ಪಟನಾ: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ (Hijab row)ಬಗ್ಗೆ ಪ್ರತಿಕ್ರಿಯಿಸಿದ ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar), ಹಿಜಾಬ್ ನಮಗೆ ಸಮಸ್ಯೆ ಅಲ್ಲ, ನಮ್ಮ ರಾಜ್ಯದಲ್ಲಿ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ. ತರಗತಿಯಲ್ಲಿ ಯಾರಾದರೂ ತಲೆಯ ಮೇಲೆ ಏನನ್ನಾದರೂ ಹಾಕಿದರೆ, ಅದರ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ನಿತೀಶ್ ಕುಮಾರ್ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದರು. “ಇದು ಬಿಹಾರದ ವಿಷಯವಲ್ಲ, ನಾವು ಅಂತಹ ವಿಷಯಗಳ ಬಗ್ಗೆ ಗಮನಹರಿಸಬಾರದು. ಇದು ನಿಷ್ಪ್ರಯೋಜಕ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ ಎಂದು ಕುಮಾರ್ ಹೇಳಿದರು. ಬಿಹಾರದ ಶಾಲೆಗಳಲ್ಲಿ ಮಕ್ಕಳು ಬಹುತೇಕ ಒಂದೇ ರೀತಿಯ ಉಡುಗೆಯನ್ನು ಧರಿಸುತ್ತಾರೆ. ಯಾರಾದರೂ ತಲೆಗೆ ಏನಾದರೂ ಹಾಕಿಕೊಂಡರೆ ಅದಕ್ಕೆ ಕಾಮೆಂಟ್ ಮಾಡುವ ಅಗತ್ಯವಿಲ್ಲ. ಅಂತಹ ವಿಷಯಗಳಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ನಾವು ಪರಸ್ಪರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ ಎಂದು ಅವರು ಹೇಳಿದರು. ತಮ್ಮ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವಾದ ‘ಜನತಾ ಕೇ ದರ್ಬಾರ್ ಮೇ ಮುಖ್ಯಮಂತ್ರಿ’ಯಲ್ಲಿ ಮಾತನಾಡಿದ ನಿತೀಶ್ ಕುಮಾರ್ ನಮ್ಮ ರಾಜ್ಯದ ಆಡಳಿತದಲ್ಲಿ ಎಲ್ಲರೂ ಸಮಾನರು ಎಂದು ಹೇಳಿದ್ದಾರೆ. ಬಿಹಾರದಲ್ಲಿ ಕುಮಾರ್ ಅವರ ಜನತಾ ದಳ (ಯುನೈಟೆಡ್) ಅಧಿಕಾರವನ್ನು ಹಂಚಿಕೊಂಡಿರುವ ಬಿಜೆಪಿ ಆಡಳಿತದಲ್ಲಿರುವ ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದೆ. ಡಿಸೆಂಬರ್ ಅಂತ್ಯದಲ್ಲಿ ತಮ್ಮ ನಂಬಿಕೆಯನ್ನು ಉಲ್ಲೇಖಿಸಿ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುವುದರೊಂದಿಗೆ ಇದು ಉಡುಪಿಯಲ್ಲಿ ಪ್ರಾರಂಭವಾಯಿತು. ಇದಕ್ಕೆ ಪ್ರತಿಯಾಗಿ, ಕೆಲವು ಹಿಂದೂ ವಿದ್ಯಾರ್ಥಿಗಳು ಕೇಸರಿ ಸ್ಕಾರ್ಫ್ ಧರಿಸಿ ಕಾಲೇಜಿನಲ್ಲಿ ಬರಲಾರಂಭಿಸಿದರು.
ಕ್ರಮೇಣ ಈ ಸಮಸ್ಯೆಯು ರಾಜ್ಯದ ಇತರ ಭಾಗಗಳಿಗೆ ಹರಡಿತು. ಕೆಲವು ಸ್ಥಳಗಳಲ್ಲಿ ಕ್ಯಾಂಪಸ್‌ನಲ್ಲಿ ಉದ್ವಿಗ್ನತೆ ಮತ್ತು ಹಿಂಸಾಚಾರಕ್ಕೆ ಕಾರಣವಾಯಿತು. ತರುವಾಯ, ಕ್ಯಾಂಪಸ್‌ಗಳಲ್ಲಿ ಯಾವುದೇ ಹೆಚ್ಚಿನ ಗೊಂದಲಗಳು ಮತ್ತು ಅಹಿತಕರ ಘಟನೆಗಳನ್ನು ತಪ್ಪಿಸಲು ಕರ್ನಾಟಕ ಸರ್ಕಾರವು ಫೆಬ್ರವರಿ 9 ರಿಂದ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಮೂರು ದಿನಗಳ ರಜೆಯನ್ನು ಘೋಷಿಸಿತು.
ಕರ್ನಾಟಕ ಹೈಕೋರ್ಟ್‌ನಲ್ಲಿ ಈ ವಿಷಯದ ಕುರಿತು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಮಧ್ಯಂತರ ಆದೇಶದಲ್ಲಿ, ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರವನ್ನು ಕೋರಲಾಗಿದೆ ಮತ್ತು ಎಲ್ಲಾ ವಿದ್ಯಾರ್ಥಿಗಳು ತರಗತಿಯೊಳಗೆ ಕೇಸರಿ ಶಾಲು, ಸ್ಕಾರ್ಫ್, ಹಿಜಾಬ್ ಮತ್ತು ಯಾವುದೇ ಧಾರ್ಮಿಕ ಸಂಕೇತವನ್ನು ಧರಿಸುವುದನ್ನು ನಿರ್ಬಂಧಿಸಿದೆ.
ಇದನ್ನೂ ಓದಿ: Karnataka Hijab Row: ಹಿಜಾಬ್ ವಿವಾದ; ಅರ್ಜಿದಾರ ಯುವತಿಯರಿಂದ ಹೈಕೋರ್ಟ್ಗೆ ಮತ್ತೆ ಎರಡು ಅರ್ಜಿ ಸಲ್ಲಿಕೆ