ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಹರಿಯಾಣ ಸರ್ಕಾರ

| Updated By: Lakshmi Hegde

Updated on: Oct 03, 2021 | 12:25 PM

ಪದೇಪದೆ ರಸ್ತೆ ತಡೆಯಿಂದಾಗಿ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ..ನಿಮಗೆ ಪ್ರತಿಭಟನೆ ನಡೆಸಲು ಎಷ್ಟು ಹಕ್ಕಿದೆಯೋ, ಅಷ್ಟೇ ಹಕ್ಕು ಜನಸಾಮಾನ್ಯರಿಗೆ ಸಂಚಾರ ಮಾಡಲೂ ಇದೆ ಎಂದು ಸುಪ್ರೀಂಕೋರ್ಟ್​ ರೈತರಿಗೆ ನೇರವಾಗಿಯೇ ಹೇಳಿದೆ.

ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಹರಿಯಾಣ ಸರ್ಕಾರ
ರೈತರ ಪ್ರತಿಭಟನೆ ಚಿತ್ರ
Follow us on

ಚಂಡಿಗಢ್​: ಕೇಂದ್ರದ ಮೂರು ಕೃಷಿ ಕಾಯ್ದೆ (Farm Laws)ಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಪದೇಪದೆ ಹೆದ್ದಾರಿ, ರಸ್ತೆಗಳನ್ನು ಬಂದ್​ ಮಾಡುತ್ತಿರುವುದರಿಂದ ಆ ಭಾಗದ ಸಾಮಾನ್ಯ ಜನರು ರೋಸಿ ಹೋಗಿದ್ದಾರೆ. ಮೊನ್ನೆ ಸೆಪ್ಟೆಂಬರ್​ 27ರಂದು ಕೂಡ ಭಾರತ್​ ಬಂದ್​ ನೆಪದಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್​ ಮಾಡಿದ್ದರು. ಇದಕ್ಕೊಂದು ಕೊನೆ ಬೇಕು ಎಂದು ಮನವಿ ಮಾಡಿ ಹರ್ಯಾಣ ಸರ್ಕಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ರೈತರು ಹೆದ್ದಾರಿಗಳನ್ನು ಬಂದ್​ ಮಾಡದಂತೆ ಸೂಚನೆ ನೀಡುವಂತೆ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದೆ.  

ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಸಂಬಂಧ ಹೀಗೆ ಒಬ್ಬರಲ್ಲ ಒಬ್ಬರು ಸುಪ್ರೀಂಕೋರ್ಟ್​ ಮೆಟ್ಟಿಲೇರುವುದು ಸಾಮಾನ್ಯ ಎಂಬಂತಾಗಿದೆ. ಇತ್ತೀಚೆಗೆ ಕಿಸಾನ್ ಮಹಾಪಂಚಾಯತ್​ ರೈತ ಸಂಘಟನೆ ಸುಪ್ರಿಂಕೋರ್ಟ್​ಗೆ ಅರ್ಜಿ ಸಲ್ಲಿಸಿ, ದೆಹಲಿಯ ಜಂತರ್​ ಮಂತರ್​ನಲ್ಲಿ ಶಾಂತಿಯುತವಾಗಿ ಸತ್ಯಾಗ್ರಹ ನಡೆಸಲು ಅನುವು ಮಾಡಿಕೊಡಬೇಕು. ಈ ಸಂಬಂಧ ದೆಹಲಿ ಲೆಫ್ಟಿನೆಂಟ್​ ಗವರ್ನರ್​, ಪೊಲೀಸ್​ ಕಮಿಷನರ್​ಗೆ ಸೂಚನೆ ನೀಡಬೇಕು ಎಂದು ಹೇಳಿತ್ತು. ಅದರ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರಿಂಕೋರ್ಟ್​ ರೈತರನ್ನೇ ತರಾಟೆಗೆ ತೆಗೆದುಕೊಂಡಿತ್ತು. ಈಗಾಗಲೇ ಇಡೀ ದೆಹಲಿಯ ಕತ್ತು ಹಿಸುಕಿದ್ದೀರಿ ಎಂದೂ ಹೇಳಿತ್ತು.

ಇನ್ನು ಪದೇಪದೆ ರಸ್ತೆ ತಡೆಯಿಂದಾಗಿ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ..ನಿಮಗೆ ಪ್ರತಿಭಟನೆ ನಡೆಸಲು ಎಷ್ಟು ಹಕ್ಕಿದೆಯೋ, ಅಷ್ಟೇ ಹಕ್ಕು ಜನಸಾಮಾನ್ಯರಿಗೆ ಸಂಚಾರ ಮಾಡಲೂ ಇದೆ. ನಿಮ್ಮಿಂದಾಗಿ ಪ್ರತಿಯೊಬ್ಬರಿಗೂ ತೊಂದರೆಯಾಗುತ್ತಿದೆ ಎಂದು ಸುಪ್ರೀಂಕೋರ್ಟ್​ ನೇರವಾಗಿಯೇ ರೈತರಿಗೆ ಹೇಳಿದೆ. ಅಷ್ಟೇ ಅಲ್ಲ, ಈ ರಸ್ತೆ ತಡೆಗೆ ಶಾಶ್ವತ ಪರಿಹಾರ ಒದಗಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೂ ಸೂಚನೆ ನೀಡಿದೆ.

ಇಂದಿನಿಂದ ಪಂಜಾಬ್, ಹರ್ಯಾಣದಲ್ಲಿ ಭತ್ತ ಖರೀದಿ
ಈ ಮಧ್ಯೆ ಪಂಜಾಬ್​ ಮತ್ತು ಹರಿಯಾಣ ಸರ್ಕಾರಗಳು ರೈತರಿಂದ ಭತ್ತ ಖರೀದಿ ಪ್ರಕ್ರಿಯೆಯನ್ನು ಇಂದಿನಿಂದ ಪ್ರಾರಂಭಿಸಿವೆ. ಕೇಂದ್ರ ಸರ್ಕಾರದ ಆಹಾರ ಸಚಿವಾಲಯದ ಸೂಚನೆ ಮೇರೆಗೆ ಇಂದಿನಿಂದಲೇ ಭತ್ತ ಖರೀದಿ ಮಾಡಲಾಗುವುದು ಎಂದು ಹೇಳಲಾಗಿದೆ. ಭತ್ತ ಖರೀದಿ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಮುಂಗಾರು ವಿಳಂಬವಾದ ಹಿನ್ನೆಲೆಯಲ್ಲಿ ಭತ್ತ ಮತ್ತು ಸಿರಿಧಾನ್ಯ ಖರೀದಿಯನ್ನು ಈ ವರ್ಷ ಕೇಂದ್ರ ಸರ್ಕಾರ ಅ. 11ಕ್ಕೆ ಮುಂದೂಡಿತ್ತು. ಆದರೆ, ರೈತರ ಒತ್ತಾಯದ ಮೇರೆಗೆ ನಾಳೆಯಿಂದಲೇ ಭತ್ತ ಖರೀದಿ ಮಾಡಲಾಗುವುದು ಎಂದು ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ನೀರು ಚೆಲ್ಲಿದ್ದ ನೆಲದ ಮೇಲೆ ವ್ಯಕ್ತಿಯ ಸ್ಟಂಟ್​; ಆಮೇಲೇನಾಯ್ತು? ವಿಡಿಯೋ ನೋಡಿ

ಗೋವಾ ಕಾಂಗ್ರೆಸ್​​ನಿಂದ ಮತ್ತೊಬ್ಬ ಶಾಸಕ ಪಕ್ಷಾಂತರ ಸಾಧ್ಯತೆ?