Gyanvapi Case ನವೆಂಬರ್ 30ಕ್ಕೆ ಜ್ಞಾನವಾಪಿ ಶಿವಲಿಂಗದ ಕಾರ್ಬನ್ ಡೇಟಿಂಗ್ ಕುರಿತಾದ ಮೇಲ್ಮನವಿ ವಿಚಾರಣೆ
ಮೇಲ್ಮನವಿ ಅರ್ಜಿಯು ಮೇ 16, 2022 ರಂದು ಪತ್ತೆಯಾದ 'ಶಿವಲಿಂಗ'ದ ಅಡಿಯಲ್ಲಿ ನಿರ್ಮಾಣದ ಸ್ವರೂಪವನ್ನು ಕಂಡುಹಿಡಿಯಲು ಸೂಕ್ತ ಸಮೀಕ್ಷೆ ಅಥವಾ ಉತ್ಖನನವನ್ನು ಕೋರಿದೆ
ಪ್ರಯಾಗರಾಜ್: ಜ್ಞಾನವಾಪಿ ಮಸೀದಿ (Gyanvapi Case) ಸಂಕೀರ್ಣದಲ್ಲಿ ಪತ್ತೆಯಾಗಿದೆ ಎಂದು ಹೇಳಲಾದ ಶಿವಲಿಂಗದ (Shivling) ಕಾರ್ಬನ್ ಡೇಟಿಂಗ್ ಬೇಡಿಕೆಯನ್ನು ತಿರಸ್ಕರಿಸಿದ ವಾರಣಾಸಿ ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್(Allahabad High Court) ನವೆಂಬರ್ 30 ರಂದು ನಡೆಸಲಿದೆ. ಲಕ್ಷ್ಮೀದೇವಿ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆಜೆ ಮುನೀರ್ ಈ ಆದೇಶ ನೀಡಿದ್ದಾರೆ.ಅಕ್ಟೋಬರ್ 14 ರಂದು, ವಾರಣಾಸಿ ಜಿಲ್ಲಾ ನ್ಯಾಯಾಧೀಶ ಎ ಕೆ ವಿಶ್ವೇಶ್ ಅವರು ಯಾವುದೇ ಹಾನಿ ಮಾಡದಂತೆ ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಉಲ್ಲೇಖಿಸಿ ‘ಶಿವಲಿಂಗ’ ದ ವೈಜ್ಞಾನಿಕ ತನಿಖೆ ಮತ್ತು ಕಾರ್ಬನ್ ಡೇಟಿಂಗ್ ಕೋರಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ್ದರು. ಸೋಮವಾರ ಈ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಕೈಗೆತ್ತಿಕೊಂಡಾಗ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವಕೀಲರು ಸಮೀಕ್ಷೆಗೆ ಸಮಯ ವಿಸ್ತರಣೆಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿದರು. ಆದರೆ, ‘ಶಿವಲಿಂಗ’ಕ್ಕೆ ಯಾವುದೇ ಹಾನಿಯಾಗಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನಂತರ ಎಎಸ್‌ಐ ವಕೀಲರು ಇದರ ವಯಸ್ಸು ನಿರ್ಧರಿಸಲು ಹೆಚ್ಚಿನ ಮಾರ್ಗಗಳಿವೆ ಮತ್ತು ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಹೇಳಿದರು.
ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಸಮಿತಿಯ ಪರವಾಗಿ, ಈ ನಡುವೆ ‘ವಕಾಲತ್ ನಾಮ’ ಸಲ್ಲಿಸಬೇಕು ಎಂದು ಹೇಳಲಾಗಿದೆ. ‘ವಕಾಲತ್ ನಾಮ’ ಎಂಬುದು ಕಕ್ಷಿದಾರರು ಸಹಿ ಮಾಡಿದ ಲಿಖಿತ ದಾಖಲೆಯಾಗಿದ್ದು, ಅವರ ಪರವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ವಾದಿಸಲು ತನ್ನ ವಕೀಲರಿಗೆ ಅವಕಾಶ ನೀಡುತ್ತದೆ.
ಐದು ಹಿಂದೂ ಪಕ್ಷಗಳ ಪೈಕಿ ನಾಲ್ಕು ಪಕ್ಷಗಳು, ಮುಸ್ಲಿಂ ಭಕ್ತರು ನಮಾಝ್ ಸಲ್ಲಿಸುವ ಮೊದಲು ಧಾರ್ಮಿಕ ಶುದ್ಧೀಕರಣವನ್ನು ಮಾಡಲು ವಝೂಖಾನಾ ಸಮೀಪವಿರುವ ಮಸೀದಿ ಆವರಣದ ನ್ಯಾಯಾಲಯದ ವಿಡಿಯೊ ಸಮೀಕ್ಷೆಯ ಸಂದರ್ಭದಲ್ಲಿ ಕಂಡುಬಂದ ‘ಶಿವಲಿಂಗ’ದ ಕಾರ್ಬನ್ ಡೇಟಿಂಗ್ ಅನ್ನು ಕೋರಿದ್ದವು.
ಮೇಲ್ಮನವಿ ಅರ್ಜಿಯು ಮೇ 16, 2022 ರಂದು ಪತ್ತೆಯಾದ ‘ಶಿವಲಿಂಗ’ದ ಅಡಿಯಲ್ಲಿ ನಿರ್ಮಾಣದ ಸ್ವರೂಪವನ್ನು ಕಂಡುಹಿಡಿಯಲು ಸೂಕ್ತ ಸಮೀಕ್ಷೆ ಅಥವಾ ಉತ್ಖನನವನ್ನು ಕೋರಿದೆ. ಹಿಂದೂ ಪಕ್ಷಗಳು 1958 ರ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯ್ದೆಯ ನಿಬಂಧನೆಗಳಿಗೆ ಅನುಸಾರವಾಗಿ ‘ಶಿವಲಿಂಗ’ದ ವಯಸ್ಸು, ಸ್ವಭಾವ ಮತ್ತು ಇತರ ಘಟಕಗಳನ್ನು ನಿರ್ಧರಿಸಲು ಕಾರ್ಬನ್ ಡೇಟಿಂಗ್ ಮೂಲಕ ವೈಜ್ಞಾನಿಕ ತನಿಖೆಯನ್ನು ಬಯಸಿದೆ.