ರಾಜಕೀಯ ಸಂಘರ್ಷಕ್ಕೆ ಕಾರಣವಾದ ಸಂದೇಶ್‌ಖಾಲಿ, ನ್ಯಾಯಕ್ಕಾಗಿ ಮಹಿಳೆಯರ ಹೋರಾಟ; ಏನಿದು ಪ್ರಕರಣ?
ಪಶ್ಚಿಮ ಬಂಗಾಳದ ಉತ್ತರ 24-ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಗ್ರಾಮ ಬಿಜೆಪಿ-ಟಿಎಂಸಿ ರಾಜಕೀಯದ ಕೇಂದ್ರವಾಗಿದೆ. ಟಿಎಂಸಿ ಪ್ರಭಾವಿ ನಾಯಕ ಶೇಖ್ ಶಾಜಹಾನ್ ನಿವಾಸದ ಮೇಲೆ ಇಡಿ ದಾಳಿ ನಡೆಸಲು ಬಂದಾಗ ಆತನ ಸಹಚರರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಓಡಿಸಿದ್ದರು. ಶಾಜಹಾನ್ ಅಲ್ಲಿನ ಜನರಿಂದ ಭೂಕಬಳಿಕೆ ಮಾಡಿದ್ದಾನೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪ ಕೇಳಿಬಂದಾಗಿನಿಂದ ಸಂದೇಶ್‌ಖಾಲಿಯಲ್ಲಿ ಪ್ರತಿಭಟನೆ, ದಂಗೆ ನಡೆದಿದೆ. ಇಲ್ಲಿ ನಡೆದಿದ್ದು ಏನು? ಇಲ್ಲಿದೆ ವರದಿ.
ಕಳೆದ ಮೂರು ತಿಂಗಳಿನಿಂದ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಎಂಬ ಗ್ರಾಮ ಸುದ್ದಿಯಲ್ಲಿದೆ. ಇಲ್ಲಿನ ಸ್ಥಳೀಯ ಟಿಎಂಸಿ ನಾಯಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ವಿರುದ್ಧ ಹಲವಾರು ಮಹಿಳೆಯರು ಆರೋಪ ಮಾಡಿದ್ದಾರೆ. ಈ ಸುದ್ದಿ ಹೊರಬರುತ್ತಿದ್ದಂತೆ ಬಂಗಾಳ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಆರೋಪಿಯನ್ನು ಟಿಎಂಸಿ ಕಾಪಾಡುತ್ತಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಪ್ರತಿಭಟನೆಗೆ ಮುಂದಾಯಿತು. ಆದರೆ ಪೊಲೀಸರು ಅವರನ್ನು ಸಂದೇಶ್‌ಖಾಲಿಗೆ ತಲುಪದಂತೆ ತಡೆದರು. ರಾಜಕೀಯ ಚರ್ಚೆ, ವಾಗ್ದಾಳಿ, ಆರೋಪ, ಪ್ರತ್ಯಾರೋಪಗಳ ನಡುವೆಯೇ ಪ್ರಕರಣ ನ್ಯಾಯಾಲಯಕ್ಕೆ ತಲುಪಿತ್ತು. ಏಪ್ರಿಲ್ 4ರಂದು ಇದರ ವಿಚಾರಣೆ ನಡೆಸಿದ ಕಲ್ಕತ್ತಾ ಹೈಕೋರ್ಟ್, ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ರಾಜಕೀಯ ಬಿರುಗಾಳಿಗೆ ಕಾರಣವಾದ ಸಂದೇಶ್‌ಖಾಲಿಯಲ್ಲಿ ನಡೆದಿದ್ದೇನು? ಇಲ್ಲಿವರೆಗಿನ ಬೆಳವಣಿಗೆ ಬಗ್ಗೆ ಇಲ್ಲಿದೆ ವಿಸ್ತೃತ ವರದಿ ಇಲ್ಲಿದೆ.
ಶುರುವಾಗಿದ್ದು ಇಲ್ಲಿಂದ
ಬಹುಕೋಟಿ ಪಡಿತರ ವಿತರಣಾ ಹಗರಣದಲ್ಲಿ ಟಿಎಂಸಿಯ ಪ್ರಬಲ ನಾಯಕ ಶಾಜಹಾನ್ ಶೇಖ್ ನಿವಾಸದ ಮೇಲೆ ಜನವರಿ5 ರಂದು ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿತ್ತು. ಈ ಪ್ರದೇಶದಲ್ಲಿ ಶಾಜಹಾನ್‌ನ ಸಹಚರರು ಇಡಿ ಅಧಿಕಾರಿಗಳನ್ನು ಅವರ ಮನೆಗೆ ಪ್ರವೇಶಿಸುವುದನ್ನು ತಡೆಯುವುದಲ್ಲದೆ, ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ನಗರದಿಂದ 74 ಕಿಮೀ ದೂರದಲ್ಲಿರುವ ಹಳ್ಳಿಯಿಂದ ತಪ್ಪಿಸಿಕೊಂಡು ಇಡಿ ಅಧಿಕಾರಿಗಳು ಓಡಿ ಹೋಗಿದ್ದರು. ಜಿಲ್ಲೆಯ ಬಸಿರ್‌ಹತ್ ಉಪವಿಭಾಗದ ಸಂದೇಶ್‌ಖಾಲಿಯಲ್ಲಿ ಪ್ರಭಾವಿ, ಜಿಲ್ಲಾ ಪರಿಷತ್ ಸದಸ್ಯರೂ ಆಗಿರುವ ಶಾಜಹಾನ್ ಅಂದಿನಿಂದ ತಲೆಮರೆಸಿಕೊಂಡಿದ್ದರು. ಇಡಿ ಘಟನೆಯ ನಂತರ, ಸ್ಥಳೀಯ ಮಹಿಳೆಯರು ಆರೋಪದೊಂದಿಗೆ ಮುಂದೆ ಬಂದರು. ಅದೇನೆಂದರೆ ಶಾಜಹಾನ್ ಮತ್ತು ಅವನ ಸಹಚರರು ಸಿಗಡಿ ಕೃಷಿಗಾಗಿ ತಮ್ಮ ಭೂಮಿಯನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಅವರು ನಮ್ಮನ್ನು ಹಿಂಸಿಸುತ್ತಿದ್ದಾರೆ. ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಈ ಮಹಿಳೆಯರು ಆರೋಪಿಸಿದ್ದಾರೆ.
ಪ್ರಮುಖ ಆರೋಪಗಳೇನು?
ಟಿಎಂಸಿ ಪಕ್ಷದಲ್ಲಿರುವ ಗಂಡಸರು ಪ್ರತಿ ಮನೆಯನ್ನು ಸಮೀಕ್ಷೆ ಮಾಡುತ್ತಾರೆ. ಯಾವುದೇ ಸುಂದರ ಮಹಿಳೆ, ಮಡದಿ ಅಥವಾ ಮಗಳು ಇದ್ದರೆ, ಆ ಗಂಡಸರು ಆಕೆಯನ್ನು ಪಕ್ಷದ ಕಚೇರಿಗೆ ಕರೆದೊಯ್ಯುತ್ತಾರೆ. ಅವರಿಗೆ ತೃಪ್ತಿಯಾಗುವವರೆಗೂ ಆ ಮಹಿಳೆಯನ್ನು ರಾತ್ರಿಯಿಡೀ ಅಲ್ಲಿಯೇ ಇರಿಸುತ್ತಾರೆ ಎಂದು ಸ್ಥಳೀಯ ಮಹಿಳೆಯೊಬ್ಬರು ಶಾಜಹಾನ್ ಮತ್ತು ಆತನ ಸಹಚರರ ವಿರುದ್ಧ ಆರೋಪ ಮಾಡಿದ್ದಾರೆ. ಶಾಜಹಾನ್ ತಲೆ ಮರೆಸಿಕೊಂಡಿದ್ದರಿಂದ ಹಲವಾರು ವರ್ಷಗಳಿಂದ ಅನುಭವಿಸುತ್ತಿರುವ ಚಿತ್ರಹಿಂಸೆಯ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ ಎಂದು ಈ ಮಹಿಳೆಯರು ಹೇಳಿದ್ದಾರೆ. ಇವರು ಶಾಜಹಾನ್ ವಿರುದ್ಧ ಆರೋಪ ಮಾಡಿದ್ದಲ್ಲದೆ, ಅವರ ಆಪ್ತ ಸಹಾಯಕರು ಮತ್ತು ಇತರ ಟಿಎಂಸಿ ನಾಯಕರಾದ ಉತ್ತಮ್ ಸರ್ದಾರ್ ಮತ್ತು ಶಿಬಾಪ್ರಸಾದ್ ಹಜ್ರಾ ಕೂಡಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಶಾಜಹಾನ್, ಶಿಬಾಪ್ರಸಾದ್ ಹಜ್ರಾ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಮಹಿಳೆಯರು ಬಿದಿರಿನ ಕೋಲು, ಪೊರಕೆ ಹಿಡಿದು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಘೇರಾವ್ ಹಾಕಿದ್ದರು.
ಆರೋಪ-ಪ್ರತ್ಯಾರೋಪಗಳೊಂದಿಗೆ ರಾಜಕೀಯ ಪ್ರತಿಭಟನೆ
ಫೆಬ್ರುವರಿ ತಿಂಗಳಲ್ಲಿ ಪ್ರತಿಭಟನಾನಿರತ ಮಹಿಳೆಯರು ಹಜ್ರಾ ಒಡೆತನದ ಮೂರು ಕೋಳಿ ಫಾರಂಗಳನ್ನು ಸುಟ್ಟುಹಾಕಿದಾಗ ಉದ್ವಿಗ್ನತೆ ಉಲ್ಬಣಗೊಂಡಿತು. ಈ ಕೋಳಿ ಫಾರಂ ಸ್ಥಳೀಯ ಗ್ರಾಮಸ್ಥರಿಂದ ಬಲವಂತವಾಗಿ ಕಿತ್ತುಕೊಂಡ ಜಮೀನಿನಲ್ಲಿ ನಿರ್ಮಿಸಲಾಗಿದೆ ಎಂದು ಮಹಿಳೆಯರು ಹೇಳಿದ್ದಾರೆ. ಇದು ಬಂಗಾಳದ ವಿರೋಧ ಪಕ್ಷಗಳು ಶಾಜಹಾನ್ ಮತ್ತು ಅವನ ಜನರನ್ನು ತಕ್ಷಣವೇ ಬಂಧಿಸಲು ಒತ್ತಾಯದ ಕೂಗು ಮಾರ್ದನಿಸುವಂತೆ ಮಾಡಿತು. ಬಿಜೆಪಿ, ಸಿಪಿ (ಐಎಂ), ಮತ್ತು ಕಾಂಗ್ರೆಸ್ ಪಕ್ಷವು, ಆಡಳಿತಾರೂಢ ಟಿಎಂಸಿ ಶಾಜಹಾನ್ ಮತ್ತು ಅವನ ಜನರಿಗೆ “ರಕ್ಷಣೆ ನೀಡುತ್ತಿದೆ” ಎಂದು ಆರೋಪಿಸಿದರೆ, ಕೆಲವು ಟಿಎಂಸಿ ನಾಯಕರು ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶಾಜಹಾನ್ ಅವರನ್ನು ವಿರೋಧ ಪಕ್ಷಗಳು ಕಟಕಟೆಯಲ್ಲಿ ನಿಲ್ಲಿಸುವ ಯತ್ನ ಮಾಡುತ್ತಿವೆ ಎಂದಿದ್ದರು.
ಮಹಿಳೆಯರ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ಸಂದೇಶ್‌ಖಾಲಿಯಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ಬಂಗಾಳದ ಗವರ್ನರ್ ಸಿವಿ ಆನಂದ ಬೋಸ್ ತಮ್ಮ ಕೇರಳ ಪ್ರವಾಸವನ್ನು ಮೊಟಕುಗೊಳಿಸಿದ್ದರು. ಸಂದೇಶ್‌ಖಾಲಿ ಮಹಿಳೆಯರೊಂದಿಗೆ ಮಾತನಾಡಿದ ನಂತರ, ಬೋಸ್ ಅವರು “ನಾನು ಕಂಡದ್ದು ಘೋರ, ಆಘಾತಕಾರಿ. ನಾನು ಎಂದಿಗೂ ನೋಡಬಾರದಂತಹದನ್ನು ನೋಡಿದ್ದೇನೆ. ನಾನು ಎಂದಿಗೂ ಕೇಳಬಾರದಂತಹ ಅನೇಕ ವಿಷಯಗಳನ್ನು ನಾನು ಕೇಳಿದ್ದೇನೆ. ಇದು ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ” ಎಂದಿದ್ದರು. ಭೇಟಿ ನಂತರ ಅವರು ಆರೋಪಗಳ ಬಗ್ಗೆ ತನಿಖೆ ನಡೆಸಲು ವಿಶೇಷ ಕಾರ್ಯಪಡೆ ಅಥವಾ ವಿಶೇಷ ತನಿಖಾ ತಂಡದ ಸಂವಿಧಾನವನ್ನು ಸ್ಥಳೀಯ ಜನರು ಬಯಸುತ್ತಾರೆ ಎಂದು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಪೊಲೀಸ್ ಕ್ರಮ ಮತ್ತು ಆಯೋಗಗಳ ಭೇಟಿ
ಈ ಆರೋಪದ ಮೇಲೆ ಸಿಪಿಐ(ಎಂ) ಮಾಜಿ ಶಾಸಕ ಸಂದೇಶ್‌ಖಾಲಿ ನಿರಪದ ಸರ್ದಾರ್ ಮತ್ತು ಸ್ಥಳೀಯ ಬಿಜೆಪಿ ನಾಯಕ ವಿಕಾಸ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂಸಾಚಾರ ಪೀಡಿತ ಸಂದೇಶ್‌ಖಾಲಿಯ ಜನರಿಂದ ಕೇವಲ ನಾಲ್ಕು ದೂರುಗಳನ್ನು ಸ್ವೀಕರಿಸಿದ್ದೇವೆ ಆದರೆ ಅವುಗಳಲ್ಲಿ ಯಾವುದೇ ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳದ ಘಟನೆಯನ್ನು ಉಲ್ಲೇಖಿಸಿಲ್ಲ ಎಂದು ಬರಿಸತ್ ಪೊಲೀಸರು ಹೇಳಿದ್ದಾರೆ. ಸಂದೇಶ್‌ಖಾಲಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ಹೊತ್ತಲ್ಲಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಇತರ ಬಿಜೆಪಿ ಮುಖಂಡರು ಸಂದೇಶ್‌ಖಾಲಿಗೆ ಹೋಗಲು ಪ್ರಯತ್ನಿಸಿದಾಗ ಪೊಲೀಸರು ತಡೆದಿದ್ದರು.
ಇತ್ತ ರಾಜ್ಯ ಮಹಿಳಾ ಆಯೋಗದ ತಂಡವೂ ಸಂದೇಶ್‌ಖಾಲಿಗೆ ಭೇಟಿ ನೀಡಿ ಸ್ಥಳೀಯ ಮಹಿಳೆಯರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಕಚೇರಿಗೆ (ಸಿಎಂಒ) ವರದಿ ಸಲ್ಲಿಸಿದೆ. ಸಂದೇಶ್‌ಖಾಲಿ ಘಟನೆಗಳ ತನಿಖೆಗಾಗಿ ರಾಜ್ಯ ಆಡಳಿತವು ಹಿರಿಯ ಐಪಿಎಸ್ ಅಧಿಕಾರಿಗಳ ಅಡಿಯಲ್ಲಿ 10 ಸದಸ್ಯರ ತಂಡವನ್ನು ರಚಿಸಿತ್ತು.
ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ
ಫೆಬ್ರುವರಿಯಲ್ಲಿ ಕಲ್ಕತ್ತಾ ಹೈಕೋರ್ಟ್ ಸಂದೇಶ್‌ಖಾಲಿಯಲ್ಲಿ ಸೆಕ್ಷನ್ 144 ರ ಹೇರಿಕೆಯನ್ನು ರದ್ದುಗೊಳಿಸಿತು. ಅದೇ ವೇಳೆ ರಾಜ್ಯವು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಬೇಕು ಮತ್ತು ಡ್ರೋನ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಕಟ ನಿಗಾ ಇಡಬೇಕು ಎಂದು ಹೇಳಿತ್ತು. ಕಲ್ಕತ್ತಾ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಾಧೀಶ ನ್ಯಾಯಮೂರ್ತಿ ಅಪುರ್ಬಾ ಸಿನ್ಹಾ ರೇ ಅವರು ಸ್ಥಳೀಯ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಮತ್ತು ಅವರಿಂದ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡ ಆರೋಪಗಳನ್ನು ಸ್ವಯಂ ಪ್ರೇರಿತವಾಗಿ ಸ್ವೀಕರಿಸಿದ್ದು ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿದ್ದರು.
ಶಾಜಹಾನ್ ಬಂಧನ
ಭೂಹಗರಣ ಮತ್ತು ಲೈಂಗಿಕ ದೌರ್ಜನ್ಯದ ಅನೇಕ ಆರೋಪಗಳನ್ನು ಎದುರಿಸುತ್ತಿರುವ ತೃಣಮೂಲ ನಾಯಕ ಶಾಜಹಾನ್ನ್ನು ಫೆಬ್ರವರಿ 29 ರಂದು ಪೊಲೀಸರು ಬಂಧಿಸಿದ್ದಾರೆ. ಬಂಧನದ ಕೆಲವೇ ಗಂಟೆಗಳ ನಂತರ ಟಿಎಂಸಿ ಆತನನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿತು. ಈತನ ಬಂಧನದ ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ಸಂಭ್ರಮಾಚರಣೆ ನಡೆಸಿ ಬಂಧಿತ ನಾಯಕನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಮಾನತುಗೊಂಡಿರುವ ತೃಣಮೂಲ ನಾಯಕನೊಂದಿಗಿನ ಸಂಪರ್ಕ ಹೊಂದಿರುವ ವಿವಿಧ ಕಂಪನಿಗಳ ಹಣಕಾಸು ಹೇಳಿಕೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ED) ಏಪ್ರಿಲ್ 04 ಗುರುವಾರ ಶೇಖ್ ಶಾಜಹಾನ್ ಅವರ ವೈಯಕ್ತಿಕ ಖಾತೆ ಸೇರಿದಂತೆ ಅವರ ಎರಡು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು.
ಜನವರಿ 5 ರಂದು ಸಂದೇಶಖಾಲಿಯಲ್ಲಿ ಇಡಿ ಮತ್ತು ಕೇಂದ್ರ ಅರೆಸೇನಾಪಡೆಯ ಸಿಬ್ಬಂದಿಗಳ ಮೇಲಿನ ದಾಳಿಯ ಹಿಂದಿನ ಮಾಸ್ಟರ್‌ಮೈಂಡ್ ಶಾಜಹಾನ್ ವಿರುದ್ಧ ಕೇಂದ್ರ ಏಜೆನ್ಸಿಯು ಎರಡು ಪ್ರತ್ಯೇಕ ಎನ್‌ಫೋರ್ಸ್‌ಮೆಂಟ್ ಕೇಸ್ ಮಾಹಿತಿ ವರದಿಗಳನ್ನು (ಇಸಿಐಆರ್) ದಾಖಲಿಸಿದೆ. ಮೊದಲ ಇಸಿಐಆರ್ ರಾಜ್ಯಾದ್ಯಂತ ಪಡಿತರ ವಿತರಣೆಯಲ್ಲಿನ ಅಕ್ರಮಗಳಲ್ಲಿ ಶಾಜಹಾನ್ ಭಾಗಿಯಾಗಿರುವುದಕ್ಕೆ ಸಂಬಂಧಿಸಿದೆ. ಎರಡನೆಯದು ಸಂದೇಶ್ ಖಾಲಿ ಪ್ರಬಲ ವ್ಯಕ್ತಿ ತನ್ನ ಮೀನು ರಫ್ತು ವ್ಯವಹಾರವನ್ನು ಮನಿ ಲಾಂಡರಿಂಗ್‌ಗೆ ಬಳಸಿಕೊಂಡಿದ್ದಾನೆ ಎಂದು ಹೇಳಲಾಗುತ್ತದೆ.
ಟಿಎಂಸಿ- ಬಿಜೆಪಿ ನಡುವೆ ಆರೋಪ- ಪ್ರತ್ಯಾರೋಪ
ಸಂದೇಶ್‌ಖಾಲಿ ವಿಚಾರದಲ್ಲಿ ಮಮತಾ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದ ಪ್ರಧಾನಿ ಮೋದಿ, ‘ಟಿಎಂಸಿ ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಅಪರಾಧ ಮಾಡಿದವರನ್ನು ರಕ್ಷಿಸಲು ವ್ಯವಸ್ಥೆಯು ಹೇಗೆ ಪ್ರಯತ್ನಿಸಿದೆ ಎಂಬುದನ್ನು ಇಡೀ ದೇಶವೇ ನೋಡಿದೆ. ಸಂದೇಶ್‌ಖಾಲಿ ಅಪರಾಧಿಗಳಿಗೆ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಪ್ರತಿಜ್ಞೆ ಮಾಡಿದೆ ಎಂದು ಏಪ್ರಿಲ್ 4ರಂದು ಬಂಗಾಳದ ಕೂಚ್ ಬೆಹಾರ್‌ನಲ್ಲಿ ಬೃಹತ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂದೇಶಖಾಲಿ ಸಿಂಗೂರ್ ಅಥವಾ ನಂದಿಗ್ರಾಮ್ ಅಲ್ಲ. ನಿನ್ನೆ, ಪ್ರಧಾನಿಯವರು ತಮ್ಮ ಹೋರಾಟ ಭ್ರಷ್ಟಾಚಾರ ಮತ್ತು ಸಂದೇಶಖಾಲಿಯಲ್ಲಿನ ದೌರ್ಜನ್ಯದ ವಿರುದ್ಧ ಎಂದು ಹೇಳಿದರು. ಸಂದೇಶಖಾಲಿ ಸಿಂಗೂರ್ ಅಥವಾ ನಂದಿಗ್ರಾಮ ಅಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಸ್ಥಳೀಯವಾಗಿ ಕೆಲವು ಘಟನೆಗಳು ನಡೆದಿದ್ದರೂ ತಪ್ಪಿತಸ್ಥರನ್ನು ಬಂಧಿಸಲಾಗಿದೆ ಯಾರ ವಿರುದ್ಧವೂ ಅನ್ಯಾಯವಾಗದಂತೆ ನಾವು ಭೂಮಿಯನ್ನು ಜನರಿಗೆ ಹಿಂದಿರುಗಿಸಿದ್ದೇವೆ” ಏಪ್ರಿಲ್ 5ರಂದು ಕೂಚ್‌ಬೆಹಾರ್‌ನ ತುಫಂಗಂಜ್‌ನಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಮಮತಾ ಹೇಳಿದ್ದಾರೆ. ಅಂದ ಹಾಗೆ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೇಖಾ ಪಾತ್ರಾ ಅವರನ್ನು ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಕಣಕ್ಕಿಳಿಸಿದ್ದು, ಪ್ರಧಾನಿ ಮೋದಿ ಈಕೆಯನ್ನು ಶಕ್ತಿ ಸ್ವರೂಪಿಣಿ ಎಂದಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರ ವಿರುದ್ಧ ಹೈಕೋರ್ಟ್ ಕಿಡಿ
ಸಂದೇಶ್‌ಖಾಲಿಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳಲ್ಲಿ ಶೇಕಡಾ ಒಂದಾದರೂ ಸತ್ಯವೆಂದು ಕಂಡುಬಂದರೆ ಅದು “ಅತ್ಯಂತ ನಾಚಿಕೆಗೇಡಿನ ಸಂಗತಿ” ಎಂದು ಪ್ರಸ್ತುತ ಪ್ರಕರಣ ಬಗ್ಗೆ ಏಪ್ರಿಲ್ 4 ರಂದು ವಿಚಾರಣೆ ನಡೆಸಿದ ಕಲ್ಕತ್ತಾ ಹೈಕೋರ್ಟ್ ಹೇಳಿದೆ. ಅರ್ಜಿದಾರ-ವಕೀಲರಾದ ಪ್ರಿಯಾಂಕಾ ತಿಬ್ರೆವಾಲ್ ಅವರು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದು ಇದರಲ್ಲಿ ಭೂಹಗರಣ ಮತ್ತು ಹಿಂಸಾಚಾರದ ಹೊರತಾಗಿ ಲೈಂಗಿಕ ದೌರ್ಜನ್ಯಕ್ಕೀಡಾದವಕು ಸುಮಾರು 100 ಅಫಿಡವಿಟ್‌ಗಳಿವೆ ಎಂದು ಹೇಳಿದರು.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಅವರು ಕನಿಷ್ಠ ಒಂದು ಶೇಕಡಾ (ಆರೋಪಗಳು) ನಿಜವಾಗಿದ್ದರೆ, ಅದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇಡೀ ಜಿಲ್ಲಾಡಳಿತ ಮತ್ತು ಆಡಳಿತ ಮಂಡಳಿಯು ನೈತಿಕ ಹೊಣೆಗಾರಿಕೆ ಮತ್ತು 100% ಜವಾಬ್ದಾರಿಯನ್ನು ಹೊಂದಿರಬೇಕು.ಪಶ್ಚಿಮ ಬಂಗಾಳವು ಮಹಿಳೆಯರಿಗೆ ಸುರಕ್ಷಿತ ರಾಜ್ಯ ಎಂಬ ಅಂಕಿಅಂಶಗಳ ವರದಿಯನ್ನು ಹೊಂದಿದೆ. ಎನ್‌ಸಿಆರ್‌ಬಿ (ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ವರದಿಯ ಪ್ರಕಾರ, ಪಶ್ಚಿಮ ಬಂಗಾಳವು ಮಹಿಳೆಯರ ಸುರಕ್ಷತೆಯಲ್ಲಿ ಮೊದಲ ಸ್ಥಾನದಲ್ಲಿದೆ. ತಿಬ್ರೆವಾಲ್ ಸಲ್ಲಿಸಿದ ಒಂದು ಅಫಿಡವಿಟ್ ಸರಿ ಎಂದು ಸಾಬೀತಾದರೆ, ಅಂಕಿಅಂಶಗಳು ಕುಸಿಯುತ್ತವೆ, ಸಾರ್ವಜನಿಕ ಚಿತ್ರಣವು ಕುಸಿಯುತ್ತದೆ, ಅಭಿಪ್ರಾಯವು ಕುಸಿಯುತ್ತದೆ. ಹಾಗೆ ಕುಸಿದರೆ ನೀವು ಅದನ್ನು ಮತ್ತೆ ಸುಧಾರಿಸಲು ಸಾಧ್ಯವಾಗುವುದಿಲ್ಲ.ಕಣ್ಣು ಮುಚ್ಚಿದರೆ ಜಗತ್ತು ಕತ್ತಲಾಗುವುದಿಲ್ಲ ಎಂದು ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಸಿಬಿಐ ತನಿಖೆಗೆ ಕಲ್ಕತ್ತಾ ಹೈಕೋರ್ಟ್ ಆದೇಶ
ಸಂದೇಶ್‌ಖಾಲಿಯಲ್ಲಿನ ಸುಲಿಗೆ, ಭೂಹಗರಣ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಸಿಬಿಐ ತನಿಖೆ ನಡೆಸಲಿದೆ ಎಂದು ಕಲ್ಕತ್ತಾ ಹೈಕೋರ್ಟ್ ಏಪ್ರಿಲ್ 10ರಂದು ( ಬುಧವಾರ) ತಿಳಿಸಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲಿನ ಜನವರಿ 5 ರ ದಾಳಿಯ ಬಗ್ಗೆಯೂ ತನಿಖೆ ನಡೆಸುತ್ತಿರುವ ಕೇಂದ್ರೀಯ ಏಜೆನ್ಸಿಯ ತನಿಖೆಯನ್ನು ನ್ಯಾಯಾಲಯವು ಮೇಲ್ವಿಚಾರಣೆ ಮಾಡುತ್ತದೆ ಎಂದು ಅದು ಹೇಳಿದೆ. “ಸಂದೇಶ್‌ಖಾಲಿಯಲ್ಲಿನ ವಿಷಯಗಳ ಸಂಕೀರ್ಣತೆಯನ್ನು ಪರಿಗಣಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂಬುದರಲ್ಲಿ ಸಂದೇಹವಿಲ್ಲ. ರಾಜ್ಯವು (ಯಾವುದೇ) ಏಜೆನ್ಸಿ ಉಸ್ತುವಾರಿಗೆ ಸರಿಯಾದ ಬೆಂಬಲವನ್ನು ನೀಡಬೇಕು ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ”ಎಂದು ಹೈಕೋರ್ಟ್ ಹೇಳಿದೆ.