ಇಂಫಾಲ್: ಮಣಿಪುರದಲ್ಲಿ ಇದೀಗ ಮತ್ತೆ ಹಿಂಸಾಚಾರ ಮುಂದುವರಿದಿದ್ದು, ಇದೀಗ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆಗೆ ಮುಂದಾಗಿದ್ದು, ಇದರಿಂದ ಅನೇಕರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರದ ರಾಜಧಾನಿ ಇಂಫಾಲದಲ್ಲಿ ಇಂದು ರಾಜ್ಯ ಸರ್ಕಾರ ಕರ್ಫ್ಯೂ ಜಾರಿಗೊಳಿಸಿದ್ದರೂ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದ್ದಾರೆ. ಕೆಲವರಿಗೆ ಗಾಯಗಳಾಗಿದ್ದು, ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂಫಾಲ್‌ನ ನ್ಯೂ ಚೆಕ್‌ಕಾನ್ ನೆರೆಹೊರೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ. ಅಗ್ನಿಶಾಮಕ ದಳದವರು ಉರಿಯುತ್ತಿರುವ ಮನೆಯನ್ನು ನಂದಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಕಿರಿದಾದ ರಸ್ತೆಯಲ್ಲಿ ಪ್ರತಿಭಟನಾಕಾರರ ದೊಡ್ಡ ಗುಂಪಿನ ಮೇಲೆ ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ಸಿಬ್ಬಂದಿ ಅಶ್ರುವಾಯು ಗುಂಡು ಹಾರಿಸಿದ್ದಾರೆ. ಖಮೆನ್ಲೋಕ್ ಗ್ರಾಮದಲ್ಲಿ ನೆನ್ನೆ (ಜೂ.14) ನಡೆದ ಹಿಂಸಾಚಾರದಲ್ಲಿ ಮಹಿಳೆ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ, ಆದರೆ ಇದೀಗ ಮತ್ತೆ ಪರಿಸ್ಥಿತಿ ಉದ್ವಿಗ್ನವಾಗಿದ್ದು ಜನರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಬುಧವಾರ ನಡೆದ ಘಟನೆಯಿಂದ ಗಾಯಗೊಂಡ ಹಲವರನ್ನು ಚಿಕಿತ್ಸೆಗಾಗಿ ಇಂಫಾಲನಲ್ಲಿರುವ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಹಿಂಸಾಚಾರದಲ್ಲಿ ಸತ್ತವರ ಕೆಲವರ ದೇಹದಲ್ಲಿ ಗಂಭೀರ ಗಾಯಗಳು ಕಂಡು ಬಂದಿದ್ದು, ಇನ್ನೂ ಕೆಲವರಿಗೆ ಗುಂಡಿನ ದಾಳಿಯಿಂದ ಗಾಯಗಳು ಆಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Manipur Violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ, 9 ಸಾವು, ಹಲವರಿಗೆ ಗಾಯ
ಎರಡು ಸಮುದಾಯಗಳ ಮೀಸಲಾತಿ ವಿಚಾರವಾಗಿ ಪ್ರಾರಂಭವಾದ ಈ ಗಲಭೆ, ಇದೀಗ ಇಡಿ ರಾಜ್ಯಕ್ಕೆ ದೊಡ್ಡ ತಲೆ ನೋವುವಾಗಿದೆ. ಹಿಂಸಾಚಾರ ಪ್ರದೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದು, ಈ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಆದೇಶ ನೀಡಿದ್ದಾರೆ. ಇದರ ಜತೆಗೆ ಈ ಗಲಭೆಯಿಂದ ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಅವರ ಕುಟುಂಬಕ್ಕೆ ಪರಿಹಾರ ಕ್ರಮಗಳನ್ನು ಮಾಡಲಾಗಿದೆ, ಇನ್ನೂ ವಲಸೆ ಹೋಗಿರುವ ನಿರಾಶಿತರಿಗೆ, ಮನೆ ಕಳೆದುಕೊಂಡವರಿಗೂ ಪರಿಹಾರ ನೀಡಲಾಗಿದೆ, ಪೊಲೀಸ್ ಜತೆಗೆ ಸೈನ್ಯವು ಪ್ರಮುಖ ಕ್ರಮಗಳನ್ನು ತೆಗೆದುಕೊಂಡರು ಹಿಂಸಾಚಾರ ಮತ್ತಷ್ಟು ಹೆಚ್ಚಾಗುತ್ತಿದೆ. ಇದೀಗ ಪ್ರತಿಭಟನನಿರತರು ಮತ್ತು ಸೇನೆಯ ನಡುವೆ ಘರ್ಷಣೆ ಉಂಟಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Thu, 15 June 23