ಸೌರಮಂಡಲದಲ್ಲಿ ಅದೊಂದು ಅಮೂಲ್ಯವಾದ ಸಂಪನ್ಮೂಲ.. ಆಕರ್ಷಕ…ನಿಗೂಢ.. ಕುಳಿಗಳೇ ತುಂಬಿರೋ ಸುಂದರ ಚಂದಮಾಮನ ಅಂಗಳದಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ. ಇಸ್ರೋ ವಿಜ್ಞಾನಿಗಳ 4 ವರ್ಷದ ಕನಸು. 4 ಲಕ್ಷ ಕಿಲೋ ಮೀಟರ್ ಪ್ರಯಾಣ. ಬಾಹ್ಯಾಕಾಶದಲ್ಲಿ ಐತಿಹಾಸಕ ಮೈಲಿಗಲ್ಲು ಸಾಧಿಸುವುದಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇದೆ. ಸದ್ಯ ಇಡೀ ದೇಶ ಚಂದ್ರಯಾನ 3 (Chandrayaan-3) ವಿಕ್ರಮ್ ಲ್ಯಾಂಡರ್ (vikram lander) ಚಂದ್ರನ ನೆಲದ ಮೇಲೆ ಹೇಗೆ ಇಳಿಯುತ್ತೆ ಎನ್ನುವ ಕುರಿತು ಯೋಚಿಸುತ್ತಿದೆ. ಹಾಗಾದ್ರೆ, ನಿಜಕ್ಕೂ ಈ ಪ್ರಕ್ರಿಯೆ ಹೇಗೆ ನಡೆಯುತ್ತೆ? ಭಾರತದ ವಿಕ್ರಮ್ ಲ್ಯಾಂಡರ್, ಚಂದ್ರನೂರಿನಲ್ಲಿ ಕಾಲೂರುವ ಆ ಕ್ಷಣ ಹೇಗಿರುತ್ತೆ ಎನ್ನುವ ವಿವರ ಇಲ್ಲಿದೆ.
ವೇಗ ಮತ್ತು ಭಂಗಿ. ಈ ಎರಡು, ವಿಕ್ರಮ್ ಲ್ಯಾಂಡರ್ ಎದುರಿರುವ ಮಹಾನ್ ಸವಾಲುಗಳು. ಸದ್ಯ, ಪ್ರತಿ ಗಂಟೆಗೆ 6,000 ಕಿಲೋಮೀಟರ್ಗಿಂತ ಹೆಚ್ಚಿನ ವೇಗದಲ್ಲಿ ಸಾಗುತ್ತಿರುವ ವಿಕ್ರಮ್ ಲ್ಯಾಂಡರ್, ತನ್ನ ಈ ವೇಗವನ್ನು ಸೊನ್ನೆಗೆ ಇಳಿಸಲೇಬೇಕು. ಆಗ ಮಾತ್ರ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಯಬಲ್ಲದು. ಚಂದ್ರನ ಮೇಲೆ ಭೂಮಿಯ ರೀತಿ ಗಾಳಿ ಇಲ್ಲ, ವಾತಾವರಣ ಇಲ್ಲ. ಅಲ್ಲಿ ಇರೋದು ಕೇವಲ ವ್ಯಾಕ್ಯೂಮ್ ಅಂದ್ರೆ, ನಿರ್ವಾತ. ಹೀಗಾಗಿ, ಅಲ್ಲಿ ವೇಗವನ್ನು ಕಂಟ್ರೋಲ್ ಮಾಡಲು ಪ್ಯಾರಾಚೂಟ್ ರೀತಿ ಸಾಧನ ಕೆಲಸಕ್ಕೆ ಬರಲ್ಲ. ಸದ್ಯ, ವಿಕ್ರಮ್ ಲ್ಯಾಂಡರ್ ಹಾರಿಝಾಂಟಲ್ ಆಗಿ ಚಂದ್ರನ ಕಕ್ಷೆಯಲ್ಲಿ ಸಾಗುತ್ತಿದೆ. ವಿಕ್ರಮ್ ಲ್ಯಾಂಡರ್, ಚಂದ್ರನನ್ನು ಸ್ಪರ್ಶಿಸಬೇಕಾದ್ರೆ, ತನ್ನ ಈ ಭಂಗಿಯನ್ನು ವರ್ಟಿಕಲ್ಗೆ ಬದಲಿಸಿಕೊಳ್ಳಬೇಕು. ಹೀಗೆ, ವಿಕ್ರಮ್ ಲ್ಯಾಂಡರ್ನ ವೇಗ ತಗ್ಗಿಸುವ, ಭಂಗಿಯನ್ನು ಬದಲಿಸುವ ಸೂತ್ರವೇ ಅತಿದೊಡ್ಡ ಸೋಜಿಗ.
ವಿಕ್ರಮ್ ಲ್ಯಾಂಡರ್ನ ಅಸಲಿ ಸವಾಲು, ಅಸಲಿ ಯಾನ, ಅಸಲಿ ಸಾಹಸ ಆರಂಭವಾಗುವುದೇ ವಿಕ್ರಮ್ ಲ್ಯಾಂಡರ್ ಚಂದ್ರನ ನೆಲದಿಂದ ಕೇವಲ 30 ಕಿಲೋಮೀಟರ್ ಎತ್ತರದಲ್ಲಿ ಇರುವಾಗ. ವಿಕ್ರಮ್ ಲ್ಯಾಂಡರ್, ಚಂದ್ರನಿಂದ 30 ಕಿಲೋಮೀಟರ್ ಎತ್ತರದಲ್ಲಿ ಇರುವಾಗ ‘ಪವರ್ಡ್ ಡಿಸೆಂಟ್ ಪ್ರಕ್ರಿಯೆ’ ಆರಂಭವಾಗುತ್ತೆ. ಆಗಸ್ಟ್ 23ರ ಸಂಜೆ 5ಗಂಟೆ 47 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಶುರುವಾಗುತ್ತೆ. ವಿಕ್ರಮ್ ಲ್ಯಾಂಡರ್ನಲ್ಲಿರುವ ಇಂಜಿನ್ಗಳನ್ನು ಶಕ್ತಿ ಬಳಸಿ, ವಿಕ್ರಮ್ ಲ್ಯಾಂಡರ್ ಅನ್ನು ನಿಯಂತ್ರಿತ ರೀತಿಯಲ್ಲಿ ಚಂದ್ರನ ಮೇಲೆ ಇಳಿಸುವ ಈ ಪ್ರಕ್ರಿಯೆಗೆ ‘ಪವರ್ಡ್ ಡಿಸೆಂಟ್’ ಅಂತಾರೆ.
ಪವರ್ಡ್ ಡಿಸೆಂಟ್ ಆರಂಭವಾದಾಗ ವಿಕ್ರಮ್ ಲ್ಯಾಂಡರ್, ಚಂದ್ರನ ಮೇಲ್ಮೈನಿಂದ ಕೇವಲ 30 ಕಿಲೋಮೀಟರ್ ಎತ್ತರದಲ್ಲಿ ಇರುತ್ತೆ. ಆದ್ರೆ, ತಾನು ಹೋಗಿ ಇಳಿಯಬೇಕಾದ ಚಂದ್ರನ ನಿಗದಿತ ಜಾಗದಿಂದ ಭರ್ತಿ 745 ಕಿಲೋಮೀಟರ್ ದೂರದಲ್ಲಿರುತ್ತೆ. ವಿಕ್ರಮ್ ಲ್ಯಾಂಡರ್ ಇಳಿಯಬೇಕಾದ ಚಂದ್ರನ ಅಂಗಳ ಇನ್ನೂ 745 ಕಿಲೋಮೀಟರ್ ದೂರ ಇರೋವಾಗಲೇ ಲ್ಯಾಂಡಿಂಗ್ ಆರಂಭವಾಗುತ್ತೆ. ಈ ವೇಳೆ ವಿಕ್ರಮ್ ಲ್ಯಾಂಡರ್, ನೀರಿನಲ್ಲಿ ಈಜುವ ವ್ಯಕ್ತಿಯಂತೆ ಚಂದ್ರನ ಮೇಲೆ ಹಾರಿಝಾಂಟಲ್ ಆಗಿ ಹಾರುತ್ತಿರುತ್ತೆ. ವಿಕ್ರಮ್ ಲ್ಯಾಂಡರ್ ಹಾರಿಝಾಂಟಲ್ ವೇಗ ಅಂದ್ರೆ, ಸಮತಲ ವೇಗ ಪ್ರತಿ ಸೆಕೆಂಡ್ಗೆ ಭರ್ತಿ 1.68 ಕಿಲೋಮೀಟರ್ ಇರುತ್ತೆ. ಅಂದ್ರೆ, ಪ್ರತಿ ಗಂಟೆಗೆ ಭರ್ತಿ 6,000 ಕ್ಕೂ ಅಧಿಕ ಕಿಲೋಮೀಟರ್ ವೇಗದಲ್ಲಿ ಲ್ಯಾಂಡರ್ ಹಾರುತ್ತಿರುತ್ತೆ. ಈ ವೇಳೆ, ವಿಕ್ರಮ್ ಲ್ಯಾಂಡರ್ನ ವರ್ಟಿಕಲ್ ಸ್ಪೀಡ್ ಅಂದ್ರೆ, ಲ್ಯಾಂಡರ್ ಲಂಬವಾಗಿ ಚಂದ್ರನ ನೆಲದತ್ತ ಸಾಗುವ ವೇಗ ಸೊನ್ನೆಯಾಗಿರುತ್ತೆ. ಈ ಹಂತದಲ್ಲೇ ರಫ್ ಬ್ರೇಕ್ಗಳ ಪ್ರಯೋಗ ನಡೆಯುತ್ತೆ. ಇಂಜಿನ್ಗಳ ಮೂಲಕ ಲ್ಯಾಂಡರ್ ಸಾಗುವ ದಿಕ್ಕಿಗೆ ವಿರುದ್ಧವಾಗಿ ಶಕ್ತಿಯನ್ನು ಬಿಡುಗಡೆ ಮಾಡಲಾಗುತ್ತೆ. ಈ ಮೂಲಕ ಲ್ಯಾಂಡರ್ನ ವೇಗಕ್ಕೆ ಬ್ರೇಕ್ ಹಾಕುವ ಕೆಲಸ ನಡೆಯುತ್ತೆ.
690 ಸೆಕೆಂಡ್ ಅಂದ್ರೆ, ಹನ್ನೊಂದೂವರೆ ನಿಮಿಷ ಕಾಲ ನಡೆಯುವ ಈ ರಫ್ ಬ್ರೇಕಿಂಗ್ನಿಂದ ವಿಕ್ರಮ್ ಲ್ಯಾಂಡರ್ನ ಹಾರಿಝಾಂಟಲ್ ವೇಗ ಪ್ರತಿ ಸೆಕೆಂಡ್ಗೆ 1.68ಕಿಲೋಮೀಟರ್ನಿಂದ ಪ್ರತಿಸೆಕೆಂಡ್ಗೆ 358ಮೀಟರ್ಗೆ ಇಳಿಯುತ್ತೆ. ಆದ್ರೆ, ವರ್ಟಿಕಲ್ ವೇಗ ಸೊನ್ನೆಯಿಂದ ಪ್ರತಿ ಸೆಕೆಂಡ್ಗೆ 61ಮೀಟರ್ಗೆ ಏರುತ್ತೆ. ಚಂದ್ರನಿಂದ 30 ಕಿಲೋಮೀಟರ್ ಎತ್ತರದಲ್ಲಿದ್ದ ವಿಕ್ರಮ್ ಲ್ಯಾಂಡರ್, ಚಂದ್ರನಿಗೆ 7.4ಕಿಲೋಮೀಟರ್ನಷ್ಟು ಹತ್ತಿರ ಹೋಗಿರುತ್ತೆ. ಅಂದ್ರೆ, ವಿಕ್ರಮ್ ಲ್ಯಾಂಡರ್ ಕೇವಲ ಅಡ್ಡಡ್ಡ ಪ್ರಯಾಣಿಸದೆ, ಚಂದ್ರನ ಅಂಗಳದತ್ತಲೂ ಪ್ರಯಾಣ ಆರಂಭಿಸುತ್ತೆ. ಇದಾದ ಬಳಿಕ ‘ಅಟಿಟ್ಯೂಡ್ ಹೋಲ್ಡ್ ಫೇಸ್’ ಶುರುವಾಗುತ್ತೆ. ‘ಅಟಿಟ್ಯೂಡ್ ಹೋಲ್ಡ್ ಫೇಸ್’ ಎನ್ನುವುದು ವಿಕ್ರಮ್ ಲ್ಯಾಂಡರ್ನ ದೇಹದ ಭಂಗಿಯನ್ನು ನೆಟ್ಟಗೇ ಮಾಡುವ ಹಂತ. ಇಲ್ಲಿ ತನಕ ನೀರಿನಲ್ಲಿ ಈಜುತ್ತಿರುವ ವ್ಯಕ್ತಿಯ ರೀತಿ ಹಾರುವ ಲ್ಯಾಂಡರ್, ಈ ಹಂತದಲ್ಲಿ ನೀರಿಗೆ ಜಿಗಿಯುವ ವ್ಯಕ್ತಿಯ ದೇಹದ ಭಂಗಿಯಂತೆ ನೆಟ್ಟಗೆ ಆಗುತ್ತೆ. ಅಂದ್ರೆ, ವಿಕ್ರಮ್ ಲ್ಯಾಂಡರ್, ಹಾರಿಝಾಂಟಲ್ನಿಂದ ವರ್ಟಿಕಲ್ನತ್ತ ತಿರುಗುತ್ತೆ. ಬಾಗಿದ್ದ ಲ್ಯಾಂಡರ್ ಅನ್ನು ಕೇವಲ 10 ಸೆಕೆಂಡ್ನಲ್ಲಿ ನೆಟ್ಟ ಮಾಡಲಾಗುತ್ತೆ. ಈ ಹಂತದಲ್ಲಿ ವಿಕ್ರಮ್ ಲ್ಯಾಂಡರ್ 3.8ಕಿಲೋಮೀಟರ್ ದೂರ ಕ್ರಮಿಸುತ್ತೆ. ಚಂದ್ರನಿಂದ ತನ್ನ ಎತ್ತರವನ್ನು 7.42 ಕಿಲೋಮೀಟರ್ನಿಂದ 6.8 ಕಿಲೋಮೀಟರ್ಗೆ ಇಳಿಸಿಕೊಳ್ಳುತ್ತೆ. ಲ್ಯಾಂಡರ್ನ ಹಾರಿಝಾಂಟಲ್ ವೇಗ ಪ್ರತಿಸೆಕೆಂಡ್ಗೆ 336 ಮೀಟರ್ಗೆ ಕುಸಿದ್ರೆ, ವರ್ಟಿಕಲ್ ವೇಗ 51 ಮೀಟರ್ಗೆ ಇಳಿಯುತ್ತೆ. ಈ ಌಟಿಟ್ಯೂಡ್ ಹೋಲ್ಡ್ ಫೇಸ್ ಬಳಿಕ ಶುರುವಾಗೋದೇ ಫೈನ್ ಬ್ರೇಕಿಂಗ್ ಹಂತ.
(2019 ರ ಸೆಪ್ಟೆಂಬರ್ 7ರಂದು ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್, ಈ ಅಟಿಟ್ಯೂಡ್ ಹೋಲ್ಡ್ ಫೇಸ್ ಮತ್ತು ಫೈನ್ ಬ್ರೇಕ್ ಹಂತದ ನಡುವೆಯೇ ನಿಯಂತ್ರಣ ತಪ್ಪಿ ಚಂದ್ರನ ಮೇಲೆ ಪತನವಾಗಿತ್ತು. ಈ ಹಂತದಲ್ಲಿ ಚಂದ್ರಯಾನ-2 ರ ವಿಕ್ರಮ್ ಲ್ಯಾಂಡರ್, ನಿಗದಿಯಂತೆ 55 ಡಿಗ್ರಿ ಬಾಗಿ ವರ್ಟಿಕಲ್ ಪೊಜಿಷನ್ಗೆ ಬರಬೇಕಿತ್ತು. ಆದ್ರೆ, ಭರ್ತಿ 410ಡಿಗ್ರಿ ತಿರುಗಿ, ಗಿರಕಿ ಹೊಡೆದ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಅಪ್ಪಳಿಸಿಬಿಟ್ಟಿತ್ತು. ಈ ವೈಫಲ್ಯದಿಂದ ಆಗಿನ ಇಸ್ರೋ ಚೇರ್ಮನ್ ಕೆ. ಶಿವನ್ ಕಣ್ಣೀರು ಹಾಕಿದ್ರು.
ಈ ಫೈನ್ ಬ್ರೇಕಿಂಗ್ ಹಂತದ ಮೂಲಕ ಲ್ಯಾಂಡರ್ನ ವೇಗವನ್ನು ಹೆಚ್ಚು ಕಡಿಮೆ ಸೊನ್ನೆಗೆ ಇಳಿಸಲಾಗುತ್ತೆ. ಕೇವಲ 175 ಸೆಕೆಂಡ್ ಅಂದ್ರೆ, 3 ನಿಮಿಷಗಳ ಈ ಹಂತದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಹಾರಿಝಾಂಟಲ್ ಪೊಜಿಷನ್ನಿಂದ ಸಂಪೂರ್ಣವಾಗಿ ವರ್ಟಿಕಲ್ ಪೊಜಿಷನ್ಗೆ ತಿರುಗಿಸಲಾಗುತ್ತೆ. ಅಂದ್ರೆ, ಅಡ್ಡಡ್ಡ ಚಲಿಸುತ್ತಿದ್ದ ಲ್ಯಾಂಡರ್ ಈಗ ನೆಟ್ಟಾಗುತ್ತೆ. ಫೈನ್ ಬ್ರೇಕಿಂಗ್ ಪ್ರಕ್ರಿಯೆ ಮುಗಿಯುತ್ತಲೇಚ ಚಂದ್ರನ ನೆಲದಿಂದ ಲ್ಯಾಂಡರ್ನ ಎತ್ತರ 6.8 ಕಿಲೋಮೀಟರ್ನಿಂದ ಕೇವಲ 800 ಮೀಟರ್ಗೆ ಇಳಿದಿರುತ್ತೆ. ಅಂದ್ರೆ, ಲ್ಯಾಂಡರ್ ಚಂದ್ರನಿಂದ ಕೇವಲ 800 ಮೀಟರ್ ಎತ್ತರದಲ್ಲಿರುತ್ತೆ. ಆದ್ರೂ, ಲ್ಯಾಂಡರ್ ಇಳಿಯಬೇಕಾದ ಜಾಗ ಇನ್ನೂ 28.52 ಕಿಲೋಮೀಟರ್ ದೂರವಿರುತ್ತೆ. ಇದಾದ ಬಳಿಕ ಆರಂಭವಾಗೋದೇ ಲ್ಯಾಂಡಿಂಗ್ನ ಕೊನೆಯ ಹಂತ. ಅದುವೇ ಟರ್ಮಿನಲ್ ಡಿಸೆಂಟ್ ಫೇಸ್. ಇಲ್ಲಿಂದ, ವಿಕ್ರಮ್ ಲ್ಯಾಂಡರ್ನಲ್ಲಿರುವ ‘ಸೆಕೆಂಡ್ ಆರ್ಡರ್ ಗೈಡನ್ಸ್ ಸಿಸ್ಟಮ್’ ಕೆಲಸ ಆರಂಭಿಸುತ್ತೆ. ಈ ಸಿಸ್ಟಮ್, ವಿಕ್ರಮ್ ಲ್ಯಾಂಡರ್ನ ಹಾರಿಝಾಂಟಲ್ ವೇಗವನ್ನು ಸಂಪೂರ್ಣ ಸ್ಥಗಿತಗೊಳಿಸುತ್ತೆ. ಅಷ್ಟೇ ಅಲ್ಲ, ವಿಕ್ರಮ್ ಲ್ಯಾಂಡರ್ನ ವರ್ಟಿಕಲ್ ವೇಗ ಅಂದ್ರೆ, ಲ್ಯಾಂಡರ್, ಚಂದ್ರನ ನೆಲದತ್ತ ಲಂಬವಾಗಿ ಸಾಗುವ ವೇಗವನ್ನು ನಿಯಂತ್ರಿಸುತ್ತೆ. ಈ ಮೂಲಕ ವಿಕ್ರಮ್ ಲ್ಯಾಂಡರ್ ಅನ್ನು ಸ್ಮೂತ್ ಆಗಿ ಚಂದ್ರನ ಅಂಗಳದ ಮೇಲೆ ಇಳಿಸುತ್ತೆ.
ಚಂದ್ರನ ಟರೈನ್ ಅಂದ್ರೆ, ಚಂದ್ರನ ನೆಲ ಅನಿರೀಕ್ಷಿತವಾಗಿ ಬದಲಾವಣೆ ಹೊಂದುತ್ತೆ. ಇಲ್ಲಿನ ಕುಳಿಗಳು ಮತ್ತು ಬಂಡೆಗಳು ಏಕಾಏಕಿ ಸ್ಥಳಾಂತರವಾಗಬಹುದು. ವಿಕ್ರಮನ ಲ್ಯಾಂಡಿಂಗ್ಗೆ ನಿದಗಿ ಪಡಿಸಿದ ಜಾಗದಲ್ಲಿ ಇಂತಹ ಬದಲಾವಣೆ ಸಂಭವಿಸಿದ್ರೆ, ಲ್ಯಾಂಡಿಂಗ್ ಕಷ್ಟವಾಗುತ್ತೆ. ಇದರಿಂದ, ಸೆನ್ಸಾರ್ಗಳ ಕಾರ್ಯಕ್ಕೆ ತೊಡಕಾಗಬಹುದು. ಚಂದ್ರನ ಅಂಗಳದಲ್ಲಿ ಕಂಪನಗಳು ಸಂಭವಿಸುತ್ತವೆ. ಲ್ಯಾಂಡಿಂಗ್ ಜಾಗದಲ್ಲಿ ಕಂಪನ ಸಂಭವಿಸಿದ್ರೆ, ಅದು ಸಹ ಲ್ಯಾಂಡಿಂಗ್ಗೆ ಹೊಸ ಸವಾಲು ಒಡ್ಡಬಹುದು. ವಿಕ್ರಮ್ ವೇಗವನ್ನು ಕಡಿಮೆ ಮಾಡುವ ಬೂಸ್ಟರ್ ಇಂಜಿನ್ಗಳಿಂದ ಚಂದ್ರನ ನೆಲದಲ್ಲಿ ಧೂಳು ಏಳಬಹುದು. ಈ ಧೂಳು, ವಿಕ್ರಮ್ ಲ್ಯಾಂಡರ್ನ ಕ್ಯಾಮರಾಗಳ ಲೆನ್ಸ್ ಮೇಲೆ ಕೂತು, ಸಾಫ್ಟ್ ಲ್ಯಾಂಡಿಂಗ್ಗೆ ಅಡಚಣೆ ಒಡ್ಡಬಹುದು. ಹೀಗೆ, ವಿಕ್ರಮ್ ಲ್ಯಾಂಡರ್ ಹಲವು ಸವಾಲುಗಳನ್ನು ಮೀರಿ ನಿಲ್ಲಲು ಸಜ್ಜಾಗಿದೆ. ಈ ವೇಳೆ, ಇಸ್ರೋ ಚೇರ್ಮನ್ ಸೋಮನಾಥ್, ಅಗತ್ಯಬಿದ್ರೆ, ವಿಕ್ರಮ್ ಲ್ಯಾಂಡರ್ ನ ಲ್ಯಾಂಡಿಂಗ್ ಅನ್ನು ಒಂದು ತಿಂಗಳು ಮುಂದೂಡುವ ಮಾತು ಸಹ ಹೇಳಿದ್ದಾರೆ.
ನಮ್ಮ ಭೂಮಿ ಮೇಲಿನ 14 ದಿನಗಳಿಗೆ ಚಂದ್ರನ ಮೇಲಿನ 1 ದಿನ ಸಮ. ಚಂದ್ರನ ಮೇಲೆ ನಮ್ಮ ವಿಕ್ರಮ್ ಲ್ಯಾಂಡರ್ ಮತ್ತು ರೋವರ್ 14 ದಿನ ಕೆಲಸ ಮಾಡುತ್ತವೆ. ಇವು 14 ದಿನ ಸಕ್ರಿಯವಾಗಿ ಸಂಶೋಧನೆ ನಡೆಸಬೇಕಾದ್ರೆ, ವಿಕ್ರಮ್ ಲ್ಯಾಂಡರ್, ಚಂದ್ರನ ಮೇಲೆ ಸೂರ್ಯ ಉದಯಿಸುವ ಸಮಯಕ್ಕೆ ಸರಿಯಾಗಿ ಇಳಿಯಬೇಕು. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಮತ್ತು ರೋವರ್, ಸೌರಶಕ್ತಿಯಿಂದ ಕೆಲಸ ಮಾಡುತ್ತವೆ. ಹೀಗಾಗಿ, ಚಂದ್ರನ ಮೇಲೆ ಸೂರ್ಯೋದಯವಾಗುವ ಹೊತ್ತಿಗೆ ಲ್ಯಾಂಡ್ ಆದ್ರೆ, ಇಡೀ ದಿನ ಸೂರ್ಯನ ಶಕ್ತಿ ಬಳಸಿ ಕೆಲಸ ಮಾಡಬಹುದು. ಚಂದ್ರನ ಮೇಲೆ ರಾತ್ರಿಯಾದರೆ, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ನಿಷ್ಕ್ರಿಯವಾಗುತ್ತವೆ. ಹೀಗಾಗಿ, ಇಸ್ರೋ ಚಂದ್ರನ ಮೇಲೆ ಸೂರ್ಯೋದಯವಾಗುವ ಸಮಯದಲ್ಲೇ ವಿಕ್ರಮ್ ಅನ್ನು ಚಂದ್ರನ ಮೇಲೆ ಇಳಿಸಲು ಸಜ್ಜಾಗಿದೆ. ಒಂದು ವೇಳೆ, ಇಂದು (ಆಗಸ್ಟ್ 23) ಲ್ಯಾಂಡಿಂಗ್ ಸಾಧ್ಯವಾಗದಿದ್ರೆ ಲ್ಯಾಂಡಿಂಗ್ ಅನ್ನು ಒಂದು ತಿಂಗಳು ಮುಂದೂಡುತ್ತೇವೆ. ಸೆಪ್ಟೆಂಬರ್ ತಿಂಗಳಲ್ಲಿ ಚಂದ್ರನ ಮೇಲೆ ಸೂರ್ಯ ಉದಯಿಸುವ ಹೊತ್ತಿಗೆ ಲ್ಯಾಂಡಿಂಗ್ ಮಾಡಿಸುತ್ತೇವೆ. ಈ ಆಯ್ಕೆಯೂ ನಮ್ಮ ಎದುರಿದೆ ಎಂದು ಇಸ್ರೋ ಚೇರ್ಮನ್ ಸೋಮನಾಥ್ ಹೇಳಿದ್ದಾರೆ. ಆದ್ರೆ, ಆಗಸ್ಟ್ 23ರಂದೇ ಲ್ಯಾಂಡಿಂಗ್ ಆಗುವ ಎಲ್ಲಾ ಸಾಧ್ಯತೆಗಳು ಇವೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ