Guwahati Rain: ಗುವಾಹಟಿಯಲ್ಲಿ ಭಾರೀ ಮಳೆಯಿಂದ ಭೂಕುಸಿತ; ನಾಲ್ವರು ಕಾರ್ಮಿಕರು ಜೀವಂತ ಸಮಾಧಿ
Monsoon 2022: ಬೋರಗಾಂವ್ನಲ್ಲಿ ಇಂದು ಮುಂಜಾನೆ ಸುರಿದ ಧಾರಾಕಾರ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಮನೆಯೊಳಗಿದ್ದ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗುವಾಹಟಿ: ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಮುಂಗಾರಿನ (Monsoon) ಆರ್ಭಟ ಜೋರಾಗಿದೆ. ಭಾರೀ ಮಳೆಯಿಂದಾಗಿ ಗುವಾಹಟಿಯ ಬೋರಗಾಂವ್ ಬಳಿಯ ನಿಜಾರಪರ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಭೂಕುಸಿತ ಸಂಭವಿಸಿದ್ದು, ಅವಶೇಷಗಳಡಿ ಸಿಲುಕಿ ನಾಲ್ವರು ಸಾವನ್ನಪ್ಪಿದ್ದಾರೆ. ಬೋರಗಾಂವ್ನಲ್ಲಿ ಇಂದು ಮುಂಜಾನೆ ಸುರಿದ ಧಾರಾಕಾರ ಮಳೆಯಿಂದಾಗಿ ಭೂಕುಸಿತ (Landslide) ಸಂಭವಿಸಿದೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಭೂಕುಸಿತದಿಂದ ಮನೆ ಕುಸಿತವಾಗಿದೆ. ಮನೆಯೊಳಗಿದ್ದ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಹೂತುಹೋಗಿ, ಸಾವನ್ನಪ್ಪಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪಶ್ಚಿಮ ವಿಭಾಗದ ಡಿಸಿಪಿ ನಬನೀತ್ ಮಹಾಂತ್, ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ನಾಲ್ವರು ಕಾರ್ಮಿಕರು ವಾಸವಾಗಿದ್ದರು. ಅವರೆಲ್ಲರೂ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದಿದ್ದಾರೆ.
ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಭೂಕುಸಿತ ಉಂಟಾಗಿದ್ದು, ಇಂದು ಬೆಳಗಿನ ಜಾವದವರೆಗೂ ಮಳೆ ಮುಂದುವರಿದಿದೆ. ನಮಗೆ ಮಳೆಯ ಬಗ್ಗೆ ಬೆಳಗಿನ ಜಾವ 2.30ಕ್ಕೆ ಮಾಹಿತಿ ಸಿಕ್ಕಿತು. ನಾವು ತಕ್ಷಣ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆವು. ಸ್ಥಳೀಯ ನಿವಾಸಿಗಳ ಪ್ರಕಾರ, ಆ ನಾಲ್ವರಲ್ಲಿ ಒಬ್ಬರು ಕೊಕ್ರಜಾರ್ ಜಿಲ್ಲೆಯವರು. ಇತರ ಮೂವರು ಧುಬ್ರಿ ಜಿಲ್ಲೆಯವರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Karnataka Rain: ಕರಾವಳಿಯಲ್ಲಿ ಇಂದು ಹಳದಿ ಅಲರ್ಟ್ ಘೋಷಣೆ; ಮಲೆನಾಡಿನಲ್ಲಿ ನಾಳೆಯಿಂದ ಭಾರೀ ಮಳೆ
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ನಾಪತ್ತೆಯಾದ ಕಾರ್ಮಿಕರನ್ನು ಮುನ್ವರ್ ಹುಸೇನ್, ಮೊಫಿಜುಲ್ ಹಕ್, ಅಮರುಲ್ ಹಕ್ ಮತ್ತು ಅಸನೂರ್ ಅಲಿ ಎಂದು ಗುರುತಿಸಲಾಗಿದ್ದು, ಅವರು ಕುಸಿದುಬಿದ್ದ ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದರು.
ಇಂದು ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಮೇಘಾಲಯ ಮತ್ತು ಅಸ್ಸಾಂನಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಲ್ಲಿ ಹಿಮ ಸುರಿಯಬಹುದು. ಗೋವಾ, ಕರ್ನಾಟಕ, ತೆಲಂಗಾಣ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಚದುರಿದ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಗಂಗಾನದಿ-ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ