PFI Ban: ಪಿಎಫ್ಐ ವೆಬ್ಸೈಟ್, ಸೋಷಿಯಲ್ ಮೀಡಿಯಾ ಅಕೌಂಟ್ಗಳಿಗೆ ಕೇಂದ್ರದಿಂದ ಟೇಕ್ಡೌನ್ ಆದೇಶ
ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪಿಎಫ್ಐ ಹೊಂದಿರುವ ಖಾತೆಗಳಿಗೆ ಟೇಕ್ಡೌನ್ ಆದೇಶ ನೀಡಲಾಗಿದೆ.
ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಭಾರತದಲ್ಲಿ ಓಪನ್ ಆಗುತ್ತಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ಟೇಕ್ಡೌನ್ ಆದೇಶವೇ ಕಾರಣ ಎಂದು ಹೇಳಲಾಗಿದೆ. ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪಿಎಫ್ಐ ಹೊಂದಿರುವ ಖಾತೆಗಳಿಗೆ ಟೇಕ್ಡೌನ್ ಆದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಖಾತೆಗಳನ್ನು ಡಿಲೀಟ್ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ನಿಷೇಧಿತ ಸಂಘಟನೆ ಪರ ಪ್ರತಿಭಟನೆಯೂ ಅಪರಾಧ; ಡಿಜಿ ಪ್ರವೀಣ್ ಸೂದ್
ದೇಶದ ಮಟ್ಟದಲ್ಲಿ ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರವು ಆದೇಶ ಹೊರಡಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಪ್ರತ್ಯೇಕ ಆದೇಶ ಹೊರಡಿಸಿ, ನಿಷೇಧದ ಬಗ್ಗೆ ಸ್ಪಷ್ಟ ಸೂಚನೆ ನೀಡಲಿದ್ದಾರೆ ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಹೇಳಿದರು. ಪಿಎಫ್ಐ ನಿಷೇಧ ಕುರಿತು ಮಾಹಿತಿ ನೀಡಿರುವ ಅವರು, ಎನ್ಐಎ ಅಧಿಕಾರಿಗಳು ಸೆ 22ರಂದು ನಮ್ಮ ರಾಜ್ಯದಲ್ಲಿ ದಾಳಿ ನಡೆಸಿದ್ದರು. ಎನ್ಐಎ ಸಿಬ್ಬಂದಿ 7 ಮಂದಿಯನ್ನು ಹಾಗೂ ನಾವು 15 ಮಂದಿಯನ್ನು ಬಂಧಿಸಿದ್ದೇವೆ. ಬಂಧಿತರ ವಿಚಾರಣೆ ವೇಳೆ ಕೆಲ ವಸ್ತುಗಳು ಸಿಕ್ಕಿವೆ ಎಂದು ತಿಳಿಸಿದರು.
ಯಾವೆಲ್ಲಾ ಸಂಘಟನೆಗಳು ನಿಷೇಧ
ದೇಶವ್ಯಾಪಿ ಎನ್ಐಎ ದಾಳಿಯ ಬೆನ್ನಲ್ಲೇ ಪಿಎಫ್ಐ ಮತ್ತು ಅದರ ಅಂಗ ಸಂಘಟನೆಗಳಾದ ರಿಹಾಬ್ ಇಂಡಿಯಾ ಫೌಂಡೇಷನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ರೈಟ್ ಆರ್ಗನೈಷೇನ್, ನ್ಯಾಷನಲ್ ಕಾನ್ಫಡರೇಷನ್ ಆಫ್ ಹ್ಯೂಮನ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಷನ್ ಸಂಘಟನೆಗಳನ್ನು ಕೇಂದ್ರ ನಿಷೇಧಿಸಿದೆ.
ಸಂಘಟನೆಯ ಹೆಸರು ಬಳಸುವಂತಿಲ್ಲ
ಕಾನೂನುಬಾಹಿರ ಕೃತ್ಯಗಳನ್ನು ತಡೆಯುವ ಉದ್ದೇಶದಿಂದ ದೇಶದಲ್ಲಿ ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿರುವುದರಿಂದ ಈ ಸಂಘಟನೆಗಳ ಎಲ್ಲ ಕಾರ್ಯಚಟುವಟಿಕೆಗಳೂ ಕಾನೂನುಬಾಹಿರ ಎನಿಸಿಕೊಳ್ಳುತ್ತವೆ. ಪಿಎಫ್ಐ ಹೆಸರಿನಲ್ಲಿ ಯಾವುದೇ ಚಟುವಟಿಕೆ ನಡೆಸಿದರೂ UAPA ಕಾಯ್ದೆಯ ಅಡಿಯಲ್ಲಿ ಪ್ರಕರಣ ಎದುರಿಸಬೇಕಾಗುತ್ತದೆ. ಯಾರೂ ಪಿಎಫ್ಐ ಹೆಸರು ಬಳಸುವಂತಿಲ್ಲ, ಹೊಸದಾಗಿ ಸೇರುವಂತಿಲ್ಲ. ಈವರೆಗೆ ಬಂಧನಕ್ಕೆ ಒಳಗಾಗದ ಪಿಎಫ್ಐ ಮುಖಂಡರು ಸಹ ಯಾವುದೇ ಕಾರ್ಯಕ್ರಮ, ಪ್ರತಿಭಟನೆ, ಹಣ ಸಂಗ್ರಹಣೆ ಮಾಡುವಂತಿಲ್ಲ. ಪಿಎಫ್ಐ ಹೆಸರು ಬಳಕೆ ಮಾಡಿದರೆ, ಪಿಎಫ್ಐ ಹೆಸರಿನಲ್ಲಿ ಸಭೆ ನಡೆಸಿದರೆ ಕಾನೂನುಬಾಹಿರ ಚಟುವಟಿಕೆಯಡಿಯಲ್ಲಿ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಕಾನೂನು ತಜ್ಞರು ತಿಳಿಸುತ್ತಾರೆ.
Published On - 12:55 pm, Wed, 28 September 22