ಕೊರೊನಾ ಲಸಿಕೆಯ ಮೇಲೆ ಜಿಎಸ್‌ಟಿ ಬದಲಾವಣೆ ಇಲ್ಲ; ಉಳಿದ ಕೊರೊನಾ ಸಾಮಗ್ರಿ ಮೇಲೆ ಎಷ್ಟು ಜಿಎಸ್‌ಟಿ ಕಡಿಮೆಯಾಯ್ತು?

GST Council Meeting: ಕೊರೊನಾ ಲಸಿಕೆಯ ಮೇಲಿನ ಜಿಎಸ್‌ಟಿ ಬದಲಾವಣೆ ಇಲ್ಲ; ಉಳಿದ ಕೊರೊನಾ ಸಾಮಗ್ರಿಗಳ ಮೇಲಿನ ಜಿಎಸ್‌ಟಿ ಇಳಿಕೆಯಾಗಿದೆ. ಒಟ್ಟಿನಲ್ಲಿ ಜಿಎಸ್‌ಟಿ ಮಂಡಳಿಯ ಸಭೆಯೂ ಕೊರೊನಾ ಸಾಮಗ್ರಿಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡಿರುವುದು ಕೊರೊನಾ ರೋಗಿಗಳ ಆರ್ಥಿಕ ಹೊರೆಯನ್ನು ಸ್ಪಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಸಹಾಯಕವಾಗುತ್ತೆ.

ಕೊರೊನಾ ಲಸಿಕೆಯ ಮೇಲೆ ಜಿಎಸ್‌ಟಿ ಬದಲಾವಣೆ ಇಲ್ಲ; ಉಳಿದ ಕೊರೊನಾ ಸಾಮಗ್ರಿ ಮೇಲೆ ಎಷ್ಟು ಜಿಎಸ್‌ಟಿ ಕಡಿಮೆಯಾಯ್ತು?
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us
S Chandramohan
| Updated By: ಸಾಧು ಶ್ರೀನಾಥ್​

Updated on:Jun 14, 2021 | 3:11 PM

ನವದೆಹಲಿ: ಕೊರೊನಾ ಸಂಕಷ್ಟದ ವೇಳೆ ಕೊರೊನಾ ಲಸಿಕೆ, ಸಾಮಗ್ರಿಗಳ ಮೇಲೆ ದುಬಾರಿ ಜಿಎಸ್‌ಟಿ ದರ ವಿಧಿಸುವುದು ಸೂಕ್ತವಲ್ಲ ಎಂಬ ಟೀಕೆ ಇತ್ತು. ಹೀಗಾಗಿ ಇವತ್ತು ಕೊರೊನಾ ಸಾಮಗ್ರಿ ಹಾಗೂ ಡ್ರಗ್ಸ್ ಗಳ ಮೇಲಿನ ಜಿಎಸ್‌ಟಿ ಇಳಿಕೆ ಮಾಡಿ ಜಿಎಸ್‌ಟಿ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ. ಆದರೆ, ಕೊರೊನಾ ಲಸಿಕೆಯನ್ನು ಕೇಂದ್ರ ಸರ್ಕಾರವೇ ಖರೀದಿ ಮಾಡುವುದರಿಂದ ಕೊರೊನಾ ಲಸಿಕೆಯ ಮೇಲಿನ ಜಿಎಸ್‌ಟಿ ಇಳಿಕೆ ಮಾಡಿಲ್ಲ. ಯಾವ್ಯಾವ ಕೊರೊನಾ ಸಾಮಗ್ರಿ ಮೇಲಿನ ಜಿಎಸ್‌ಟಿ ದರ ಇಳಿಕೆಯಾಗಿದೆ ಎನ್ನುವುದರ ಡೀಟೈಲ್ಸ್ ಇಲ್ಲಿದೆ..

ಕೊರೊನಾ ಲಸಿಕೆಯ ಮೇಲಿನ ಜಿಎಸ್‌ಟಿ ಬದಲಾವಣೆ ಇಲ್ಲ; ಉಳಿದ ಕೊರೊನಾ ಸಾಮಗ್ರಿಗಳ ಮೇಲಿನ ಜಿಎಸ್‌ಟಿ ಇಳಿಕೆ: ದೇಶವು ಕಳೆದ ಒಂದೂವರೆ ವರ್ಷದಿಂದ ಕೊರೊನಾ ವೈರಸ್ ನಿಂದ ಸಂಕಷ್ಟಕ್ಕೆ ಸಿಲುಕಿದೆ. ಆದರೇ, ಕೊರೊನಾ ಲಸಿಕೆ, ಕೊರೊನಾ ಸಾಮಗ್ರಿ ಸೇರಿದಂತೆ ಎಲ್ಲದರ ಮೇಲೂ ದುಬಾರಿ ಜಿಎಸ್‌ಟಿ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಜನರಿಗೆ ಆರ್ಥಿಕ ಸಂಕಷ್ಟಕ್ಕೆ ಮತ್ತಷ್ಟು ಬರೆ ಎಳೆದಂತಾಗಿದೆ. ಹೀಗಾಗಿ ಕೊರೊನಾ ಲಸಿಕೆ, ಕೊರೊನಾ ಸಾಮಗ್ರಿಗಳಾದ ಮೆಡಿಕಲ್ ಆಕ್ಸಿಜನ್, ಕನಸನಟ್ರೇಟರ್, ಅಂಬ್ಯುಲೆನ್ಸ್, ಪಲ್ಸ್ ಆಕ್ಸಿಮೀಟರ್ ಸೇರಿದಂತೆ ಅನೇಕ ಸಾಮಗ್ರಿಗಳ ಮೇಲಿನ ಜಿಎಸ್‌ಟಿ ದರವನ್ನು ಇಳಿಕೆ ಮಾಡಬೇಕು, ಇಲ್ಲವೇ ಶೂನ್ಯಕ್ಕೆ ಇಳಿಸಬೇಕೆಂಬ ಬೇಡಿಕೆ ಇತ್ತು.

ಕಳೆದ ತಿಂಗಳು ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಯಾವುದೇ ತೀರ್ಮಾನಕ್ಕೆ ಬಂದಿರಲಿಲ್ಲ. ಯಾವ್ಯಾವ ಸಾಮಗ್ರಿಗಳ ಮೇಲೆ ಜಿಎಸ್‌ಟಿ ದರ ಇಳಿಕೆ ಮಾಡಬೇಕು ಎನ್ನುವ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಮೇಘಾಲಯ ಸಿಎಂ ಕರ್ನಾಡ್ ಸಂಗ್ಮಾ ಅಧ್ಯಕ್ಷತೆಯಲ್ಲಿ ಹಣಕಾಸು ಸಚಿವರ ತಂಡವನ್ನು ರಚಿಸಲಾಗಿತ್ತು. ಈ ತಂಡವು ಜೂನ್ 6ರಂದೇ ವರದಿ ನೀಡಿತ್ತು. ಇದರ ಆಧಾರದ ಮೇಲೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಇಂದು(ಜೂನ್ 12) ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ 44ನೇ ಜಿಎಸ್‌ಟಿ ಮಂಡಳಿಯ ಸಭೆ ನಡೆಯಿತು. ಈ ಸಭೆಯಲ್ಲಿ ಸಚಿವರ ತಂಡ ಮಾಡಿದ್ದ ಬಹುತೇಕ ಶಿಫಾರಸ್ಸುಗಳನ್ನ ಅಂಗೀಕರಿಸಲಾಗಿದೆ. ಈ ವರ್ಷದ ಸೆಪ್ಟೆಂಬರ್ ವರೆಗೂ ಜಿಎಸ್‌ಟಿ ದರ ಇಳಿಕೆ ಮಾಡಿ ಜಿಎಸ್‌ಟಿ ಮಂಡಳಿ ತೀರ್ಮಾನ ತೆಗೆದುಕೊಂಡಿದೆ.

ಕೊರೊನಾ ಲಸಿಕೆಯ ಮೇಲಿನ ಶೇ.5 ರ ಜಿಎಸ್‌ಟಿ ದರವನ್ನು ಇಳಿಕೆ ಮಾಡಬೇಕೆಂದು ಕಳೆದ ಸಭೆಯಲ್ಲಿ ವಿಪಕ್ಷಗಳ ಆಳ್ವಿಕೆಯ ರಾಜ್ಯಗಳು ಒತ್ತಾಯಿಸಿದ್ದವು. ಆದರೇ, ಈಗ ಕೇಂದ್ರ ಸರ್ಕಾರವೇ ಉತ್ಪಾದನೆಯಾದ ಕೊರೊನಾ ಲಸಿಕೆಯ ಪೈಕಿ ಶೇ.75 ರಷ್ಟು ಲಸಿಕೆ ಖರೀದಿಸಲಿದೆ ಎಂದು ಪ್ರಧಾನಿ ಮೋದಿಯವರೇ ಘೋಷಿಸಿದ್ದಾರೆ. ಇಂದಿನ ಸಭೆಯಲ್ಲೂ ದೆಹಲಿ ಸರ್ಕಾರ ಕೊರೊನಾ ಲಸಿಕೆಯ ಮೇಲಿನ ಜಿಎಸ್‌ಟಿಯನ್ನು ಶೂನ್ಯಕ್ಕೆ ಇಳಿಸಬೇಕೆಂದು ಒತ್ತಾಯಿಸಿತ್ತು. ಆದರೇ, ಈಗ ಕೇಂದ್ರ ಸರ್ಕಾರವೇ ಕೊರೊನಾ ಲಸಿಕೆ ಖರೀದಿ ಮಾಡುವುದರಿಂದ ರಾಜ್ಯ ಸರ್ಕಾರಗಳಿಗಾಗಲೀ, ಜನ ಸಾಮಾನ್ಯರಿಗಾಗಲೀ, ಯಾವುದೇ ಹೊರೆಯಾಗಲ್ಲ. ಹೀಗಾಗಿ ಕೊರೊನಾ ಲಸಿಕೆ ಮೇಲಿನ ಜಿಎಸ್‌ಟಿ ಇಳಿಕೆ ಮಾಡದಿರಲು ತೀರ್ಮಾನ ಕೈಗೊಳ್ಳಲಾಗಿದೆ. ಕೊರೊನಾ ಲಸಿಕೆಯ ಮೇಲಿನ ಶೇ. 5ರ ಜಿಎಸ್‌ಟಿ ದರವೇ ಮುಂದುವರಿಯಲಿದೆ.

ಆದರೇ, ಕೊರೊನಾ ರೋಗಿಗಳ ಚಿಕಿತ್ಸೆಗೆ ಬಳಸುವ ಔಷಧಿಗಳ ಮೇಲಿನ ಜಿಎಸ್‌ಟಿ ದರಇಳಿಕೆ ಮಾಡಿ ಜಿಎಸ್‌ಟಿ ಮಂಡಳಿಯು ತೀರ್ಮಾನ ಕೈಗೊಂಡಿದೆ. ಟೋಸಿಲಿಜುಮಾಬ್, ಅಂಪೋಟೋರಿಸಿನ್ ಬಿ ಡ್ರಗ್ಸ್ ಮೇಲಿನ ಜಿಎಸ್‌ಟಿಯನ್ನು ಶೇ.5 ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಹೆಪರೀನ್ ರೀತಿಯ ಆ್ಯಂಟಿ ಕೋಗುಲ್ಯಾಂಟ್, ರೆಮಿಡಿಸಿವಿರ್ ಇಂಜೆಕ್ಷನ್ ಗಳ ಮೇಲಿನ ಶೇ.12 ರ ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಕೆ ಮಾಡಲಾಗಿದೆ. ಕೊರೊನಾ ರೋಗಿಗಳ ಚಿಕಿತ್ಸೆಗೆ ಬಳಸುವ ಉಳಿದ ಯಾವುದೇ ಡ್ರಗ್ಸ್ ಗಳ ಬಗ್ಗೆ ಕೇಂದ್ರದ ಆರೋಗ್ಯ ಇಲಾಖೆ, ಫಾರ್ಮಾಸೂಟಿಕಲ್ಸ್ ಇಲಾಖೆಯು ಶಿಫಾರಸ್ಸು ಮಾಡಿದ್ದರೇ, ಅವುಗಳ ಮೇಲೆ ಶೇ.5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತೆ.

ಇನ್ನು ಮೆಡಿಕಲ್ ಗ್ರೇಡ್ ಆಕ್ಸಿಜನ್, ಆಕ್ಸಿಜನ್ ಕನಸನಟ್ರೇಟರ್, ವೆಂಟಿಲೇಟರ್, ವೆಂಟಿಲೇಟರ್ ಮಾಸ್ಕ್, BiPAP ಮೆಷಿನ್ ಗಳು, ಹೈ ಪ್ಲೋ ನಾಸಲ್ ಡಿವೈಸ್ ಗಳ ಮೇಲಿನ ಶೇ.12 ರಷ್ಟು ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಕೆ ಮಾಡಲಾಗಿದೆ. ಕೊರೊನಾ ಟೆಸ್ಟಿಂಗ್ ಕಿಟ್ ಹಾಗೂ ಮೆಷಿನ್ ಗಳ ಮೇಲಿನ ಜಿಎಸ್‌ಟಿಯನ್ನು ಶೇ. 12 ರಿಂದ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ.

ಪಲ್ಸ್ ಆಕ್ಸಿಮೀಟರ್ ಮೇಲೆ ಸದ್ಯ ಶೇ.12 ರಷ್ಟು ಜಿಎಸ್‌ಟಿ ಇತ್ತು. ಇದನ್ನು ಶೇ.5ಕ್ಕೆ ಇಳಿಕೆ ಮಾಡಲಾಗಿದೆ. ಹ್ಯಾಂಡ್ ಸ್ಯಾನಿಟೈಸರ್ ಮೇಲೆ ಇದ್ದ ಶೇ.18 ರಷ್ಟು ಜಿಎಸ್‌ಟಿಯನ್ನು ಈಗ ಶೇ.5ಕ್ಕೆ ಇಳಿಕೆ ಮಾಡಲಾಗಿದೆ. ಉಷ್ಣಾಂಶ ಪರೀಕ್ಷಿಸುವ ಥರ್ಮಾಮೀಟರ್ ಗಳ ಮೇಲೆ ಇದ್ದ ಶೇ.18 ರಷ್ಟು ಜಿಎಸ್‌ಟಿಯನ್ನು ಶೇ. 5ಕ್ಕೆ ಇಳಿಕೆ ಮಾಡಲಾಗಿದೆ. ಗ್ಯಾಸ್ ಅಥವಾ ಎಲೆಕ್ಟ್ರಿಕ್ ಚಿತಾಗಾರಗಳ ಸಾಮಗ್ರಿಗಳು, ಆಳವಡಿಕೆ ಮೇಲೆ ಇದ್ದ ಶೇ.18 ರಷ್ಟು ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಕೆ ಮಾಡಲಾಗಿದೆ.

ಇನ್ನು ಕೊರೊನಾ ರೋಗಿಗಳ ಸಾಗಿಸುವ ಅಂಬ್ಯುಲೆನ್ಸ್ ಮೇಲೆ ಶೇ.28 ರಷ್ಟು ಜಿಎಸ್‌ಟಿ ಇದ್ದು, ಇದನ್ನು ಶೇ.12ಕ್ಕೆ ಇಳಿಸಲು ಜಿಎಸ್‌ಟಿ ಮಂಡಳಿ ಒಪ್ಪಿಗೆ ನೀಡಿದೆ. ಇವೆಲ್ಲವೂ ತಕ್ಷಣದಿಂದಲೇ ಜಾರಿಯಾಗುತ್ತಾವೆ ಎಂದು ಕೇಂದ್ರದ ಹಣಕಾಸು ಇಲಾಖೆಯ ಕಾರ್ಯದರ್ಶಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಜಿಎಸ್‌ಟಿ ದರಗಳಲ್ಲಿ ನ ಈ ಬದಲಾವಣೆಯು ಈ ವರ್ಷದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಜಾರಿಯಲ್ಲಿರುತ್ತಾವೆ ಎಂದು ಕೂಡ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಒಟ್ಟಿನಲ್ಲಿ ಜಿಎಸ್‌ಟಿ ಮಂಡಳಿಯ ಸಭೆಯೂ ಕೊರೊನಾ ಸಾಮಗ್ರಿಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡಿರುವುದು ಕೊರೊನಾ ರೋಗಿಗಳ ಆರ್ಥಿಕ ಹೊರೆಯನ್ನು ಸ್ಪಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಸಹಾಯಕವಾಗುತ್ತೆ.

(ಲೇಖನ: ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9)

(GST Council Meeting by Nirmala sitharaman reduced gst on corona related medicine)

GST: ಮೇ ತಿಂಗಳ ಜಿಎಸ್​ಟಿ ಸಂಗ್ರಹ 1,02,709 ಕೋಟಿ; ಕಳೆದ ವರ್ಷಕ್ಕಿಂತ ಶೇ 65ರಷ್ಟು ಹೆಚ್ಚು, ಏಪ್ರಿಲ್​ಗಿಂತ ಶೇ 27ರಷ್ಟು ಕಮ್ಮಿ

Published On - 4:59 pm, Sat, 12 June 21