
ನವದೆಹಲಿ, ನವೆಂಬರ್ 13: ದೆಹಲಿ ಸ್ಫೋಟಕ್ಕೆ ಕಾರಣರಾದ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ಪ್ರತಿಜ್ಞೆ ಮಾಡಿದ್ದಾರೆ. ಗುಜರಾತ್‌ನಲ್ಲಿ ಮೋತಿ ಭಾಯ್ ಚೌಧರಿ ಸಾಗರ್ ಸೈನಿಕ್ ಶಾಲೆಯ ಉದ್ಘಾಟನೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಅಪರಾಧಿಗಳಿಗೆ ನಾವು ನೀಡುವ ಶಿಕ್ಷೆಯು ಜಗತ್ತಿಗೆ ಕಠಿಣ ಸಂದೇಶವನ್ನು ರವಾನಿಸುತ್ತದೆ. ಯಾರೂ ನಮ್ಮ ದೇಶದ ಮೇಲೆ ಭಯೋತ್ಪಾದನಾ ದಾಳಿಯ ಬಗ್ಗೆ ಯೋಚಿಸಲು ಧೈರ್ಯ ಮಾಡಬಾರದು ಅಂತಹ ಶಿಕ್ಷೆ ನೀಡುತ್ತೇವೆ ಎಂದು ಹೇಳಿದ್ದಾರೆ.
“ಈ ಹೇಡಿತನದ ಕೃತ್ಯ ಎಸಗಿದ ಎಲ್ಲರನ್ನು ಮತ್ತು ಅದರ ಹಿಂದಿರುವವರನ್ನು ಕಾನೂನಿನ ಮುಂದೆ ಹಾಜರುಪಡಿಸಿ ಸಾಧ್ಯವಾದಷ್ಟು ಕಠಿಣ ಶಿಕ್ಷೆ ವಿಧಿಸಲಾಗುವುದು. ಭಾರತ ಸರ್ಕಾರ ಮತ್ತು ಗೃಹ ಸಚಿವಾಲಯವು ಈ ನಿರ್ಧಾರಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಸ್ಫೋಟದ ಆರೋಪಿಗೂ ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಪತ್ನಿಗೂ ಇತ್ತು ಲಿಂಕ್!
ಸೋಮವಾರ ಸಂಜೆ ಕೆಂಪು ಕೋಟೆ ಬಳಿಯ ಮೆಟ್ರೋ ನಿಲ್ದಾಣದ ಬಳಿ ನಿಧಾನವಾಗಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿ 12 ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡರು. ಈ ಸ್ಫೋಟವು ಹತ್ತಿರದ ಹಲವಾರು ವಾಹನಗಳನ್ನು ಸಹ ಆವರಿಸಿದ್ದು, ವ್ಯಾಪಕ ಹಾನಿಯನ್ನುಂಟುಮಾಡಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. ಇದೊಂದು ಭಯೋತ್ಪಾದನಾ ದಾಳಿ ಎಂದು ಕೇಂದ್ರ ಸರ್ಕಾರ ಖಚಿತಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ