
ಗ್ವಾಲಿಯರ್, ಮೇ 19: ಹೊಸದಾಗಿ ಮದುವೆಯಾಗಿದ್ದ ಯುವತಿಯೊಬ್ಬರು ತನ್ನನ್ನು ರಕ್ಷಿಸುವಂತೆ ತಂದೆಗೆ ಕರೆ ಮಾಡಿದ 20 ನಿಮಿಷಗಳಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಗ್ವಾಲಿಯರ್ನಲ್ಲಿ ನಡೆದಿದೆ. ವರದಕ್ಷಿಣೆ (Dowry) ಕಿರುಕುಳದಿಂದಾಗಿ ಈ ಸಾವು ಸಂಭವಿಸಿದೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. 21 ವರ್ಷದ ಯುವತಿ ಮದುವೆಯಾದ ಕೇವಲ 1 ವರ್ಷದೊಳಗೆ ಗ್ವಾಲಿಯರ್‌ನಲ್ಲಿರುವ ತನ್ನ ಗಂಡನ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇತ್ತೀಚೆಗೆ ಹೆಚ್ಚುತ್ತಿರುವ ವರದಕ್ಷಿಣೆ ಕಿರುಕುಳ ಪ್ರಕರಣ ಆತಂಕ ಹೆಚ್ಚಿಸಿದೆ.
ಮೃತ ಯುವತಿಯನ್ನು ಪಾಲಕ್ ರಜಾಕ್ ಎಂದು ಗುರುತಿಸಲಾಗಿದ್ದು, ಆಕೆ ಸಾವನ್ನಪ್ಪುವ ಕೆಲವೇ ಕ್ಷಣಗಳ ಮುನ್ನ ತನ್ನ ತಂದೆಗೆ ಅತ್ಯಂತ ಹತಾಶೆಯಿಂದ ಕರೆ ಮಾಡಿ, ತನ್ನನ್ನು ಗಂಡನ ಮನೆಯಿಂದ ಕರೆದುಕೊಂಡು ಹೋಗುವಂತೆ ಬೇಡಿಕೊಂಡಿದ್ದರು ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಮೇ 12ರ ಸಂಜೆ ಆಕೆ ಸಾವನ್ನಪ್ಪುವ ಕೇವಲ 20ರಿಂದ 30 ನಿಮಿಷಗಳ ಮೊದಲು ಪಾಲಕ್ ತನ್ನ ತಂದೆಗೆ ಕರೆ ಮಾಡಿದ್ದರು. ಗಂಡನ ಮನೆಯವರು ಬಹಳ ಹಿಂಸೆ ನೀಡುತ್ತಿದ್ದಾರೆ, ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಬದುಕಿಸಿ ಅಪ್ಪಾ ಎಂದು ಆಕೆ ಅಪ್ಪನ ಬಳಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಎಂಜಿನಿಯರ್ ದಾರುಣ ಅಂತ್ಯ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ?
“ಅಪ್ಪಾ, ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ. ಅವರು ಪದೇ ಪದೇ ಕಾರು ಮತ್ತು ಚಿನ್ನದ ಸರಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಇವರು ನನ್ನನ್ನು ಕೊಂದುಬಿಡುತ್ತಾರೆ” ಎಂದು ಆಕೆ ಫೋನ್‌ನಲ್ಲಿ ಅಳುತ್ತಾ ತನ್ನ ತಂದೆಗೆ ಹೇಳಿದ್ದರು ಎನ್ನಲಾಗಿದೆ.
ಆಕೆಯ ಮಾತು ಕೇಳಿ ಹೆದರಿದ್ದ ಪೋಷಕರು ಪಾಲಕ್ ಅವರನ್ನು ಮರಳಿ ಮನೆಗೆ ಕರೆತರಲು ತಮ್ಮ ಮನೆಯಿಂದ ಹೊರಟಿದ್ದರು. ಆದರೆ ಅವರು ಅಲ್ಲಿಗೆ ತಲುಪುವ ಮೊದಲೇ ಪಾಲಕ್ ಪತಿ ಅಮಿತ್ ಅವರಿಂದ ಕರೆ ಬಂದಿದ್ದು, ಪಾಲಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದರು. ದುರದೃಷ್ಟವಶಾತ್, ಆಕೆಯ ಕುಟುಂಬದವರು ಆಸ್ಪತ್ರೆ ತಲುಪುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದರು.
ಇದನ್ನೂ ಓದಿ: ವರದಕ್ಷಿಣೆ ಪಡೆದರೂ ತೀರದ ಧನ ದಾಹ, ಸಾಲದಕ್ಕೆ ಅನುಮಾನ: ಪತಿ ಟಾರ್ಚರ್ಗೆ ಪತ್ನಿ ಆತ್ಮಹತ್ಯೆ
ಪಾಲಕ್ ಅವರ ಕುತ್ತಿಗೆ, ಕಾಲುಗಳು ಮತ್ತು ದೇಹದ ಇತರ ಭಾಗಗಳಲ್ಲಿ ಗಾಯದ ಗುರುತುಗಳಿದ್ದು, ಇದು ಕೊಲೆಯ ಶಂಕೆಯನ್ನು ಹುಟ್ಟುಹಾಕಿದೆ ಎಂದು ತವರು ಮನೆಯವರು ಆರೋಪಿಸಿದ್ದಾರೆ. ಆಕೆಯ ಪತಿ, ಅತ್ತೆ ಮತ್ತು ಮೈದುನ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಪಾಲಕ್ ಕುಟುಂಬದವರು ಆರೋಪಿಸಿದ್ದಾರೆ. ಮದುವೆಯಾದಾಗಿನಿಂದಲೂ ಆಕೆಗೆ ಸತತವಾಗಿ ಹಿಂಸೆ ನೀಡಲಾಗುತ್ತಿತ್ತು. ಮನೆಯೊಳಗೆ ಯಾರೊಂದಿಗೂ ಮಾತನಾಡದಂತೆ ಕೂಡಿಹಾಕಲಾಗಿತ್ತು, ಆಹಾರವನ್ನೂ ನೀಡುತ್ತಿರಲಿಲ್ಲ ಎಂದು ಆಕೆಯ ಸಂಬಂಧಿಕರು ದೂರಿದ್ದಾರೆ.
ಆಕೆಯ ಸಾವಿನ ನಂತರ, ಆಕ್ರೋಶಗೊಂಡ ಪಾಲಕ್ ಸಂಬಂಧಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಬಹಳ ಹೊತ್ತಾದರೂ ಪಾಲಕ್ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಆಕೆಯ ಕೋಣೆಯ ಬಾಗಿಲನ್ನು ಒಡೆದು ಒಳಗೆ ಹೋಗಿ ನೋಡಿದಾಗ ಆಕೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಬದುಕಲಿಲ್ಲ ಎಂದು ಪಾಲಕ್ ಅವರ ಮಾವ (ಪತಿಯ ತಂದೆ) ಸಮರ್ಥಿಸಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ