AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬ್ಯಾಲೆಟ್ ಪೇಪರ್ ಬಳಸಿದರೂ ಎಷ್ಟು ಸೀಟು ಗೆದ್ರಪ್ಪ?’; ಕಾಂಗ್ರೆಸ್​​ ಹೀನಾಯ ಸೋಲಿಗೆ ಪ್ರಧಾನಿ ಮೋದಿ ಲೇವಡಿ

ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಇವಿಎಂಗಳ ಪಾರದರ್ಶಕತೆ ಮತ್ತು ನಂಬಿಕಾರ್ಹತೆಯನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ಪಕ್ಷ ಹಾಗೂ 'ಇಂಡಿಯಾ' ಒಕ್ಕೂಟದ ನಾಯಕರು ಮುಂಬರುವ ಎಲ್ಲ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕವೇ ಮತದಾನ ನಡೆಸಬೇಕು ಎಂದು ನಿರಂತರವಾಗಿ ಪಟ್ಟು ಹಿಡಿದಿದ್ದರು. ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಅನ್ನೇ ಬಳಸಲಾಗಿತ್ತು. ಆದರೂ 4 ರಾಜ್ಯಗಳ ಚುನಾವಣೆಯಲ್ಲಿ ಒಂದೇ ಒಂದು ಸೀಟು ಗೆಲ್ಲಲಾಗದೆ ಮುಖಭಂಗ ಅನುಭವಿಸಿರುವ ಕಾಂಗ್ರೆಸ್​​ ಕುರಿತು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

'ಬ್ಯಾಲೆಟ್ ಪೇಪರ್ ಬಳಸಿದರೂ ಎಷ್ಟು ಸೀಟು ಗೆದ್ರಪ್ಪ?'; ಕಾಂಗ್ರೆಸ್​​ ಹೀನಾಯ ಸೋಲಿಗೆ ಪ್ರಧಾನಿ ಮೋದಿ ಲೇವಡಿ
ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ Image Credit source: PTI
ಸುಷ್ಮಾ ಚಕ್ರೆ
|

Updated on:Oct 28, 2026 | 6:53 PM

Share

ನವದೆಹಲಿ, ಅಕ್ಟೋಬರ್ 28: ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಕಾಂಗ್ರೆಸ್ ಗಳಿಸಿಲ್ಲ. ಇದು ಕಾಂಗ್ರೆಸ್​ ಹೈಕಮಾಂಡ್​ಗೆ ಭಾರೀ ಮುಖಭಂಗ ಉಂಟುಮಾಡಿದೆ. ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಬೇಕೆಂದು ಪಟ್ಟು ಹಿಡಿದಿದ್ದ ಕಾಂಗ್ರೆಸ್​ ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರನ್ನೇ ಬಳಸಿದರೂ ತನ್ನ ಖಾತೆ ತೆರೆಯುವಲ್ಲಿ ವಿಫಲವಾಗಿರುವುದರಿಂದ ಇನ್ನಷ್ಟು ಮುಜುಗರಕ್ಕೀಡಾಗಿದೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. ‘ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗಳಿಸಿದೆ ಎಂದು ಊಹಿಸಿ ನೋಡೋಣ’ ಎಂದು ವ್ಯಂಗ್ಯವಾಡಿರುವ ಪ್ರಧಾನಿ ಮೋದಿ ಅದರ ಜೊತೆ ಭೂತಗನ್ನಡಿ ಹಿಡಿದುಕೊಂಡು ಹುಡುಕುತ್ತಿರುವ ಇಮೋಜಿ ಕೂಡ ಹಾಕಿದ್ದಾರೆ.

4 ರಾಜ್ಯಗಳ (ಕರ್ನಾಟಕ, ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ) 28 ವಿಧಾನಪರಿಷತ್ (ಎಂಎಲ್​ಸಿ) ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಕಟು ವ್ಯಂಗ್ಯವಾಡಿದ್ದಾರೆ. ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕವೇ ನಡೆದ ಈ ಚುನಾವಣೆಯಲ್ಲೂ ಕಾಂಗ್ರೆಸ್ ಸಂಪೂರ್ಣ ‘ಶೂನ್ಯ’ ಸ್ಥಾನ ಪಡೆದಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, “ಕಾಂಗ್ರೆಸ್ ಎಷ್ಟು ಸೀಟು ಗೆದ್ದಿದೆ ಎಂದು ಊಹಿಸಿ ನೋಡೋಣ?” ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.

ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿರುದ್ಧ ನಿರಂತರವಾಗಿ ದನಿ ಎತ್ತಿ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಸಬೇಕೆಂದು ಆಗ್ರಹಿಸುತ್ತಿದ್ದ ವಿರೋಧ ಪಕ್ಷಗಳಿಗೆ, ಬ್ಯಾಲೆಟ್ ಪೇಪರ್ ಮೂಲಕವೇ ನಡೆದ ಈ ಚುನಾವಣೆಯ ಹೀನಾಯ ಸೋಲನ್ನು ಪ್ರಧಾನಿ ಮೋದಿ ನೆನಪಿಸಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ಗೆ ಭಾರೀ ಮುಖಭಂಗ; ಕರ್ನಾಟಕ ಸೇರಿದಂತೆ 4 ರಾಜ್ಯಗಳ ವಿಧಾನಪರಿಷತ್ ಚುನಾವಣೆಯಲ್ಲಿ ಒಂದೂ ಸೀಟಿಲ್ಲ!

ಅಕ್ಟೋಬರ್ 23 ರಂದು 4 ರಾಜ್ಯಗಳ 6 ಶಿಕ್ಷಕರ ಹಾಗೂ 5 ಪದವೀಧರ ಕ್ಷೇತ್ರಗಳು (ಉತ್ತರ ಪ್ರದೇಶ), ಬಿಹಾರ (4 ಕ್ಷೇತ್ರಗಳು), ಕರ್ನಾಟಕ (4 ಕ್ಷೇತ್ರಗಳು) ಹಾಗೂ ಮಹಾರಾಷ್ಟ್ರದ (5 ಕ್ಷೇತ್ರಗಳು) ಒಟ್ಟು 28 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.

ಕಾಂಗ್ರೆಸ್​ ಸರ್ಕಾರಕ್ಕೆ ಮುಖಭಂಗ:

ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷಕ್ಕೆ ಅತ್ಯಂತ ಭಾರಿ ಮುಖಭಂಗವಾಗಿದೆ. ಇಲ್ಲಿ ಬಿಜೆಪಿ 3 ಸ್ಥಾನಗಳನ್ನು ತನ್ನದಾಗಿಸಿಕೊಂಡರೆ, ಜೆಡಿಎಸ್ 1 ಸ್ಥಾನವನ್ನು ಕಾಂಗ್ರೆಸ್‌ನಿಂದ ಕಸಿದುಕೊಂಡಿದೆ. ಕಾಂಗ್ರೆಸ್ ಒಂದೂ ಸ್ಥಾನ ಪಡೆದಿಲ್ಲ. ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕದ ನಾಲ್ಕೂ ವಿಧಾನಪರಿಷತ್ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದೆ. ಕಾಂಗ್ರೆಸ್ ಒಂದು ಸ್ಥಾನವನ್ನೂ ಪಡೆದುಕೊಂಡಿಲ್ಲ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ್ ಅವರು ಕಾಂಗ್ರೆಸ್‌ನ ಹಾಲಿ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಸೋಲಿಸಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ್ ಅವರನ್ನು ಪರಾಭವಗೊಳಿಸಿದ್ದಾರೆ. ಪಶ್ಚಿಮ ಪದವೀಧರರ ಹಾಗೂ ಆಗ್ನೇಯ ಪದವೀಧರರ ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.

ಉತ್ತರ ಪ್ರದೇಶ (11 ಕ್ಷೇತ್ರಗಳು), ಬಿಹಾರ (8 ಕ್ಷೇತ್ರಗಳು) ಮತ್ತು ಮಹಾರಾಷ್ಟ್ರದ (5 ಕ್ಷೇತ್ರಗಳು) ಪರಿಷತ್ ಸ್ಥಾನಗಳಲ್ಲೂ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದ್ದು, ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳು ಮೇಲುಗೈ ಸಾಧಿಸಿವೆ.

ಇದನ್ನೂ ಓದಿ: ‘ರಾಹುಲ್ ಗಾಂಧಿ ನೇತೃತ್ವದಲ್ಲಿ ಸೋಲಿನ ಶತಕ ಬಾರಿಸಲು ಕಾಂಗ್ರೆಸ್​​ ಸಜ್ಜಾಗಿದೆ’: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ವ್ಯಂಗ್ಯ

ಪ್ರಲ್ಹಾದ್ ಜೋಶಿ ವಾಗ್ದಾಳಿ:

ಇನ್ನು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಕಾಂಗ್ರೆಸ್​​ ಪಕ್ಷದ ಶೂನ್ಯ ಸಾಧನೆಗೆ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, “ಇವಿಎಂ ಬಳಸಲಿ ಅಥವಾ ಬ್ಯಾಲೆಟ್ ಪೇಪರ್ ಬಳಸಲಿ: ಫಲಿತಾಂಶ ಮಾತ್ರ ಒಂದೇ. ದೇಶಾದ್ಯಂತ ನಡೆದ 28 ಎಂಎಲ್‌ಸಿ ಕ್ಷೇತ್ರಗಳ ಪೈಕಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗದೆ ಕಾಂಗ್ರೆಸ್ ಸಂಪೂರ್ಣವಾಗಿ ಧೂಳಿಪಟವಾಗಿದೆ.

‘ವೋಟ್ ಚೋರಿ’ ಎಂಬ ಸುಳ್ಳು ಕಥೆಯನ್ನು ಸದಾ ಸೃಷ್ಟಿಸುತ್ತಾ, ಪ್ರಜಾಪ್ರಭುತ್ವದ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಶ್ನಿಸುವ ಪಕ್ಷ, ಒಂದೇ ಒಂದು ಸೀಟನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಆಡಳಿತದಲ್ಲಿರುವ ಕರ್ನಾಟಕದಲ್ಲೂ, ಹಾಲಿ ಸದಸ್ಯರಿದ್ದ ಸ್ಥಾನವನ್ನೇ ಕಳೆದುಕೊಂಡಿದೆ. ಕಾಂಗ್ರೆಸ್ ಪದೇ ಪದೇ ಇವಿಎಂ ಬಗ್ಗೆ ಮಾತನಾಡುತ್ತದೆ. ಆದರೆ, ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಿದರೂ ಫಲಿತಾಂಶ ಮಾತ್ರ ಬದಲಾಗಿಲ್ಲ.

ಚುನಾವಣಾ ಫಲಿತಾಂಶ ಬಂದಾಗಲೆಲ್ಲಾ ವ್ಯವಸ್ಥೆಯನ್ನು ಪದೇ ಪದೇ ದೂಷಿಸುವುದೇ ಕಾಂಗ್ರೆಸ್‌ ಪಕ್ಷದ ಚಟ. ಆದರೆ, ಜನಾದೇಶ ಮಾತ್ರ ಸ್ಪಷ್ಟವಾಗಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕತ್ವವು ಇನ್ನಾದರೂ ವ್ಯವಸ್ಥೆಯ ಮೇಲೆ ಆರೋಪಗಳನ್ನು ಮಾಡುವುದು ಬಿಟ್ಟು, ತಮ್ಮ ಸಾಲು ಸಾಲು ಸೋಲುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ” ಎಂದು ಟೀಕಿಸಿದ್ದಾರೆ.

ಬ್ಯಾಲೆಟ್ ಪೇಪರ್ ಬೇಕೆಂದು ಕಾಂಗ್ರೆಸ್ ಪಟ್ಟು:

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಮಿತ್ರಪಕ್ಷಗಳ ನಾಯಕರು ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸಲು ಬ್ಯಾಲೆಟ್ ಪೇಪರ್ ಪದ್ಧತಿಗೆ ಮರಳುವುದು ಏಕೈಕ ಮಾರ್ಗ ಎಂದು ಒತ್ತಾಯ ಮಾಡಿದ್ದರು. ಇವಿಎಂ ಯಂತ್ರಗಳ ಕಾರ್ಯನಿರ್ವಹಣೆ, ಸಾಫ್ಟ್‌ವೇರ್ ಮತ್ತು ಮತ ಎಣಿಕೆ ಪ್ರಕ್ರಿಯೆಯ ಕುರಿತು ಮತದಾರರಲ್ಲಿ ಅನುಮಾನಗಳು ವ್ಯಕ್ತವಾಗುತ್ತಿವೆ. ಕಾಗದದ ಬ್ಯಾಲೆಟ್ ಪೇಪರ್‌ನಲ್ಲಿ ಪ್ರತಿಯೊಬ್ಬ ಮತದಾರನೂ ತನ್ನ ಮತ ಯಾರಿಗೆ ಬಿದ್ದಿದೆ ಎಂಬುದನ್ನು ಭೌತಿಕವಾಗಿ ನೋಡಿ ಖಾತ್ರಿಪಡಿಸಿಕೊಳ್ಳಲು ಸಾಧ್ಯವಾಗುವುದರಿಂದ ಪಾರದರ್ಶಕತೆ ಹೆಚ್ಚುತ್ತದೆ ಎಂಬುದು ಕಾಂಗ್ರೆಸ್ ವಾದ ಮಾಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Wed, 28 October 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More