ಭಾರತೀಯ ರೈಲ್ವೆಯು ಕ್ರಿಸ್‌ಮಸ್ ರಜೆ ಹಾಗೂ ಹೊಸ ವರ್ಷದ ಸಮಯದಲ್ಲಿ ಜನದಟ್ಟಣೆ ಹೆಚ್ಚಬಹುದಾದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ವಿಶೇಷ ರೈಲುಗಳನ್ನು ನಡೆಸುವುದಾಗಿ ಘೋಷಿಸಿದೆ. ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಚ್ಚುವರಿ ರೈಲುಗಳ ವಿವರವಾದ ವೇಳಾಪಟ್ಟಿ ಮತ್ತು ರೈಲುಗಳ ಸಮಯದ ಮಾಹಿತಿಯನ್ನು ಒದಗಿಸಲಾಗಿದ್ದು, ಪ್ರಯಾಣಿಕರು ಪರಿಶೀಲಿಸಬಹುದಾಗಿದೆ. ಭಾರತೀಯ ರೈಲ್ವೇ ತನ್ನ ಅಧಿಕೃತ ಪ್ರಕಟಣೆಯಲ್ಲಿ “ವಿಶೇಷ ರೈಲುಗಳ ವಿವರವಾದ ಸಮಯಕ್ಕಾಗಿ ದಯವಿಟ್ಟು www.enquiry.indianrail.gov.in ಗೆ ಭೇಟಿ ನೀಡಿ ಅಥವಾ NTES ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ” ಎಂದು ತಿಳಿಸಿದೆ. ಟಿಕೆಟ್ ಬುಕ್ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ಯಾವುದೇ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಕೌಂಟರ್‌ಗಳಲ್ಲಿ ಹಾಗೂ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು. ವಿಶೇಷ ರೈಲುಗಳ ಬುಕ್ಕಿಂಗ್ ನವೆಂಬರ್ 20 ರಂದು ಪ್ರಾರಂಭವಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ರೈಲು ಸಮಯ ಮತ್ತು ಇತರ ವಿವರಗಳು:
ಭಾರತೀಯ ರೈಲ್ವೆಯು ಇಲ್ಲಿಯವರೆಗೆ ಎರಡು ವಿಶೇಷ ರೈಲುಗಳನ್ನು ಘೋಷಿಸಿದ್ದು, ಅದರ ಮಾಹಿತಿ ಇಲ್ಲಿದೆ.
ಟ್ರೈನ್ ನಂಬರ್ 01596: ಮಡಗಾಂವ್ ಜಂಕ್ಷನ್- ಪನ್ವೇಲ್ ವಿಶೇಷ ರೈಲು ಪ್ರತಿ ಭಾನುವಾರ ಸಂಜೆ 4 ಗಂಟೆಗೆ ಗೋವಾದ ಮಡಗಾಂವ್ ಜಂಕ್ಷನ್‌ನಿಂದ ಹೊರಟು ಮರುದಿನ 3:15 ಕ್ಕೆ ಪನ್ವೇಲ್ (ಛತ್ತೀಸ್ಘಡ) ತಲುಪುತ್ತದೆ. ಸೇವೆಗಳು ನವೆಂಬರ್ 21, 2021 ರಿಂದ ಜನವರಿ 2, 2022 ರವರೆಗೆ ಲಭ್ಯವಿರುತ್ತವೆ.
ಟ್ರೈನ್ ನಂಬರ್ 01595: ಪನ್ವೇಲ್- ಮಡ್ಗಾಂವ್ ಜಂಕ್ಷನ್ ವಿಶೇಷ ಪನ್ವೇಲ್‌ನಿಂದ ಬೆಳಿಗ್ಗೆ 6:05 ಕ್ಕೆ ಹೊರಟು ಅದೇ ದಿನ ಸಂಜೆ 6:45 ಕ್ಕೆ ಮಡಗಾಂವ್ ಜಂಕ್ಷನ್‌ಗೆ ತಲುಪುತ್ತದೆ. ಈ ರೈಲು ಪ್ರತಿ ಸೋಮವಾರ ನವೆಂಬರ್ 22, 2021 ರಿಂದ ಜನವರಿ 3, 2022 ರವರೆಗೆ ಕಾರ್ಯನಿರ್ವಹಿಸುತ್ತದೆ.
ಈ ರೈಲು ಕರ್ಮಾಲಿ, ಥಿವಿಮ್, ಸಾವಂತವಾಡಿ ರಸ್ತೆ, ಕುಡಾಲ್, ಸಿಂಧುದುರ್ಗ, ಕಂಕಾವಲಿ, ವೈಭವ್ವಾಡಿ ರಸ್ತೆ, ರಾಜಾಪುರ ರಸ್ತೆ, ಅದಾವಲಿ, ರತ್ನಗಿರಿ, ಸಂಗಮೇಶ್ವರ ರಸ್ತೆ, ಸವರ್ದಾ, ಚಿಪ್ಲುನ್, ಖೇಡ್, ಮಂಗಾವ್ ಮತ್ತು ರೋಹಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಯಾಣದ ಸಂದರ್ಭದಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರವು ಹೊರಡಿಸಿರುವ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮತ್ತು ಇತರ ಕೋವಿಡ್ -19 ಮುನ್ನೆಚ್ಚರಿಕೆಗಳನ್ನು ರೈಲುಗಳ ಒಳಗೆ ಮತ್ತು ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಭಾರತೀಯ ರೈಲ್ವೆಯು ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ತನ್ನ ಸೇವೆಯನ್ನು ಸೀಮಿತಗೊಳಿಸಿತ್ತು. ಇದೀಗ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದ್ದು, ಭಾರತದಲ್ಲಿ ಸೋಂಕು ಪ್ರಸರಣ ಕಡಿಮೆ ಮಟ್ಟದಲ್ಲಿದೆ. ಆದ್ದರಿಂದಲೇ ರೈಲ್ವೆ, ಹೊಸ ಹೊಸ ಸೇವೆಗಳನ್ನೂ ಘೋಷಿಸುತ್ತಿದೆ. ಇತ್ತೀಚೆಗೆ, ಭಾರತೀಯ ರೈಲ್ವೇ ಎಲ್ಲಾ ರೈಲು ಪ್ರಯಾಣಗಳಲ್ಲಿ IRCTC ಯಿಂದ ಬೇಯಿಸಿದ ಊಟವನ್ನು ಪುನರಾರಂಭಿಸುವುದಾಗಿ ಘೋಷಿಸಿತ್ತು.
ಇದನ್ನೂ ಓದಿ:
ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ; ಕೊರೊನಾ ಕಾರಣದಿಂದ ನಿಂತಿದ್ದ ಈ ಸೇವೆ ಮತ್ತೆ ಆರಂಭವಾಗಲಿದೆ!