GST: ಮೇ ತಿಂಗಳ ಜಿಎಸ್ಟಿ ಸಂಗ್ರಹ 1,02,709 ಕೋಟಿ; ಕಳೆದ ವರ್ಷಕ್ಕಿಂತ ಶೇ 65ರಷ್ಟು ಹೆಚ್ಚು, ಏಪ್ರಿಲ್ಗಿಂತ ಶೇ 27ರಷ್ಟು ಕಮ್ಮಿ
ಭಾರತದ ಜಿಎಸ್ಟಿ ಸಂಗ್ರಹ ಸತತ ಏಳನೇ ತಿಂಗಳು, ಮೇನಲ್ಲಿ ಸಹ 1 ಲಕ್ಷ ಕೋಟಿ ರೂಪಾಯಿಯನ್ನು ದಾಟಿದೆ. ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಶೇ 65ರಷ್ಟು ಹೆಚ್ಚಾಗಿದೆ.
2021ನೇ ಇಸವಿಯ ಮೇ ತಿಂಗಳಲ್ಲಿ ಸಂಗ್ರಹವಾದ ಜಿಎಸ್ಟಿ ಮೊತ್ತದ ಬಗೆಗಿನ ಅಂಕಿ- ಅಂಶ ಶನಿವಾರ (ಜೂನ್ 5, 2021) ಹೊರಬಂದಿದೆ. ದೇಶದಲ್ಲಿ ಒಟ್ಟು 1,02,709 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಶೇಕಡಾ 65ರಷ್ಟು ಜಿಎಸ್ಟಿ ಸಂಗ್ರಹ ಹೆಚ್ಚಳವಾಗಿದೆ. ಅಂದ ಹಾಗೆ ಸತತವಾಗಿ ಕಳೆದ 8 ತಿಂಗಳಿನಿಂದಲೂ ಜಿಎಸ್ಟಿ ಸಂಗ್ರಹ ಮೊತ್ತವು 1 ಲಕ್ಷ ಕೋಟಿ ರೂಪಾಯಿ ದಾಟುತ್ತಿದೆ. ಕೊರೊನಾ ಎರಡನೇ ಅಲೆಯ ಕಾರಣಕ್ಕೆ ಸೋಂಕಿನ ಪ್ರಕರಣದಲ್ಲಿ ಭಾರೀ ಹೆಚ್ಚಳವಾಗಿ, ಬಹುತೇಕ ರಾಜ್ಯಗಳಲ್ಲಿ ಲಾಕ್ಡೌನ್ ಅಥವಾ ನಿರ್ಬಂಧವನ್ನು ಘೋಷಿಸಿರುವುದರಿಂದ ಆರ್ಥಿಕ ಚಟುವಟಿಕೆಗಳು ಕಡಿಮೆ ಆಗಿವೆ. ಈ ಮಧ್ಯೆಯೂ ಜಿಎಸ್ಟಿ ಸಂಗ್ರಹ ಮೊತ್ತವು 1 ಲಕ್ಷ ಕೋಟಿ ರೂಪಾಯಿಯನ್ನು ದಾಟಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.
ಕಳೆದ ತಿಂಗಳು, ಏಪ್ರಿಲ್ನಲ್ಲಿ 1.41 ಲಕ್ಷ ಕೋಟಿ ರೂಪಾಯಿಯ ಜಿಎಸ್ಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಮೇ ತಿಂಗಳಲ್ಲಿ 38 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಪ್ರಮಾಣದಲ್ಲಿ, ಅಂದರೆ ಶೇ 27ರಷ್ಟು ಜಿಎಸ್ಟಿ ಸಂಗ್ರಹ ಕಡಿಮೆ ಆಗಿದೆ. ಮೊದಲೇ ಹೇಳಿದಂತೆ ಮೇ ತಿಂಗಳಲ್ಲಿ ಕೊರೊನಾ ಕಾರಣದಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ ಮತ್ತು ಕೆಲವೆಡೆ ಕಠಿಣ ನಿರ್ಬಂಧಗಳನ್ನು ಘೋಷಿಸಿರುವುದರಿಂದ ಆರ್ಥಿಕ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿ, ಸರ್ಕಾರಕ್ಕೆ ಬರಬೇಕಾದ ಆದಾಯ ಸಂಗ್ರಹವು ಕಡಿಮೆ ಆಗಿದೆ. ಮೇ ತಿಂಗಳ ಜಿಎಸ್ಟಿ ಫೈಲಿಂಗ್ಗಾಗಿ ಜೂನ್ 4ನೇ ತಾರೀಕಿನ ತನಕ ಅವಕಾಶ ಇದೆ. ಈ ಬಗ್ಗೆ ಕೇಂದ್ರದ ಹಣಕಾಸು ಇಲಾಖೆಯಿಂದ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.
ಮೇ ತಿಂಗಳಲ್ಲಿ ಸಿಜಿಎಸ್ಟಿ ರೂ. 17,592 ಕೋಟಿ ಸಂಗ್ರಹ ಆಗಿದೆ. ಎಸ್ಜಿಎಸ್ಟಿ ರೂ. 22,653 ಕೋಟಿ, ಐಜಿಸಿಟಿ 53,199 ಕೋಟಿ ರೂಪಾಯಿ (ಇದರಲ್ಲಿ 26,002 ಕೋಟಿ ರೂಪಾಯಿ ವಸ್ತುಗಳ ಆಮದಿನ ಮೇಲೆ ಸಂಗ್ರಹ ಆಗಿರುವುದು ಸೇರಿಕೊಂಡಿದೆ) ಎಂದು ತಿಳಿಸಲಾಗಿದೆ. ಈ ತಿಂಗಳಲ್ಲಿ ಸರ್ಕಾರದಿಂದ ಸಿಜಿಎಸ್ಟಿ ರೂ. 15,014 ಕೋಟಿ, 11,653 ಕೋಟಿ ರೂಪಾಯಿಯನ್ನು ಐಜಿಎಸ್ಟಿಯಿಂದ ಎಸ್ಜಿಎಸ್ಟಿ ವಿಲೇವಾರಿ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿದೆ. ಅಂದಹಾಗೆ ಮೇ ತಿಂಗಳಲ್ಲಿನ ಜಿಎಸ್ಟಿ ಸಂಗ್ರಹ ಇನ್ನೂ ಹೆಚ್ಚಾಗಬಹುದು. ಏಕೆಂದರೆ ಯಾವ ವ್ಯವಹಾರಕ್ಕೆ 5 ಕೋಟಿ ರೂಪಾಯಿಗಿಂತ ಕಡಿಮೆ ವಹಿವಾಟು ಇದೆಯೋ ಅಂಥವರಿಗೆ ತೆರಿಗೆ ಪಾವತಿಗೆ ಜುಲೈ ಮೊದಲ ವಾರದ ತನಕ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: GST revenue collection: 2021ರ ಏಪ್ರಿಲ್ನಲ್ಲಿ ಸಾರ್ವಕಾಲಿಕ ಗರಿಷ್ಠ ಜಿಎಸ್ಟಿ 1.41 ಲಕ್ಷ ಕೋಟಿ ರೂ. ಸಂಗ್ರಹ
(GST collection for 2021 May amounts to 1,02,709 crore Rupees. Compare to last year May 65% higher)
Published On - 6:06 pm, Sat, 5 June 21