HMPV in India: ಬೆಂಗಳೂರಿನ ಬಳಿಕ ಗುಜರಾತ್​ನ ಅಹಮದಾಬಾದ್‌ನಲ್ಲಿ ದೇಶದ 3ನೇ ಎಚ್‌ಎಂಪಿವಿ ಪ್ರಕರಣ ಪತ್ತೆ

|

Updated on: Jan 06, 2025 | 3:24 PM

ಈಗಾಗಲೇ ಕರ್ನಾಟಕದ ಇಬ್ಬರು ಮಕ್ಕಳಲ್ಲಿ ಎಚ್​ಎಂಪಿವಿ ಪ್ರಕರಣ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಭಾರತದ ಮೂರನೇ ಎಚ್​ಎಂಪಿವಿ ವೈರಸ್ ಗುಜರಾತ್​ನ ಅಹಮದಾಬಾದ್‌ನಲ್ಲಿ ಪತ್ತೆಯಾಗಿದೆ. ಗುಜರಾತ್‌ನಲ್ಲಿ ಇದು ಮೊದಲ ಎಚ್‌ಎಂಪಿವಿ ಪ್ರಕರಣವಾಗಿದೆ. ಸುಮಾರು 2 ವರ್ಷದ ವಯಸ್ಸಿನ ಮಗುವಿನಲ್ಲಿ ಈ HMPV ವೈರಸ್ ಪತ್ತೆಯಾಗಿದೆ. ರೋಗಿಯನ್ನು ಅಹಮದಾಬಾದ್‌ನ ಚಂದ್‌ಖೇಡಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತದಲ್ಲಿ ಇದುವರೆಗೂ ಪತ್ತೆಯಾಗಿರುವ ಮೂರೂ ಪ್ರಕರಣಗಳು ಶಿಶುಗಳಲ್ಲಿಯೇ ಪತ್ತೆಯಾಗಿದೆ ಎಂಬುದು ಗಮನಾರ್ಹ ವಿಷಯ.

HMPV in India: ಬೆಂಗಳೂರಿನ ಬಳಿಕ ಗುಜರಾತ್​ನ ಅಹಮದಾಬಾದ್‌ನಲ್ಲಿ ದೇಶದ 3ನೇ ಎಚ್‌ಎಂಪಿವಿ ಪ್ರಕರಣ ಪತ್ತೆ
Hmpv
Follow us on

ಅಹಮದಾಬಾದ್: ಕರ್ನಾಟಕದಲ್ಲಿ ಎರಡು ಎಚ್‌ಎಂಪಿವಿ (ಹ್ಯೂಮನ್ ಮೆಟಾಪ್ನ್ಯೂಮೋವೈರಸ್) ಪ್ರಕರಣಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿದ ಕೆಲವೇ ಗಂಟೆಗಳ ನಂತರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತ್ತೊಂದು HMPV ಪ್ರಕರಣ ಪತ್ತೆಯಾಗಿದೆ. ಇದು ಗುಜರಾತ್‌ನಲ್ಲಿ ಎಚ್‌ಎಂಪಿವಿ ಮೊದಲ ಪ್ರಕರಣವಾಗಿದೆ. ಅಹಮದಾಬಾದ್​ನ 2 ವರ್ಷ ವಯಸ್ಸಿನ ಮಗುವಿನಲ್ಲಿ ಎಚ್‌ಎಂಪಿವಿ ವೈರಸ್ ಪತ್ತೆಯಾಗಿದೆ. ಆ ಶಿಶುವನ್ನು ಅಹಮದಾಬಾದ್‌ನ ಚಂದ್‌ಖೇಡಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಮಗು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು.

ಈ ಮೊದಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕರ್ನಾಟಕದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್‌ಎಂಪಿವಿ)ಯ ಎರಡು ಪ್ರಕರಣಗಳನ್ನು ಖಚಿತಪಡಿಸಿತ್ತು. ಬಹಳ ಉಸಿರಾಟದ ವೈರಲ್ ರೋಗಕಾರಕಗಳ ಮೂಲಕ ಪತ್ತೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾದ ಬ್ರಾಂಕೋಪ್ನ್ಯುಮೋನಿಯಾದ ಇತಿಹಾಸ ಹೊಂದಿದ್ದ 3 ತಿಂಗಳ ಹೆಣ್ಣು ಮಗುವಿನಲ್ಲಿ ಎಚ್‌ಎಂಪಿವಿ ಇರುವುದು ಪತ್ತೆಯಾಗಿದೆ. ಆ ಮಗುವನ್ನು ಈಗಾಗಲೇ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: HMPV Virus: ಅಮೆರಿಕದಲ್ಲಿ ಹರಡುತ್ತಿದೆ ಎಚ್​​​ಎಂಪಿವಿ ವೈರಸ್; ಏನಿದರ ರೋಗ ಲಕ್ಷಣ?, ಮುಂಜಾಗ್ರತಾ ಕ್ರಮ ಬಗ್ಗೆ ಇಲ್ಲಿದೆ ಮಾಹಿತಿ

ಬ್ರಾಂಕೋಪ್ನ್ಯುಮೋನಿಯಾದ ಇತಿಹಾಸ ಹೊಂದಿರುವ 8 ತಿಂಗಳ ವಯಸ್ಸಿನ ಇನ್ನೊಂದು ಗಂಡು ಶಿಶು ಜನವರಿ 3ರಂದು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾದ ನಂತರ ಎಚ್‌ಎಂಪಿವಿ ಪಾಸಿಟಿವ್ ಖಚಿತವಾಗಿತ್ತು. ಆ ಮಗು ಈಗ ಚೇತರಿಸಿಕೊಳ್ಳುತ್ತಿದೆ. ಯಾವುದೇ ರೋಗಿಗಳಿಗೆ ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸವಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ ಎಂದು ಸಚಿವಾಲಯವು ಒತ್ತಿಹೇಳಿದೆ. ಹೀಗಾಗಿ, ಭಾರತದಲ್ಲಿ ಎಚ್‌ಎಂಪಿವಿ ಹರಡುವ ಆತಂಕ ಹೆಚ್ಚಾಗಿದೆ. ಸರ್ಕಾರ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.


ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಪ್ರಕಾರ, HMPV ಉಸಿರಾಟದ ಸೋಂಕುಗಳಿಗೆ ಕಾರಣವಾಗುತ್ತದೆ. ಇದು ಎಲ್ಲಾ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಚಿಕ್ಕ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಹೊಂದಿರುವವರು ಹೆಚ್ಚು ದುರ್ಬಲರಾಗಿರುತ್ತಾರೆ. ಅವರಿಗೆ ಈ ವೈರಸ್ ಹರಡುವ ಅಪಾಯ ಹೆಚ್ಚು.


ಇದನ್ನೂ ಓದಿ: HMPV Virus: ಷೇರು ಮಾರುಕಟ್ಟೆ ಮೇಲೂ ಎಚ್​ಎಂಪಿವಿ ವೈರಸ್ ಪ್ರಭಾವ, ಸಾವಿರಕ್ಕೂ ಹೆಚ್ಚು ಅಂಶ ಕುಸಿದ ಸೆನ್ಸೆಕ್ಸ್

ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ಪತ್ತೆಯಾದ ನಂತರ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್‌ಎಂಪಿವಿ) ದೇಶದಲ್ಲಿ ಈಗಾಗಲೇ ಇರುವುದರಿಂದ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಕರ್ನಾಟಕ ಸರ್ಕಾರ ಭರವಸೆ ನೀಡಿದೆ. “ನಾವು ಆತಂಕಗೊಳ್ಳಬೇಕು ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ HMPV ಹೊಸ ವೈರಸ್ ಅಲ್ಲ, ಅದು ಈಗಾಗಲೇ ಅಸ್ತಿತ್ವದಲ್ಲಿದೆ. ಬೆಂಗಳೂರಿನಲ್ಲಿ ಕಾಣಿಸಿಕೊಂಡ ಪ್ರಕರಣ ಭಾರತದಲ್ಲಿ ಎಚ್‌ಎಂಪಿವಿಯ ಮೊದಲ ಪ್ರಕರಣವಾಗಿದೆ ಎಂದು ಹೇಳಲಾಗಿದೆ. HMPV ಅಸ್ತಿತ್ವದಲ್ಲಿರುವ ವೈರಸ್ ಆಗಿರುವುದರಿಂದ ಈ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ” ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ