ಕಾಶ್ಮೀರಿ ಪಂಡಿತರ ವಲಸೆಗೆ ನಾನು ಹೊಣೆಯೆಂಬುದೇ ಸತ್ಯವಾಗಿದ್ದರೆ, ನನ್ನನ್ನು ಗಲ್ಲಿಗೇರಿಸಿ: ಫಾರೂಕ್ ಅಬ್ದುಲ್ಲಾ

1990ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ವಲಸೆ, ಹತ್ಯೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಪ್ರಾಮಾಣಿಕ  ನ್ಯಾಯಾಧೀಶರ ಸಮಿತಿಯನ್ನು ರಚನೆ ಮಾಡಬೇಕು. ಆಗಷ್ಟೇ ಸತ್ಯ ಹೊರಬೀಳುತ್ತದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಕಾಶ್ಮೀರಿ ಪಂಡಿತರ ವಲಸೆಗೆ ನಾನು ಹೊಣೆಯೆಂಬುದೇ ಸತ್ಯವಾಗಿದ್ದರೆ, ನನ್ನನ್ನು ಗಲ್ಲಿಗೇರಿಸಿ: ಫಾರೂಕ್ ಅಬ್ದುಲ್ಲಾ
ಫಾರೂಕ್​ ಅಬ್ದುಲ್ಲಾ
Updated By: Lakshmi Hegde

Updated on: Mar 22, 2022 | 3:22 PM

ಕಾಶ್ಮೀರಿ ಪಂಡಿತರ ಹತ್ಯಾಕಾಂಡ, ವಲಸೆ ಕಥಾಹಂದರ ಇರುವ ದಿ ಕಾಶ್ಮೀರ ಫೈಲ್ಸ್​​ ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಅದರಲ್ಲೂ ರಾಜಕಾರಣಿಗಳು ವಿಶೇಷವಾಗಿ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಈಗ ಜಮ್ಮು-ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್​ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಕೂಡ ಮಾತನಾಡಿದ್ದು, ಬಿಜೆಪಿ ಆಡಳಿತದಲ್ಲಿರುವ ಕೆಲವು ಸರ್ಕಾರಗಳು ದಿ ಕಾಶ್ಮೀರಿ ಫೈಲ್ಸ್​ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸುತ್ತಿವೆ. ಈ ಮೂಲಕ ಜನರ ಹೃದಯದಲ್ಲಿ ನಮ್ಮ ಬಗ್ಗೆ ಇನ್ನಷ್ಟು ದ್ವೇಷ ಹುಟ್ಟುವಂತೆ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ತೆರಿಗೆ ವಿನಾಯಿತಿ ಘೋಷಣೆ ಮಾಡುವ ಜತೆಗೆ ಸಿನಿಮಾವನ್ನು ಪ್ರತಿಯೊಬ್ಬರೂ ನೋಡಿ ಎಂಬ ಕರೆ ನೀಡಲಾಗುತ್ತಿದೆ. ಪ್ರತಿಯೊಬ್ಬ ಯೋಧ, ಪೊಲೀಸ್​ ಕೂಡ ದಿ ಕಾಶ್ಮೀರ್ ಫೈಲ್ಸ್ ನೋಡಬೇಕು ಎಂದು ಸಾರಲಾಗುತ್ತಿದೆ. ಇದರಿಂದಾಗಿ ಜನರಿಗೆ ನಮ್ಮ ಬಗ್ಗೆ ಇನ್ನಷ್ಟು ದ್ವೇಷ ಹುಟ್ಟಿಕೊಳ್ಳುತ್ತದೆ ಎಂದು ಹೇಳಿದ ಫಾರೂಕ್​ ಅಬ್ದುಲ್ಲಾ, ಪ್ರಚಾರಕ್ಕಾಗಿ ಮಾಡಲಾದ ಸಿನಿಮಾ ಇದು. ದಿ ಕಾಶ್ಮೀರಿ ಫೈಲ್ಸ್ ಎಂಬುದು ಪ್ರತಿ ರಾಜ್ಯದ ಹಿಂದು-ಮುಸ್ಲಿಮರನ್ನು ಬಾಧಿಸುತ್ತದೆ. ಅಂದಿನ ದುರಂತ ನೆನಪಿಸಿಕೊಂಡರೆ ಇಂದಿಗೂ ಭಯವಾಗುತ್ತದೆ. ಜನಾಂಗೀಯ ನಿರ್ಮೂಲನೆಯಲ್ಲಿ ಆಸಕ್ತಿಹೊಂದಿದ್ದ ರಾಜಕೀಯ ಪಕ್ಷಗಳ ಪಾತ್ರ ಆ ದುರ್ಘಟನೆಯಲ್ಲಿ ಜಾಸ್ತಿ ಇದೆ ಎಂದು ವಿಶ್ಲೇಷಿಸಿದ್ದಾರೆ.

ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಅವರು, 1990ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ವಲಸೆ, ಹತ್ಯೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಪ್ರಾಮಾಣಿಕ  ನ್ಯಾಯಾಧೀಶರ ಸಮಿತಿಯನ್ನು ರಚನೆ ಮಾಡಬೇಕು. ಆಗಷ್ಟೇ ಸತ್ಯ ಹೊರಬೀಳುತ್ತದೆ. ದುರಂತಕ್ಕೆ ಫಾರೂಕ್​ ಅಬ್ದುಲ್ಲಾರೇ ಹೊಣೆ ಎಂಬುದು ಸತ್ಯವಾದರೆ, ಈ ದೇಶದ ಯಾವುದೇ ಮೂಲೆಗೆ ಕರೆದುಕೊಂಡು ಹೋಗಿ ನೇಣಿಗೇರಿಸಿದರೂ ಅದಕ್ಕೆ ನಾನು ಸಿದ್ಧನಿದ್ದೇನೆ. ತನಿಖೆಯಾಗಲಿ, ಅದು ಬಿಟ್ಟು ಸುಮ್ಮನೆ ಯಾರನ್ನೋ ಹೊಣೆ ಮಾಡಬಾರದು. ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯಕ್ಕೆ ನಾನು ಹೊಣೆಗಾರನಲ್ಲ. ಈ ಬಗ್ಗೆ ಸತ್ಯ ತಿಳಿದುಕೊಳ್ಳಲು ಇಚ್ಛಿಸುವವರು, ಆ ಸಮಯದಲ್ಲಿ ಗುಪ್ತಚರ ಇಲಾಖೆ ಮುಖ್ಯಸ್ಥನಾಗಿದ್ದವರ ಬಳಿ ಮಾತನಾಡಬೇಕು. ಇಲ್ಲವೇ ಕೇರಳದ ಈಗಿನ ರಾಜ್ಯಪಾಲ ಆರಿಫ್ ಮೊಹಮ್ಮದ್​ ಖಾನ್​ ಅವರನ್ನೂ ಕೇಳಬಹುದು. ಯಾಕೆಂದರೆ ಆ ಸಮಯದಲ್ಲಿ ಅವರು ಕೇಂದ್ರ ಸಚಿವರಾಗಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ:  ದಿ ಕಾಶ್ಮೀರ್ ಫೈಲ್ಸ್​​​ನಲ್ಲಿ ತುಂಬ ಸುಳ್ಳುಗಳಿವೆ, 1990ರಲ್ಲಿ ಎನ್​​ಸಿ ಸರ್ಕಾರವಿರಲಿಲ್ಲ: ಒಮರ್​ ಅಬ್ದುಲ್ಲಾ