ದೆಹಲಿ: ವಿವಾದಿತ ಹರಿದ್ವಾರ (Haridwar) ಧರ್ಮ ಸಂಸದ್ ದ್ವೇಷ ಭಾಷಣ (Hate speech) ಪ್ರಕರಣದಲ್ಲಿ ದಾಸ್ನಾ ದೇವಸ್ಥಾನದ ಮುಖ್ಯ ಅರ್ಚಕ ಯತಿ ನರಸಿಂಹಾನಂದ್ಗೆ (Yati Narsinghanand) ಹರಿದ್ವಾರ ನ್ಯಾಯಾಲಯ ಜಾಮೀನು ನೀಡಿದೆ. ಹರಿದ್ವಾರದಲ್ಲಿ ಧರ್ಮ ಸಂಸದ್ ಆಯೋಜಿಸಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಸುಮಾರು ಒಂದು ತಿಂಗಳ ನಂತರ ಜನವರಿ 15 ರಂದು ನರಸಿಂಹಾನಂದ್ ಅವರನ್ನು ಬಂಧಿಸಲಾಯಿತು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಭರತ್ ಭೂಷಣ್ ಪಾಂಡೆ ಅವರು ಸೋಮವಾರ ಪ್ರಕರಣದ ವರ್ಚುವಲ್ ವಿಚಾರಣೆಯ ನಂತರ ನರಸಿಂಹಾನಂದ ಅವರಿಗೆ ಜಾಮೀನು ಮಂಜೂರು ಮಾಡಿದರು. ನರಸಿಂಹಾನಂದ ಅವರಿಗೆ ಕೆಲವು ಷರತ್ತುಗಳೊಂದಿಗೆ ಜಾಮೀನು ನೀಡಲಾಗಿದೆ. ಸಾಮಾಜಿಕ ಸೌಹಾರ್ದತೆಗೆ ಭಂಗ ತರುವಂತಹ ಯಾವುದೇ ಭಾಷಣ ಮಾಡಬಾರದು ಎಂದು ನ್ಯಾಯಾಲಯ ಅವರಿಗೆ ಸೂಚಿಸಿದೆ. ವಿವಿಧ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವ ಉದ್ದೇಶದಿಂದ ನರಸಿಂಹಾನಂದರು ಯಾವುದೇ ಗುಂಪು ಅಥವಾ ಈವೆಂಟ್ನ ಭಾಗವಾಗದಂತೆ ಅದು ನಿರ್ಬಂಧಿಸಿದೆ. ಪ್ರಕರಣದ ತನಿಖಾಧಿಕಾರಿಯ ಸಮನ್ಸ್ಗೆ ಅವರು ಪ್ರತಿಕ್ರಿಯಿಸಬೇಕಾಗುತ್ತದೆ. ನರಸಿಂಹಾನಂದ ಅವರು ಪ್ರಕರಣದ ಸಾಕ್ಷಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬೆದರಿಸಬಾರದು ಅಥವಾ ನ್ಯಾಯಾಲಯದ ಅನುಮತಿಯಿಲ್ಲದೆ ವಿದೇಶಕ್ಕೆ ಹೋಗಬಾರದು ಎಂದು ಅದು ಹೇಳಿದೆ. ಹರಿದ್ವಾರದಲ್ಲಿ ಡಿಸೆಂಬರ್ 17-19ರವರೆಗೆ ಧರ್ಮ ಸಂಸದ್ ನಡೆದಿತ್ತು.
ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಹೆಚ್ಚು ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕೆ ಸಂಬಂಧಿಸಿದಂತೆ ಹರಿದ್ವಾರದಲ್ಲಿ ನರಸಿಂಹಾನಂದ ಸೇರಿದಂತೆ 10ಕ್ಕೂ ಹೆಚ್ಚು ಜನರ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.
ಜನವರಿ 13 ರಂದು ವಸೀಮ್ ರಿಜ್ವಿ ಅಕಾ ಜಿತೇಂದ್ರ ನಾರಾಯಣ್ ತ್ಯಾಗಿ ಬಂಧನವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ನರಸಿಂಹಾನಂದ್ ಅವರನ್ನು ಜನವರಿ 15 ರಂದು ಹರಿದ್ವಾರ ಪೊಲೀಸರು ಸರ್ವಾನಂದ ಘಾಟ್ನಿಂದ ಬಂಧಿಸಿದ್ದರು. ದ್ವೇಷ ಭಾಷಣದ ಪ್ರಕರಣದಲ್ಲಿ ತ್ಯಾಗಿ ಅವರ ಹೆಸರೂ ಇತ್ತು. ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ, ದೆಹಲಿ ಪೊಲೀಸರು ಮತ್ತು ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ನಂತರ ತ್ಯಾಗಿ ಮತ್ತು ನರಸಿಂಹಾನಂದ್ ಬಂಧನ ನಡೆದಿದೆ. ಹರಿದ್ವಾರದಲ್ಲಿ ಯತಿ ನರಸಿಂಹಾನಂದ ಅವರು ಆಯೋಜಿಸಿದ್ದ ಮತ್ತು ದೆಹಲಿಯಲ್ಲಿ ಹಿಂದೂ ಯುವ ವಾಹಿನಿಯವರು ನಿರ್ದಿಷ್ಟ ಸಮುದಾಯದವರ ನರಮೇಧಕ್ಕೆ ಕರೆ ನೀಡಿದ್ದಾರೆ ಎಂದು ಹೇಳಲಾದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರ ದ್ವೇಷದ ಭಾಷಣದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಈ ನೋಟಿಸ್ ನೀಡಲಾಗಿದೆ.
ಜನವರಿ ತಿಂಗಳ ಆರಂಭದಲ್ಲಿ ನಿರ್ದಿಷ್ಟ ಸಮುದಾಯದ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ರುಚಿಕಾ ಎಂಬುವವರ ದೂರಿನ ಮೇರೆಗೆ ಯತಿ ನರಸಿಂಹಾನಂದ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿತ್ತು ಜನವರಿ 4 ರಂದು ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ನರಸಿಂಹಾನಂದರು ನಿರ್ದಿಷ್ಟ ಸಮುದಾಯದ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು .
Published On - 4:44 pm, Tue, 8 February 22