
ಶಿಮ್ಲಾ, ಜೂನ್ 18: ಶಿಮ್ಲಾದ ಮಸ್ರುಂದ್-ಹಮಲ್ ರಸ್ತೆಯಲ್ಲಿ ವಾಹನವೊಂದು ಕಂದಕಕ್ಕೆ ಉರುಳಿದ ಪರಿಣಾಮ ಏಳು ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಬುಧವಾರ ಮಧ್ಯರಾತ್ರಿ 2 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ವಾಹನದ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಈ ಅಪಘಾತ(Accident) ಸಂಭವಿಸಿದೆ.
ಮೃತಪಟ್ಟವರೆಲ್ಲರೂ ಕುತೇಡ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಲ್ ಗ್ರಾಮದ ನಿವಾಸಿಗಳಾಗಿದ್ದಾರೆ. ಇವರೆಲ್ಲರೂ ಕಾಕ್ರೋಧಾ ಗ್ರಾಮದಲ್ಲಿ ನಡೆದ ಸಮಾರಂಭ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ.
ಅಪಘಾತದ ತೀವ್ರತೆಗೆ ಬೊಲೆರೊ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಮೂವರು ಮಹಿಳೆಯರು ಮತ್ತು ಮೂವರು ಪುರುಷರು ಸೇರಿ ಒಟ್ಟು ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು, ಜಿಲ್ಲಾಡಳಿತ ಅಧಿಕಾರಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಆದರೆ, ದಟ್ಟ ಕತ್ತಲೆ ಮತ್ತು ಕಡಿದಾದ ಗುಡ್ಡಗಾಡು ಪ್ರದೇಶವಾಗಿದ್ದರಿಂದ ಕಂದಕಕ್ಕೆ ಇಳಿದು ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ತಂಡಗಳು ತೀವ್ರ ಸವಾಲು ಎದುರಿಸಬೇಕಾಯಿತು.
ಅಪಘಾತ ನಡೆದ ರಸ್ತೆಯಲ್ಲಿ ಸುರಕ್ಷತಾ ತಡೆಗೋಡೆಗಳು ಇಲ್ಲದಿರುವುದೇ ಈ ಭೀಕರ ದುರಂತಕ್ಕೆ ಕಾರಣ ಎಂದು ಸ್ಥಳೀಯ ನಿವಾಸಿಗಳು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ತಡೆಗೋಡೆಗಳಿದ್ದಿದ್ದರೆ ಇಷ್ಟೊಂದು ದೊಡ್ಡ ಸಾವು-ನೋವು ಸಂಭವಿಸುತ್ತಿರಲಿಲ್ಲ ಎಂದು ಅವರು ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಓದಿ: ದುಬೈ ರಸ್ತೆ ಅಪಘಾತ ಸಂತ್ರಸ್ತರಿಗೆ ನೆರವಾದ ಅನಿವಾಸಿ ಭಾರತೀಯ ಉದ್ಯಮಿ: 2.6 ಕೋಟಿ ರೂ. ನೆರವು ಘೋಷಿಸಿದ ಡಾ. ಶಂಶೀರ್ ವಯಾಲಿಲ್
ಚಂಬಾದಲ್ಲಿ ನಡೆದ ಮತ್ತೊಂದು ಅಪಘಾತ: ಇಬ್ಬರು ಸಾವು
ಇದಕ್ಕೂ ಒಂದು ದಿನ ಮುಂಚೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ (NH-154A) ಬನಿಖೇತ್-ಚಂಬಾ ರಸ್ತೆಯ ಅಣೆಕಟ್ಟು ವ್ಯೂ ಪಾಯಿಂಟ್ ಬಳಿ ಮತ್ತೊಂದು ಕಾರು ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಕಾರು ಮೇಲಿನ ರಸ್ತೆಯಿಂದ ಕೆಳಗಿನ ಚೋಹ್ರಾ ಅಣೆಕಟ್ಟು ರಸ್ತೆಯ ಕಂದಕಕ್ಕೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ