Cyclone Nivar ಎದುರಿಸಲು ಹೇಗೆ ಸಿದ್ಧವಾಗ್ತಿದೆ ತಮಿಳುನಾಡು, ಪುದುಚೇರಿ?
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ನಿವಾರ್ ಚಂಡಮಾರುತದ ಪ್ರಭಾವದಿಂದ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ವಿವಿಧೆಡೆ ಭಾರಿ ಮಳೆಯಾಗಬಹುದು ಎಂಬ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ನಿವಾರ್ ಚಂಡಮಾರುತದ ಪ್ರಭಾವದಿಂದ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ವಿವಿಧೆಡೆ ಭಾರಿ ಮಳೆಯಾಗಬಹುದು ಎಂಬ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಭಾರಿ ಮಳೆ, ಗಾಳಿಯೊಂದಿಗೆ ಸಮುದ್ರದಲ್ಲಿ ಸುಮಾರು 10 ಮೀಟರ್ವರೆಗೆ ಅಲೆಗಳು ಕಾಣಿಸಿಕೊಳ್ಳಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಭಾರಿ ಮಳೆಯ ಮುನ್ಸೂಚನೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಚಂಡಮಾರುತದ ಪ್ರಭಾವದಿಂದ ಸೋಮವಾರ ರಾತ್ರಿಯಿಂದಲೇ ಚೆನ್ನೈ ಸೇರಿದಂತೆ ವಿವಿಧೆಡೆ ವ್ಯಾಪಕ ಮಳೆಯಾಗಿದೆ. 2018ರಲ್ಲಿ ಅಪ್ಪಳಿಸಿದ್ದ ಗಾಜಾ ಚಂಡಮಾರುತದ ನಂತರ ತಮಿಳುನಾಡು ಪ್ರವೇಶಿಸುತ್ತಿರುವ 2ನೇ ತೀಕ್ಷ್ಣ ಚಂಡಮಾರುತ ಇದು. ಈ ಚಂಡಮಾರುತಕ್ಕೆ ಇರಿಸಿರುವ ನಿವಾರ್ ಹೆಸರನ್ನು ಸೂಚಿಸಿದ್ದು ಇರಾನ್ ದೇಶ.
ಪುದುಚೇರಿ ಸಮೀಪವಿರುವ ಕಾರೈಕಲ್ ಮತ್ತು ಮಾಮಲ್ಲಪುರಂ ನಡುವಣ ಸಮುದ್ರತೀರದಲ್ಲಿ ಬುಧವಾರ ಸಂಜೆ 5 ಗಂಟೆಗೆ ಚಂಡಮಾರುತವು ಭೂಸ್ಪರ್ಶ ಮಾಡಬಹುದು. ಈ ಸಂದರ್ಭ ಗಂಟೆಗೆ 90ರಿಂದ 110 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು ಎಂದು ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳುತ್ತಾರೆ.
ಚಂಡಮಾರುತದಿಂದಾಗಿ 20 ಸೆಂ.ಮೀ.ಗೂ ಹೆಚ್ಚಿನ ಪ್ರಮಾಣದ ಮಳೆ ಸುರಿಯುವ ನಿರೀಕ್ಷೆಯಿರುವ ಕಾರಣ ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಂಕಷ್ಟ ಪರಿಸ್ಥಿತಿ ಎದುರಿಸಲು ಸ್ಥಳೀಯ ಆಡಳಿತಗಳಿಗೆ ನೆರವಾಗಲು ಎನ್ಡಿಆರ್ಎಫ್ನ ಆರು ತಂಡಗಳು ತಮಿಳುನಾಡಿನ ಕಡಲೂರು ಜಿಲ್ಲೆಗೆ ಬರಲಿದೆ.
ತೆಲಂಗಾಣ, ಆಂಧ್ರ ಪ್ರದೇಶ ಮತ್ತು ದಕ್ಷಿಣ ಕರ್ನಾಟಕದ ಒಳನಾಡಿನಲ್ಲಿ ಚಂಡಮಾರುತ ಪ್ರಭಾವದಿಂದ ಭಾರಿ ಮಳೆ ಸುರಿಯುವ ನಿರೀಕ್ಷೆಯಿದೆ. ಛತ್ತೀಸಗಡ ಮತ್ತು ಒಡಿಶಾಗಳೂ ಚಂಡಮಾರುತದ ವ್ಯಾಪ್ತಿಯಲ್ಲಿದ್ದು, ಆ ರಾಜ್ಯಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಅನಾಹುತ ನಿರೀಕ್ಷಿತ
ಚಂಡಮಾರುತದ ಪ್ರಭಾವದಿಂದ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯಲಿದ್ದು, ಗುಡಿಸಲುಗಳು ಉರುಳಬಹುದು. ವಿದ್ಯುತ್ ಸಂಪರ್ಕ ಕಡಿತಗೊಳ್ಳಬಹುದು, ರಸ್ತೆಗಳು ಜಲಾವೃತಗೊಳ್ಳುವ, ರಸ್ತೆಗಳ ಮೇಲೆ ಮರಗಳು ಉರುಳಿ ಬೀಳುವ ಸಾಧ್ಯತೆಗಳು ಇರುತ್ತದೆ. ಸಮುದ್ರದ ಉಪ್ಪುನೀರು ಭೂಮಿಯತ್ತ ನುಗ್ಗಿ ಬರುವ ಕಾರಣ ಬೆಳೆಗಳು ಹಾಳಾಗಬಹುದು.
ಅನಾಹುತ ಎದುರಿಸಲು ಸಿದ್ಧತೆ
ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಮತ್ತು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾತನಾಡಿ, ಚಂಡಮಾರುತ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಯ ಬಗ್ಗೆ ಚರ್ಚಿಸಿದರು. ಸಂಕಷ್ಟ ಪರಿಸ್ಥಿತಿ ಎದುರಿಸಲು ಕೇಂದ್ರದಿಂದ ಎಲ್ಲ ರೀತಿಯ ಸಹಾಯ ಒದಗಿಸುವ ಭರವಸೆ ನೀಡಿದರು.
ಮಂಗಳವಾರ ರಾತ್ರಿ 9 ಗಂಟೆಯಿಂದ ಗುರುವಾರ ಮುಂಜಾನೆ 6 ಗಂಟೆಯವರೆಗೆ ಜನಸಂಚಾರಕ್ಕೆ ಪುದುಚೇರಿ ಆಡಳಿತ ನಿರ್ಬಂಧ ಹೇರಿದೆ. ತಮಿಳುನಾಡಿನ ಪುದುಕೊಟ್ಟಲ್, ತಂಜಾವೂರು, ನಾಗಪಟ್ಟಿಣಂ, ಮೈಲಾದುರೈ ಮತ್ತು ತಿರುವರೂರ್ ಜಿಲ್ಲೆಗಳಲ್ಲಿ ಈಗಾಗಲೇ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಜನರು ಮನೆಗಳಲ್ಲಿಯೇ ಇರಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಮನವಿ ಮಾಡಿದ್ದಾರೆ. ಅಗತ್ಯ ವಸ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಿಕೊಳ್ಳಬೇಕು ಎಂದು ಕಂದಾಯ ಸಚಿವರು ವಿನಂತಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ NIVAR ಚಂಡಮಾರುತದ ಆತಂಕ, ರೆಡ್ ಅಲರ್ಟ್ ಘೋಷಣೆ
Published On - 4:44 pm, Tue, 24 November 20