ದಿ ಕಾಶ್ಮೀರ್ ಫೈಲ್ಸ್ನಲ್ಲಿ ತುಂಬ ಸುಳ್ಳುಗಳಿವೆ, 1990ರಲ್ಲಿ ಎನ್ಸಿ ಸರ್ಕಾರವಿರಲಿಲ್ಲ: ಒಮರ್ ಅಬ್ದುಲ್ಲಾ
ದಕ್ಷಿಣ ಕಾಶ್ಮಿರದ ಕುಲಗಾಂವ್ನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಒಮರ್ ಅಬ್ದುಲ್ಲಾ, ಈ ಸಿನಿಮಾ ಒಂದು ಸಾಕ್ಷ್ಯಚಿತ್ರವೋ ಅಥವಾ ಸಿನಿಮಾವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಬಾಲಿವುಡ್ ಸಿನಿಮಾ ಸದ್ಯ ದೇಶದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಕಾಶ್ಮೀರಿ ಪಂಡಿತರ ನರಮೇಧ, ಅವರ ಮೇಲಿನ ದೌರ್ಜನ್ಯವನ್ನು ಈ ಸಿನಿಮಾದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವು ರಾಜ್ಯಗಳು ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿವೆ. ಹಾಗೇ, ರಾಜಕಾರಣಿಗಳೂ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಸೇರಿ ಇನ್ನಿತರ ಕೆಲವು ಪ್ರತಿಪಕ್ಷಗಳು ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ವ್ಯಂಗ್ಯ ಮಾಡುತ್ತಿವೆ. ಈಗಾಗಲೇ ಹಲವು ನಾಯಕರೂ ಈ ನಿಟ್ಟಿನಲ್ಲಿ ಕಮೆಂಟ್ಗಳನ್ನು ಮಾಡಿದ್ದು, ಅವರ ಸಾಲಿಗೆ ಈಗ ನ್ಯಾಶನಲ್ ಕಾನ್ಫರೆನ್ಸ್ ಕಾರ್ಯಕಾರಿ ಅಧ್ಯಕ್ಷ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರ್ಪಡೆಯಾಗಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅನೇಕ ಸುಳ್ಳು ವಿಚಾರಗಳನ್ನು ಬಿಂಬಿಸಲಾಗಿದೆ ಎಂದು ಆರೋಪಿಸಿದ್ದಾರೆ.
ದಕ್ಷಿಣ ಕಾಶ್ಮಿರದ ಕುಲಗಾಂವ್ನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಿನಿಮಾ ಒಂದು ಸಾಕ್ಷ್ಯಚಿತ್ರವೋ ಅಥವಾ ಸಿನಿಮಾವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಾಸ್ತವತೆಯ ನೆಲೆಗಟ್ಟಿನ ಮೇಲೆ ಸಿನಿಮಾ ಮಾಡಲಾಗಿದೆ ಎಂದು ತಯಾರಕರು ಹೇಳುತ್ತಾರೆ. ಆದರೆ ನಿಜಕ್ಕೂ ಈ ಸಿನಿಮಾದಲ್ಲಿ ಹಲವು ಸುಳ್ಳುಗಳನ್ನು ಹೇಳಲಾಗಿದೆ. ಅದರಲ್ಲೂ ಬಹುದೊಡ್ಡ ಸುಳ್ಳು ಎಂದರೆ, 1990ರಲ್ಲಿ ಎನ್ಸಿ ಸರ್ಕಾರವಿತ್ತು ಎಂಬುದು. ಕಾಶ್ಮೀರಿ ಪಂಡಿತರು ಇಲ್ಲಿಂದ ಬಿಟ್ಟು ಹೊರಟಾಗ ಇಲ್ಲಿ ರಾಜ್ಯಪಾಲರ ಆಳ್ವಿಕೆ ಇತ್ತು. ಕೇಂದ್ರ ಸರ್ಕಾರದಲ್ಲಿದ್ದ ವಿ.ಪಿ.ಸಿಂಗ್ ಸರ್ಕಾರಕ್ಕೆ ಬಿಜೆಪಿ ಬೆಂಬಲವಿತ್ತು ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಆ ಸಮಯದಲ್ಲಿ ಹತ್ಯೆಗೀಡಾದವರು, ವಲಸೆ ಹೋದವರು ಬರೀ ಕಾಶ್ಮೀರಿ ಪಂಡಿತರು ಮಾತ್ರವಲ್ಲ. ಮುಸ್ಲಿಮರು ಮತ್ತು ಸಿಖ್ಖರ ಹತ್ಯೆಯೂ ಆಗಿದೆ. ಅವರೂ ಅನೇಕರು ಇಲ್ಲಿಂದ ವಲಸೆ ಹೋಗಿದ್ದಾರೆ. ಇದುವರೆಗೂ ಅವರಿಗೆ ಕಾಶ್ಮೀರಕ್ಕೆ ವಾಪಸ್ ಬರಲು ಸಾಧ್ಯವಾಗಲಿಲ್ಲ. ಹಾಗೇ. ವಲಸೆ ಹೋಗಿರುವ ಕಾಶ್ಮಿರಿ ಪಂಡಿತರನ್ನು ಮತ್ತೆ ವಾಪಸ್ ಕರೆತರಲು ಎನ್ಸಿ ಪಕ್ಷ ಕೂಡ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಅದನ್ನು ಮುಂದೆಯೂ ಮುಂದುವರಿಸಲಾಗುವುದು ಎಂದಿದ್ದಾರೆ.
ಇನ್ನು ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಬಿಹಾರ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಕೂಡ ಟೀಕೆ ಮಾಡಿದ್ದರು. ಜಮ್ಮು-ಕಾಶ್ಮೀರದಿಂದ ವಲಸೆ ಹೋಗಿರುವ ಪಂಡಿತರು ಮತ್ತೆ ಇಲ್ಲಿಗೆ ವಾಪಸ್ ಬರಲು ಬಿಡಬಾರದು ಎಂದು ಮಾಡಿರುವ ಪಿತೂರಿ ಈ ಸಿನಿಮಾ ಎಂದು ಆರೋಪಿಸಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಭಯೋತ್ಪಾದಕ ಸಂಘಟನೆಗಳು ಮತ್ತು ಸಿನಿಮಾದ ನಿರ್ಮಾಪಕರ ನಡುವೆ ಸಂಪರ್ಕ ಇರಬಹುದು ಎಂದೂ ಅನುಮಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಕಂಡು ಕೇಳರಿಯದಂತಹ ‘ಆರ್ಆರ್ಆರ್’ ಪ್ರೀ ರಿಲೀಸ್ ಇವೆಂಟ್ಗೆ ಭರ್ಜರಿ ಸಿದ್ಧತೆ: ಇಲ್ಲಿದೆ ವಿಡಿಯೋ
Published On - 9:50 am, Sat, 19 March 22