Codeine: ಮಾದಕ ವ್ಯಸನಿಗಳ ಕಾಟ: ಮತ್ತು ಬರಿಸುವ ಕೊಡೈನ್ ಬೆರೆತ ಕಾಫ್​ ಸಿರಪ್​ ನಿಷೇಧ

Cough Syrup: ಕೆಲ ನಿರ್ದಿಷ್ಟ ರಾಸಾಯನಿಕಗಳೊಂದಿಗೆ ಕೊಡೈನ್ ಬೆರೆಸಿ ಸಿದ್ಧಪಡಿಸಿರುವ ಔಷಧಿಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

Codeine: ಮಾದಕ ವ್ಯಸನಿಗಳ ಕಾಟ: ಮತ್ತು ಬರಿಸುವ ಕೊಡೈನ್ ಬೆರೆತ ಕಾಫ್​ ಸಿರಪ್​ ನಿಷೇಧ
ಕಾಫ್ ಸಿರಪ್ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 04, 2022 | 11:08 AM

ದೆಹಲಿ: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಾದಕ ವ್ಯಸನಿಗಳು ಕೊಡೈನ್ ಆಂಶವಿರುವ ಔಷಧಿಗಳನ್ನು ಮಾದಕ ದ್ರವ್ಯವಾಗಿ (Drug Abuse) ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯು (Union Health Ministry) ಶಿಸ್ತುಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಕೆಲ ನಿರ್ದಿಷ್ಟ ರಾಸಾಯನಿಕಗಳೊಂದಿಗೆ ಕೊಡೈನ್ ಬೆರೆಸಿ ಸಿದ್ಧಪಡಿಸಿರುವ ಔಷಧಿಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ‘ನ್ಯೂಸ್ 18’ ಜಾಲತಾಣ ವರದಿ ಮಾಡಿದೆ.

ಅಫೀಮಿನಿಂದ ಉತ್ಪಾದಿಸುವ ಆಧರಿಸಿ ಕೊಡೈನ್ ಅಂಶವು ನೋವು ಮರೆಸುವ, ಮಂಪರು ತರಿಸುವ, ನಿದ್ದೆ ಬರಿಸುವ ಗುಣ ಹೊಂದಿದೆ. ಸಾಮಾನ್ಯವಾಗಿ ಕೆಮ್ಮು, ಮೈಕೈ ನೋವು ಮತ್ತು ಅತಿಸಾರ ಬೇಧಿಗಳನ್ನು ಗುಣಪಡಿಸಲು ಕೊಡೈನ್​ನ ಅಂಶಗಳಿರುವ ಔಷಧಿಯನ್ನು ಕೊಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಔಷಧಿಗಳ ದುರುಪಯೋಗ ಹೆಚ್ಚಾಗಿದ್ದು, ಮಾದಕ ವ್ಯಸನಿಗಳು ಖುಷಿಗಾಗಿ ಸೇವಿಸುವುದು ಹೆಚ್ಚಾಗಿತ್ತು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೆಂದು ಸರ್ಕಾರವು ಮೂರು ರೀತಿಯ ಔಷಧಿಗಳಿಗೆ ನಿರ್ಬಂಧ ವಿಧಿಸಲು ಮುಂದಾಗಿದೆ. ಕೊಡೈನ್+ಕ್ಲೊರ್​ಫೆನಿರಮೈನ್, ಕೊಡೈನ್+ಕ್ಲೊರ್​ಫೆನಿರ್​ಮೈನ್+ಮೆಂಥಾಲ್, ಕೊಡೈನ್+ಕ್ಲೊರ್​ಫೆನಿರ್​ಮೈನ್+ಫೊಲ್ಕೊಡೈನ್+ಪ್ರೊಮೆಥಾಝೈನ್ ಇರುವ ಔಷಧಗಳನ್ನು ನಿಷೇಧಿಸುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ. ಈ ನಿರ್ಧಾರ ಜಾರಿಯಾದರೆ ಟೊಸೆಕ್ಸ್, ಅಸ್ಕೊರಿಲ್ ಸಿ, ಕೊಡಿಸ್ಟಾರ್, ಪ್ಲಾನೊಕಫ್ ಮತ್ತು ಟೆಡಿಕಾಫ್​ನಂಥ ಜನಪ್ರಿಯ ಕಾಫ್​ ಸಿರಪ್​ಗಳು ಮಾರುಕಟ್ಟೆಯಲ್ಲಿ ಸಿಗುವುದಿಲ್ಲ.

ಕೊಡೈನ್​ ಇರುವ ಔಷಧಿಗಳು ಮಾದಕ ದ್ರವ್ಯವಾಗಿ ದುರುಪಯೋಗವಾಗುತ್ತಿರುವ ಬಗ್ಗೆ ಹಲವು ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಅವರ ಸೂಚನೆ ಮೇರೆಗೆ ಆರೋಗ್ಯ ಇಲಾಖೆಯು ಈ ಕುರಿತು ಪರಾಮರ್ಶಿಸಿ ಶಿಫಾರಸು ಸಲ್ಲಿಸುವಂತೆ ಆದೇಶ ಮಾಡಿತ್ತು.

ಸರ್ಕಾರದ ಆಂತರಿಕ ವರದಿಗಳ ಪ್ರಕಾರ ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಕೊಡೈನ್ ಬೆರೆತ ಔಷಧಿಯನ್ನು ಮಾದಕದ್ರವ್ಯವಾಗಿ ಬಳಸುವ ಪ್ರಮಾಣ ಹೆಚ್ಚಾಗಿರುವುದು ತಿಳಿದುಬಂದಿತ್ತು. ಕೊಡೈನ್ ಬೆರೆತ ಔಷಧಿಗಳನ್ನು ನಿಷೇಧಿಸಬೇಕು ಎನ್ನುವ ಬಗ್ಗೆ ಸರ್ಕಾರದಲ್ಲಿ ಗೊಂದಲವಿಲ್ಲ. ಆದರೆ ಕ್ಷಯ ಮತ್ತು ಕ್ಯಾನ್ಸರ್​ಗೆ ನೀಡುವ ಔಷಧಿಗಳಲ್ಲಿ ಕೊಡೈನ್+ಟ್ರಿಪ್ರೊಲೈಡೈನ್ ಇರುತ್ತದೆ. ಈ ಔಷಧಿಗಳನ್ನು ನಿಷೇಧಿಸುವುದು ಹೇಗೆ ಎಂಬುದು ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ.

ಕೊಡೈನ್+ಟ್ರಿಪ್ರೊಲೈಡೈನ್​ ಇರುವ ಅಬೊಟ್ ಕಂಪನಿಯ ಫೆನ್​ಸಿಡಿಲ್ ಮತ್ತು ಫಿಝರ್ ಕಂಪನಿಯ ಕೊರೆಕ್ಸ್-ಟಿ ಔಷಧಿಗಳನ್ನು ಮಾದಕ ವ್ಯಸನಿಗಳು ಬಳಸುತ್ತಿದ್ದಾರೆ. ಈ ಔಷಧಿಗಳನ್ನು ನಿರ್ಬಂಧಿಸಬೇಕು ಎಂದು ಸಂಸದರು ಒತ್ತಾಯಿಸುತ್ತಿದ್ದಾರೆ. ಕೊಡೈನ್ ಇರುವ ಔಷಧಿಗಳನ್ನು ಒಮ್ಮೆಲೆ ನಿಷೇಧಿಸುವ ಬದಲು ಹಂತಹಂತವಾಗಿ ನಿರ್ಬಂಧಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ.

Published On - 11:02 am, Thu, 4 August 22