಿಯಲ್ಲಿ ಈ ಅಂಚೆ ಚೀಟಿಗಳು ಸಿಗುತ್ತವೆ. ಅವುಗಳನ್ನು ಸೀಮಿತ ಪ್ರಮಾಣದಲ್ಲಿ ಮುದ್ರಿಸಲಾಗುತ್ತದೆ.
ವ್ಯಕ್ತಿಗಳ ಮೇಲಿನ ಅಂಚೆಚೀಟಿಗಳು ವಾರ್ಷಿಕ ಸಂಚಿಕೆ ಕಾರ್ಯಕ್ರಮದ ಶೇ.10ರಷ್ಟನ್ನು ಮೀರಬಾರದು ಎಂದು ಅಂಚೆ ಇಲಾಖೆಯ ಮಾರ್ಗಸೂಚಿಗಳು ತಿಳಿಸಿದೆ. ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಫೆಬ್ರವರಿ 6ರಂದು ನಿಧನರಾದರು. ಕೊವಿಡ್ -19 ಪಾಸಿಟಿವ್ ದೃಢಪಟ್ಟಿದ್ದರಿಂದ ಜನವರಿ 8ರಂದು ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಕಳೆದೆರಡು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು. ದುರದೃಷ್ಟವಶಾತ್, ಅವರು ಭಾನುವಾರ ಇಹಲೋಕ ತ್ಯಜಿಸಿದರು. ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಮುಂಬೈನ ದಾದರ್‌ನಲ್ಲಿರುವ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ, ಮಹಾ ಸಿಎಂ ಉದ್ಧವ್ ಠಾಕ್ರೆ, ಬಾಲಿವುಡ್ ಸೆಲೆಬ್ರಿಟಿಗಳಾದ ಶಾರುಖ್ ಖಾನ್ ಮತ್ತು ರಣಬೀರ್ ಕಪೂರ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಇಂದು ಸಂಸತ್ನಲ್ಲಿ ಅಂಚಿ ಚೀಟಿ ಬಿಡುಗಡೆ ಬಗ್ಗೆ ಘೋಷಣೆಗೂ ಮುನ್ನ ಮಾತನಾಡಿದ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು, ಲತಾ ಮಂಗೇಶ್ಕರ್ ಅವರ ನಿಧನದಿಂದ ಸಂಗೀತ ಕ್ಷೇತ್ರದಲ್ಲಿ ಒಂದು ಯುಗ ಅಂತ್ಯವಾಗಿದೆ. ಲತಾ ಮಂಗೇಶ್ಕರ್ ಅವರ ನಿಧನದಿಂದ ಭಾರತವು ಪ್ರಸಿದ್ಧ ಹಿನ್ನೆಲೆ ಗಾಯಕಿಯನ್ನು ಕಳೆದುಕೊಂಡಿದೆ. ಅವರ ನಿಧನದಿಂದ ಸಂಗೀತ ಜಗತ್ತಿನಲ್ಲಿ ಸರಿಪಡಿಸಲಾಗದ ಶೂನ್ಯ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
Lata Mangeshkar: ಲತಾ ಮಂಗೇಶ್ಕರ್ ಕೊನೆವರೆಗೂ ಏಕೆ ಮದುವೆಯೇ ಆಗಲಿಲ್ಲ?