ಮೊಹಮ್ಮದ್ ಜುಬೇರ್​​ಗೆ 14 ದಿನಗಳ ನ್ಯಾಯಾಂಗ ಬಂಧನ; ಜುಲೈ 13 ರಂದು ಜಾಮೀನು ಅರ್ಜಿ ವಿಚಾರಣೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 11, 2022 | 3:56 PM

ಮೊಹಮ್ಮದ್ ಜುಬೇರ್ ಅವರನ್ನು ಲಖಿಂಪುರ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಜುಲೈ 13 ರಂದು ಜುಬೈರ್ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಲಿದೆ.

ಮೊಹಮ್ಮದ್ ಜುಬೇರ್​​ಗೆ 14 ದಿನಗಳ ನ್ಯಾಯಾಂಗ ಬಂಧನ; ಜುಲೈ 13 ರಂದು ಜಾಮೀನು ಅರ್ಜಿ ವಿಚಾರಣೆ
Zubair's
Follow us on

ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ  ಮೊಹಮ್ಮದ್ ಜುಬೇರ್ (Mohammed Zubair) ಅವರನ್ನು ಲಖಿಂಪುರ ನ್ಯಾಯಾಲಯವು (Lakhimpur court )14 ದಿನಗಳ ನ್ಯಾಯಾಂಗ ಬಂಧನಕ್ಕೆ (judicial custody) ಕಳುಹಿಸಿದೆ. ಜುಲೈ 13 ರಂದು ಜುಬೇರ್ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಲಿದೆ. ಖಾಸಗಿ ವಾಹಿನಿಯೊಂದರ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 2021 ರಲ್ಲಿ ಲಖಿಂಪುರದಲ್ಲಿ ಜುಬೇರ್ ವಿರುದ್ಧ  ಪ್ರಕರಣ ದಾಖಲಾಗಿತ್ತು. ಜುಬೇರ್ ಅವರನ್ನು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಾಗಿತ್ತು. ಜುಬೇರ್ ಸೀತಾಪುರ್ ಜೈಲಿನಲ್ಲಿ ಬಂಧನದಲ್ಲಿರಲಿದ್ದಾರೆ. ಜುಬೇರ್ ವಿರುದ್ಧ ಸೆಕ್ಷನ್ 153 ಬಿ , 505 (1) ಬಿ, 505 (2) ಅಡಿಯಲ್ಲಿಯೂ ಎಫ್ಐಆರ್ ದಾಖಲಿಸಲಾಗಿದೆ. ಲಖಿಂಪುರ್ ಖೇರಿಯ ಮೊಹಮ್ಮದಿಯಲ್ಲಿ ಜುಬೇರ್ ವಿರುದ್ದ ವಾರೆಂಟ್ ಕಳುಹಿಸಲಾಗಿತ್ತು. 2021ರಲ್ಲಿ ಸುದರ್ಶನ್ ನ್ಯೂಸ್ ಸಿಬ್ಬಂದಿಯೊಬ್ಬರು ಜುಬೇರ್ ಮಾಡಿದ ಫ್ಯಾಕ್ಟ್ ಚೆಕ್ ಟ್ವೀಟ್ ವಿರುದ್ದ ದೂರು ನೀಡಿದ್ದಾರೆ.


ಏನಿದು ಪ್ರಕರಣ?

ಸುರೇಶ್ ಚಾಹ್ವಂಕೆ ಮುಖ್ಯಸ್ಥರಾಗಿರುವ ಸುದರ್ಶನ್ ಟಿವಿಯ ಪತ್ರಕರ್ತರಾದ ಆಶಿಶ್ ಕುಮಾರ್ ಕತಿಯಾರ್ ಎಂಬವರು ಸೆಪ್ಟೆಂಬರ್ 2021ರಲ್ಲಿ ಜುಬೇರ್ ವಿರುದ್ಧ ದೂರು ನೀಡಿದ್ದರು, ಲಖಿಂಪುರದಲ್ಲಿ ಜುಬೇರ್ ವಿರುದ್ದ ಐಪಿಸಿ ಸೆಕ್ಷನ್ 153ಎ (ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಪ್ರಚೋದನೆ) ಅಡಿಯಲ್ಲಿ ಕೇಸು ದಾಖಲಾಗಿತ್ತು. ಜುಬೇರ್ ಅವರು ಮೇ 2021ರಲ್ಲಿ ಪೋಸ್ಟ್ ಮಾಡಿದ ಟ್ವೀಟ್ ನ್ನು ದೂರುದಾರ ಕತಿಯಾರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಮಸೀದಿಯೊಂದು ನಾಶವಾಗಿದೆ ಎಂದು ತೋರಿಸಲು ಗಾಜಾಪಟ್ಟಿಯ ಮೇಲೆ ಖ್ಯಾತ ಮದೀನಾ ಮಸೀದಿಯ ಚಿತ್ರವನ್ನು ಸುದರ್ಶನ್ ನ್ಯೂಸ್ ಬಳಸಿದೆ ಎಂದು ಜುಬೇರ್ ಫ್ಯಾಕ್ಟ್ ಚೆಕ್ ಮಾಡಿದ್ದರು.

ಈ ಫ್ಯಾಕ್ಟ್ ಚೆಕ್ ಟ್ವೀಟ್ ಮೂಲಕ ಜುಬೇರ್, ತಮ್ಮ ಸುದ್ದಿ ಸಂಸ್ಥೆ ವಿರುದ್ಧ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ ಎಂದು ಕಟಿಯಾರ್ ಆರೋಪಿಸಿದ್ದಾರೆ. ಕಟಿಯಾರ್ ಈ ಬಗ್ಗೆ ನ್ಯಾಯಾಲದ ಮೊರೆ ಹೋಗಿದ್ದು, ಪ್ರಸ್ತುತ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು.

Published On - 3:04 pm, Mon, 11 July 22