ಮಹಾರಾಷ್ಟ್ರದಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್ ಪ್ರಕರಣ: ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು
ಮಹಾರಾಷ್ಟ್ರದಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್ ಪ್ರಕರಣ ಪತ್ತೆಯಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಹಿಂದಿನಿಂದ ಕಾರು ಬಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್(Hit and Run) ಪ್ರಕರಣ ಬೆಳಕಿಗೆ ಬಂದಿದೆ. 36 ವರ್ಷದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಸಿಕ್‌ನ ಗಂಗಾಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಪಘಾತದ ಪರಿಣಾಮವು ಎಷ್ಟು ತೀವ್ರವಾಗಿದೆಯೆಂದರೆ, ವೈಶಾಲಿ ಶಿಂಧೆ ಎಂದು ಗುರುತಿಸಲ್ಪಟ್ಟ ಮಹಿಳೆಗೆ ಕಾರು ಗುದ್ದಿದ ಪರಿಣಾಮ ಅವರು ಹಾರಿ ನೆಲಕ್ಕೆ ಬಿದ್ದಿದ್ದಾರೆ.
ಮಹಿಳೆ ಹನುಮಂತನಗರ ನಿವಾಸಿ. ಅಪಘಾತದ ನಂತರ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಂದು ದಿನದ ಹಿಂದೆ, ನಾಸಿಕ್‌ನ ಗಂಗಾಪುರ ರಸ್ತೆ ಮತ್ತು ಕಾಲೇಜು ರಸ್ತೆಯನ್ನು ಸಂಪರ್ಕಿಸುವ ರಸ್ತೆಯಲ್ಲಿ 45 ವರ್ಷದ ಮಹಿಳೆಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ್ದರು.
ಮಹಿಳೆ ನಿಧಿ ವೇರ್ ತರಕಾರಿ ಖರೀದಿಸಲು ಹೊರಟಿದ್ದಾಗ ಟ್ರಕ್ ಡಿಕ್ಕಿ ಹೊಡೆದಿತ್ತು. ಮುಂಬೈನ ವರ್ಲಿಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ಮಾಸುವ ಮುನ್ನವೇ ಈ ಘಟನೆಗಳು ಸಂಭವಿಸಿವೆ. ಮೀನು ಖರೀದಿಸಿ ಮನೆಗೆ ಮರಳುತ್ತಿದ್ದ ದಂಪತಿಗೆ ವೇಗವಾಗಿ ಬಂದ ಬಿಎಂಡಬ್ಲ್ಯು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಕಾರಿನ ಬಾನೆಟ್ ಮೇಲೆ ಸುಮಾರು ಒಂದೂವರೆ ಕಿಲೋಮೀಟರ್ ದೂರ ಎಳೆದೊಯ್ದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: 4 ತಿಂಗಳ ಹಿಂದಿನ ಹಿಟ್ ಆ್ಯಂಡ್ ರನ್ ಪ್ರಕರಣ, ಪೊಲೀಸರಿಗೆ ಶರಣಾದ ಚಾಲಕಿ
ಆರೋಪಿ, ಏಕನಾಥ್ ಶಿಂಧೆ ಶಿವಸೇನಾ ಬಣದ ನಾಯಕನ ಮಗ ಮಿಹಿರ್ ಶಾನನ್ನು ಮೂರು ದಿನಗಳ ನಂತರ ಬಂಧಿಸಲಾಯಿತು. ಮಹಿಳೆಯನ್ನು 1.5 ಕಿ.ಮೀ ಎಳೆದೊಯ್ದ ಬಳಿಕ ಮಿಹಿರ್ ಶಾ ಕಾರಿನಿಂದ ಇಳಿದು ಅಲ್ಲಿ ಚಾಲಕನನ್ನು ಕೂರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶಾ ಮಹಿಳೆಯ ಶವವನ್ನು ಕಾರಿನಡಿಯಿಂದ ಹೊರತೆಗೆದು ರಸ್ತೆಯ ಮೇಲೆ ಬಿಟ್ಟಿದ್ದಾನೆ. ನಂತರ ಚಾಲಕ ಮತ್ತೊಮ್ಮೆ ಮಹಿಳೆ ಮೇಲೆ ಕಾರು ಹತ್ತಿಸಿ ಪರಾರಿಯಾಗಿದ್ದ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ