ಭದ್ರವಾಗಿದೆ ಹರ್ಯಾಣದ ಬಿಜೆಪಿ ಸರ್ಕಾರ: 55-32 ಅಂತರದಲ್ಲಿ ಖಟ್ಟರ್ ವಿಶ್ವಾಸಮತ ಸಾಬೀತು

| Updated By: ganapathi bhat

Updated on: Apr 06, 2022 | 7:17 PM

Haryana: ಹರ್ಯಾಣದಲ್ಲಿ ಆಡಳಿತ ಸ್ಥಾನ ಹೊಂದಿದ್ದ ಬಿಜೆಪಿ-ಜೆಜೆಪಿ ಸರ್ಕಾರ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಎದುರಿಟ್ಟಿದ್ದ ಅವಿಶ್ವಾಸ ನಿರ್ಣಯದ ವಿರುದ್ಧ ಬಿಜೆಪಿ ನೇತೃತ್ವದ ಆಡಳಿತ ಪಕ್ಷ ಗೆಲುವುದ ಸಾಧಿಸಿದೆ.

ಭದ್ರವಾಗಿದೆ ಹರ್ಯಾಣದ ಬಿಜೆಪಿ ಸರ್ಕಾರ: 55-32 ಅಂತರದಲ್ಲಿ ಖಟ್ಟರ್ ವಿಶ್ವಾಸಮತ ಸಾಬೀತು
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
Follow us on

ದೆಹಲಿ: ಹರ್ಯಾಣದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ವಿರುದ್ಧ ಬಿಜೆಪಿ ನೇತೃತ್ವದ ಆಡಳಿತ ಮೈತ್ರಿಕೂಟ ಸಾಧಿಸಿದೆ. ಎಲ್ಲಾ ಕಾಂಗ್ರೆಸ್ ಶಾಸಕರು ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿದರೂ, ಸರ್ಕಾರ ಉರುಳಿಸಲು ಸಾಧ್ಯವಾಗಲಿಲ್ಲ. ಬಿಜೆಪಿ ಮತ್ತು ಜೆಜೆಪಿ ಶಾಸಕರು ಒಗ್ಗಟ್ಟಿನಿಂದ ಸರ್ಕಾರದ ಮತ ಚಲಾಯಿಸಿ, ವಿಶ್ವಾಸಮತ ಸಾಬೀತುಪಡಿಸಲು ಯಶಸ್ವಿಯಾದರು. ಅವಿಶ್ವಾಸ ನಿರ್ಣಯದ ಪರವಾಗಿ 32 ಮತ ಬಿದ್ದಿದ್ದರೆ, ವಿರುದ್ಧವಾಗಿ 55 ಮತ ಬಿದ್ದಿತ್ತು.

ಅವಿಶ್ವಾಸ ಎಂಬುದು ಕಾಂಗ್ರೆಸ್ ಸಂಸ್ಕೃತಿ. ಕಾಂಗ್ರೆಸ್ ಸೋತಾಗ EVM ಬಗ್ಗೆ ಪಕ್ಷಕ್ಕೆ ವಿಶ್ವಾಸ ಇರುವುದಿಲ್ಲ. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕಾಂಗ್ರೆಸ್​ಗೆ ವಿಶ್ವಾಸ ಇರುವುದಿಲ್ಲ. ಕಾಂಗ್ರೆಸ್ ಆಗ ಸಾಕ್ಷಿ ಕೇಳುತ್ತದೆ. ಆಲೋಚನೆ ಮಾಡಬೇಕು ಎಂದು ಆಲೋಚನೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಆಡಳಿತ ವಹಿಸಿದ್ದರೆ ಎಲ್ಲಾ ಸರಿ. ಬಿಜೆಪಿ ಅಧಿಕಾರ ಹೊಂದಿದ್ದರೆ ಯಾವುದೂ ಸರಿಯಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವಿಶ್ವಾಸ ನಿರ್ಣಯದ ಚರ್ಚೆಯ ಸಂದರ್ಭ ವಾಗ್ದಾಳಿ ನಡೆಸಿದರು.

ಬಿಜೆಪಿ ವಿಶ್ವಾಸಮತ ಸಾಬೀತುಪಡಿಸಿರುವುದರ ಬಗ್ಗೆ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಪ್ರತಿಕ್ರಿಯೆ ನೀಡಿದರು. ಬಿಜೆಪಿ ವಿಪ್ ಜಾರಿಗೊಳಿಸಿದ ಕಾರಣ ಅವರಿಗೆ ವಿಶ್ವಾಸಮತ ಸಾಬೀತುಪಡಿಸಲು ಸಾಧ್ಯವಾಯಿತು. ನಾನು ಗುಪ್ತ ಮತದಾನ ನಡೆಸುವಂತೆ ಸ್ಪೀಕರ್ ಬಳಿ ಕೇಳಿಕೊಂಡೆ. ಆದರೆ, ಅದು ಸಾಧ್ಯವಾಗಲಿಲ್ಲ. ಒಂದುವೇಳೆ ಗುಪ್ತ ಮತದಾನ ನಡೆದಿದ್ದರೆ ಫಲಿತಾಂಶ ಬೇರೆಯದೇ ಆಗಿರುತ್ತಿತ್ತು. ಏನೇ ಆದರೂ ನಮ್ಮ ಪರವಾದ ಸದಸ್ಯರ ಸಂಖ್ಯೆ 30 ರಿಂದ 32ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.

ಆಡಳಿತ ಪಕ್ಷಕ್ಕೆ ಬೆಂಬಲ ಸೂಚಿಸಿದ್ದ ಇಬ್ಬರು ಪಕ್ಷೇತರ ಶಾಸಕರು ತಮ್ಮ ಬೆಂಬಲವನ್ನು ಹಿಂಪಡೆದಿದ್ದಾರೆ ಎಂದು ಕಾಂಗ್ರೆಸ್ ಹೇಳಿತ್ತು. ಈ ಕಾರಣದಿಂದ ಆಡಳಿತ ವಹಿಸಿದ್ದ ಬಿಜೆಪಿಗೆ ಬಿಕ್ಕಟ್ಟು ಉಂಟಾಗಿತ್ತು. ನೂತನ ಕೃಷಿ ಕಾಯ್ದೆಗಳ ಬಗ್ಗೆ ಕೇಂದ್ರ ತಾಳಿರುವ ನಿಲುವನ್ನು ವಿರೋಧಿಸಿ ಪಕ್ಷಕ್ಕೆ ಮುಜುಗರ ತರುವ ಉದ್ದೇಶದಿಂದ ಹೀಗೆ ಷಡ್ಯಂತ್ರ ರೂಪಿಸಲಾಗಿದೆ ಎಂದು ಒಂದೆಡೆ ಅಭಿಪ್ರಾಯಗಳು ಕೇಳಿಬಂದಿದ್ದವು. ದುಷ್ಯಂತ್ ಚೌಟಾಲರ ಜನ್​ನಾಯಕ್ ಜನತಾ ಪಾರ್ಟಿ (JJP) ಜತೆಗೆ ಮೈತ್ರಿ ಹೊಂದಿರುವ ಬಿಜೆಪಿ, ಆಡಳಿತ ಸರ್ಕಾರಕ್ಕೆ ಯಾವುದೇ ಕುತ್ತು ಉಂಟಾಗಿಲ್ಲ ಎಂದು ಹೇಳಿತ್ತು.

ಈ ನಡುವೆ, ಪಕ್ಷದವರನ್ನು ತಮ್ಮ ತಮ್ಮ ಕ್ಷೇತ್ರಗಳ ರೈತಾಪಿ ಜನರು ಕಡೆಗಣಿಸುತ್ತಿದ್ದಾರೆ, ಬಹಿಷ್ಕರಿಸುತ್ತಿದ್ದಾರೆ ಎಂದು ಸ್ವತಃ ಜೆಜೆಪಿ ಸದಸ್ಯರು ಒಪ್ಪಿಕೊಂಡಿದ್ದರು. ಹೀಗಾಗಿ ಬಿಜೆಪಿಗೆ ರೈತ ಹೋರಾಟದ ನಡುವೆ ಸರ್ಕಾರವನ್ನು ಭದ್ರವಾಗಿ ಉಳಿಸಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿತ್ತು. ಆದರೆ ಇದೀಗ, ವಿಶ್ವಾಸಮತ ಸಾಬೀತುಪಡಿಸುವಲ್ಲಿ ಬಿಜೆಪಿ-ಜೆಜೆಪಿ ಯಶಸ್ವಿಯಾಗಿದೆ.

ಇದನ್ನೂ ಓದಿ: ರೈತರ ಹೋರಾಟದ ಪರಿಣಾಮ: ಅವಿಶ್ವಾಸ ಮತ ಎದುರಿಸುತ್ತಿರುವ ಹರ್ಯಾಣ ಬಿಜೆಪಿ ಸರ್ಕಾರ!

ಅರ್ಹರು ಕೊವಿಡ್-19 ಲಸಿಕೆ ಪಡೆಯುವಂತೆ ಸಹಕರಿಸಿ: ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ

Published On - 5:38 pm, Wed, 10 March 21