Gujarat Plane Crash: ಅಹಮದಾಬಾದ್​​ನಲ್ಲಿ ಏರ್ ಇಂಡಿಯಾ ವಿಮಾನ ಪತನ; 241 ಪ್ರಯಾಣಿಕರ ಸಾವು

ಗುಜರಾತ್​​ನ ಅಹಮದಾಬಾದ್​​​ನಲ್ಲಿ ಇಂದು ಮಧ್ಯಾಹ್ನ ಏರ್ ಇಂಡಿಯಾ ವಿಮಾನ ಪತನವಾಗಿತ್ತು. ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಹಮದಾಬಾದ್‌ನಿಂದ ಇಂದು ಮಧ್ಯಾಹ್ನ 3.38ಕ್ಕೆ ಹೊರಟ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನದಲ್ಲಿ ಸಿಬ್ಬಂದಿ ಸೇರಿ 242 ಜನ ಪ್ರಯಾಣಿಸುತ್ತಿದ್ದರು. ಈ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಇದ್ದರು.

Gujarat Plane Crash:  ಅಹಮದಾಬಾದ್​​ನಲ್ಲಿ ಏರ್ ಇಂಡಿಯಾ ವಿಮಾನ ಪತನ; 241 ಪ್ರಯಾಣಿಕರ ಸಾವು
Gujarat Plane Crash

Updated on: Jun 12, 2025 | 9:23 PM

ಅಹಮದಾಬಾದ್, ಜೂನ್ 12: ಗುಜರಾತ್​​ನ ಅಹಮದಾಬಾದ್‌ನಿಂದ (Ahmedabad Plane Crash) ಗ್ಯಾಟ್ವಿಕ್ (ಇಂಗ್ಲೆಂಡ್​)ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಐ 171 ವಿಮಾನ ಇಂದು ಮಧ್ಯಾಹ್ನ ಟೇಕ್ ಆಫ್ ಆದ ತಕ್ಷಣ ಪತನಗೊಂಡಿತು. 12 ಸಿಬ್ಬಂದಿ ಸೇರಿದಂತೆ 242 ಜನರು ಈ ವಿಮಾನದಲ್ಲಿದ್ದರು. ಈ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಇದ್ದ ಡಾಕ್ಟರ್ ಹಾಸ್ಟೆಲ್​ನೊಳಗೆ ನುಗ್ಗಿದೆ. ಇದರಿಂದ ವಿಮಾನದಲ್ಲಿರುವ ಪ್ರಯಾಣಿಕರು ಮಾತ್ರವಲ್ಲದೆ 3 ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿನ ಅತಿ ದುರಂತವಾದ ವಿಮಾನ ಅಪಘಾತ ಇದಾಗಿದೆ.

ಇಂದು ವಿಮಾನ ಅಪಘಾತಕ್ಕೀಡಾದಾಗ 12 ಸಿಬ್ಬಂದಿ ಸೇರಿದಂತೆ ಸುಮಾರು 242 ಜನರು ಅಹಮದಾಬಾದ್-ಲಂಡನ್ ವಿಮಾನದಲ್ಲಿದ್ದರು. ವಿಮಾನ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಆದರೆ, ಓರ್ವ ವ್ಯಕ್ತಿ ಮಾತ್ರ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ಘಟನೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್ ಸಿಎಂ, ರಾಜ್ಯದ ಗೃಹ ಸಚಿವರು ಮತ್ತು ಡಿಜಿಪಿ ಅವರೊಂದಿಗೆ ಮಾತನಾಡಿದ್ದಾರೆ. ಗುಜರಾತ್​ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇಂದಿನ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು.

ಇದನ್ನೂ ಓದಿ: Gujarat Plane Crash Live: ಅಹಮದಾಬಾದ್​​ನಲ್ಲಿ ಏರ್ ಇಂಡಿಯಾ ಪತನ; ವಿಮಾನದಲ್ಲಿದ್ದ ಎಲ್ಲ 242 ಪ್ರಯಾಣಿಕರ ದುರಂತ ಸಾವು

ಅಪಘಾತ ಸಂಭವಿಸಿದಾಗ ಅಹಮದಾಬಾದ್‌ನ ಮೇಘನಿನಗರ ಪ್ರದೇಶದ ಬಳಿಯ ಧಾರ್ಪುರದಿಂದ ಭಾರೀ ಹೊಗೆ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ತುರ್ತು ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಲಾಗುತ್ತಿದೆ. ಅಪಘಾತದ ಕಾರಣವನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತದ ಬಗ್ಗೆ ಗೃಹ ಸಚಿವ ಅಮಿತ್ ಶಾ ಮತ್ತು ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರೊಂದಿಗೆ ಮಾತನಾಡಿದ್ದಾರೆ. ಈಗಾಗಲೇ ಗೃಹ ಸಚಿವ ಅಮಿತ್ ಶಾ ಅಹಮದಾಬಾದ್​ಗೆ ಹೊರಟಿದ್ದಾರೆ. ಗುಜರಾತ್ ಸಿಎಂ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.


ಇದನ್ನೂ ಓದಿ: Gujarat Plane Crash: ಒಂದು ವಾರದ ಹಿಂದೆಯೇ ವಿಮಾನ ಅಪಘಾತದ ಭವಿಷ್ಯ ನುಡಿದಿದ್ದ ಜ್ಯೋತಿಷಿ!

ಅಹಮದಾಬಾದ್ ಬಳಿ ಏರ್ ಇಂಡಿಯಾ ವಿಮಾನ ಅಪಘಾತದ ನಂತರ ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ಸುಮಾರು 130 ಸಿಬ್ಬಂದಿಯನ್ನು ಒಳಗೊಂಡ ಭಾರತೀಯ ಸೇನಾ ತಂಡಗಳನ್ನು ನಿಯೋಜಿಸಲಾಗಿದೆ. ಭಾರತೀಯ ಸೇನೆಯ ಪ್ರತಿಕ್ರಿಯೆಯಲ್ಲಿ ಭಗ್ನಾವಶೇಷಗಳ ತೆರವಿಗೆ ಜೆಸಿಬಿಗಳನ್ನು ಹೊಂದಿರುವ ಎಂಜಿನಿಯರಿಂಗ್ ತಂಡಗಳು, ವೈದ್ಯರು ಮತ್ತು ಅರೆವೈದ್ಯರನ್ನು ಒಳಗೊಂಡ ವೈದ್ಯಕೀಯ ತಂಡಗಳು, ಕ್ವಿಕ್ ಆಕ್ಷನ್ ತಂಡಗಳು (QAT ಗಳು), ಅಗ್ನಿಶಾಮಕ ಉಪಕರಣಗಳು ಮತ್ತು ನೀರಿನ ಬೌಸರ್‌ಗಳನ್ನು ಹೊಂದಿರುವ ಅಗ್ನಿಶಾಮಕ ಉಪಕರಣಗಳು ಮತ್ತು ಸ್ಥಳ ನಿರ್ವಹಣೆಗಾಗಿ ಪ್ರೊವೊಸ್ಟ್ ಸಿಬ್ಬಂದಿ ಸೇರಿದ್ದಾರೆ. ಮಿಲಿಟರಿ ಆಸ್ಪತ್ರೆಯನ್ನು ಸಹ ಸನ್ನದ್ಧವಾಗಿ ಇರಿಸಲಾಗಿದೆ.


ಈ ದುರಂತ ಘಟನೆಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಸಲಹೆಗಾರ ಮುಹಮ್ಮದ್ ಯೂನಸ್, ಸಿಂಗಾಪುರದ ಪ್ರಧಾನಿ, ಫ್ರಾನ್ಸ್ ಅಧ್ಯಕ್ಷ, ರಷ್ಯಾ ಅಧ್ಯಕ್ಷ, ಆಸ್ಟ್ರೇಲಿಯಾ ಪ್ರಧಾನಿ ಮುಂತಾದ ಜಾಗತಿಕ ನಾಯಕರು ಕೂಡ ಸಂತಾಪ ಸೂಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:08 pm, Thu, 12 June 25