ಅಹಮದಾಬಾದ್: ಕಾಂಗ್ರೆಸ್ ಪಕ್ಷದಲ್ಲಿ ಹೊಸ ಭರವಸೆ ಮೂಡಿಸಿದ್ದ ಯುವ ನೇತಾರ ಹಾರ್ದಿಕ್ ಪಟೇಲ್ (Hardik Patel) ಬುಧವಾರ (ಮೇ 18) ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಶೀಘ್ರದಲ್ಲಿಯೆ ದಿನಾಂಕ ಘೋಷಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪಾಟಿದಾರ್ ಸಮುದಾಯದ ಹಿರಿಯ ನಾಯಕ ಹಾರ್ದಿಕ್ ಪಟೇಲ್ ನಡೆ ಮಹತ್ವ ಪಡೆದುಕೊಂಡಿದೆ.
ರಾಜಸ್ಥಾನದ ಉದಯಪುರದಲ್ಲಿ ನಡೆದ ಮೂರು ದಿನಗಳ ಚಿಂತನ ಸಭೆಯಲ್ಲಿಯೂ ಹಾರ್ದಿಕ್ ಪಟೇಲ್ ಪಾಲ್ಗೊಂಡಿರಲಿಲ್ಲ. ಮೇ 15ರಂದು ಪಾಟಿದಾರ್ ಸಮುದಾಯದ ಪ್ರಭಾವಿ ನಾಯಕ ನರೇಶ್ ಪಟೇಲ್ ಅವರಿಗೆ ರಾಜಕೀಯ ಸೇರ್ಪಡೆ ಕುರಿತು ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ಹಾರ್ದಿಕ್ ಪಟೇಲ್ ವಿನಂತಿಸಿದ್ದರು.
ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಹೋರಾಡುತ್ತಿದ್ದ ಅಲ್ಪೇಶ್ ಕಠಾರಿಯಾ ಮತ್ತು ದಿನೇಶ್ ಬಂಭಾನಿಯಾ ಅವರೊಂದಿಗೆ ಹಾರ್ದಿಕ್ ಪಟೇಲ್ ಮೇ 15ರಂದು ನರೇಶ್ ಪಟೇಲ್ ಅವರನ್ನು ಭೇಟಿಯಾಗಿದ್ದರು. ಹಾರ್ದಿಕ್ ಪಟೇಲ್ ಕಾಂಗ್ರೆಸ್ ತೊರೆಯಬಹುದು ಎಂಬ ಮಾತುಗಳು ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಗುಜರಾತ್ನ ಕಾಂಗ್ರೆಸ್ ನಾಯಕರು ತಮಗೆ ಸಹರಿಸುತ್ತಿಲ್ಲ. ಯುವಜನರ ಸಂಘಟನೆಗೆ ನೆರವಾಗುತ್ತಿಲ್ಲ ಎಂದು ಹಾರ್ದಿಕ್ ಪಟೇಲ್ ಈ ಮೊದಲು ಸಾರ್ವಜನಿಕವಾಗಿ ದೂರಿದ್ದರು.
ಉದಯಪುರದಲ್ಲಿ ಕಾಂಗ್ರೆಸ್ನ ಚಿಂತನ ಶಿಬಿರ ನಡೆಯುತ್ತಿದ್ದಾಗ ಹಾರ್ದಿಕ್ ಪಟೇಲ್ ಸುದ್ದಿವಾಹಿನಿಗಳಿಗೆ ಸರಣಿ ಸಂದರ್ಶನಗಳನ್ನು ಕೊಟ್ಟು ಸಾರ್ವಜನಿಕವಾಗಿಯೇ ಪಕ್ಷದ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳ ವಿರುದ್ಧ ಹೋರಾಟ ರೂಪಿಸಲು ಗುಜರಾತ್ ಕಾಂಗ್ರೆಸ್ ನಾಯಕರು ಅವಕಾಶ ನೀಡುತ್ತಿಲ್ಲ. ಇದರಿಂದ ನನಗೆ ಭ್ರಮನಿರಸನವಾಗಿದೆ ಎಂದು ದೂರಿದ್ದರು.
ಉದಯಪುರದ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಪಾಲ್ಗೊಳ್ಳದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಅವರು, ‘ನನಗೆ ಗುಜರಾತ್ನಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳಿದ್ದವು’ ಎಂದಷ್ಟೇ ಹೇಳಿದ್ದರು.
(ಮತ್ತಷ್ಟು ಮಾಹಿತಿ ಶೀಘ್ರ ಅಪ್ಡೇಟ್ ಅಗಲಿದೆ)
Published On - 10:46 am, Wed, 18 May 22