ಉತ್ತರಾಖಂಡದಲ್ಲಿ ಹತ್ಯೆಯಾದ ಯುವತಿಯ ಶವ ಪತ್ತೆ; ರೆಸಾರ್ಟ್​ ನೆಲಸಮ, ಬಿಜೆಪಿ ನಾಯಕನ ಉಚ್ಛಾಟನೆ

| Updated By: ಸುಷ್ಮಾ ಚಕ್ರೆ

Updated on: Sep 24, 2022 | 3:39 PM

ರೆಸಾರ್ಟ್​ ಮಾಲೀಕನಾಗಿದ್ದ ಪುಲ್ಕಿತ್ ಆರ್ಯ ತನ್ನ ರೆಸಾರ್ಟ್​​ನಲ್ಲಿ ರಿಸೆಪ್ಷನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಹತ್ಯೆ ಮಾಡಿದ್ದ. ಇಂದು ಆ ರೆಸಾರ್ಟ್​ಗೆ ಸ್ಥಳೀಯರು ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಉತ್ತರಾಖಂಡದಲ್ಲಿ ಹತ್ಯೆಯಾದ ಯುವತಿಯ ಶವ ಪತ್ತೆ; ರೆಸಾರ್ಟ್​ ನೆಲಸಮ, ಬಿಜೆಪಿ ನಾಯಕನ ಉಚ್ಛಾಟನೆ
ಕೊಲೆಯಾದ ಉತ್ತರಾಖಂಡದ ಯುವತಿಯ ಮೃತದೇಹ ಪತ್ತೆ
Follow us on

ನವದೆಹಲಿ: ಬಿಜೆಪಿಯ ಹಿರಿಯ ಮುಖಂಡರೊಬ್ಬರ ಪುತ್ರ 19 ವರ್ಷದ ಯುವತಿಯೊಬ್ಬಳನ್ನು ಹತ್ಯೆಗೈದ (Murder) ಪ್ರಕರಣ ಉತ್ತರಾಖಂಡವನ್ನು (Uttarakhand) ಬೆಚ್ಚಿ ಬೀಳಿಸಿದೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಆರೋಪಿಯ ತಂದೆ ಮತ್ತು ಸಹೋದರನನ್ನು ಬಿಜೆಪಿ (BJP) ಪಕ್ಷದಿಂದ ಉಚ್ಚಾಟಿಸಲಾಗಿದೆ. ಆರೋಪಿ ಪುಲ್ಕಿತ್ ಆರ್ಯನ (Pulkit Arya) ಬಂಧನದ ನಂತರ ಬಿಜೆಪಿ ಮುಖಂಡ ವಿನೋದ್ ಆರ್ಯ (Vinod Arya) ಮತ್ತು ಪಕ್ಷದ ಸದಸ್ಯರಾಗಿದ್ದ ಆರೋಪಿಯ ಸಹೋದರ ಅಂಕಿತ್ ಆರ್ಯ ಇಬ್ಬರನ್ನೂ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.

ರೆಸಾರ್ಟ್​ ಮಾಲೀಕನಾಗಿದ್ದ ಪುಲ್ಕಿತ್ ಆರ್ಯ ತನ್ನ ರೆಸಾರ್ಟ್​​ನಲ್ಲಿ ರಿಸೆಪ್ಷನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಹತ್ಯೆ ಮಾಡಿದ್ದ. ಆ ಯುವತಿಯ ಮೃತದೇಹ ಕಾಲುವೆಯಲ್ಲಿ ಪತ್ತೆಯಾಗಿದ್ದ ಇದಾದ ಬಳಿಕ ಉತ್ತರಾಖಂಡದ ಆ ರೆಸಾರ್ಟ್‌ನ ಕೆಲವು ಭಾಗಗಳನ್ನು ಆಡಳಿತವು ಬುಲ್ಡೋಜರ್​ನಿಂದ ಕೆಡವಿದೆ. ಇಂದು ಆ ರೆಸಾರ್ಟ್​ಗೆ ಸ್ಥಳೀಯರು ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸ್ಥಳೀಯ ಬಿಜೆಪಿ ಶಾಸಕ ರೇಣು ಬಿಷ್ತ್ ಅವರ ಕಾರನ್ನು ಕೂಡ ಜನರು ಧ್ವಂಸಗೊಳಿಸಿದ್ದಾರೆ.

ಪುಲ್ಕಿತ್ ಆರ್ಯ ಅವರನ್ನು ಉತ್ತರಾಖಂಡ್‌ನ ಪೌರಿ ಜಿಲ್ಲೆಯ ಋಷಿಕೇಶ ಬಳಿಯ ರೆಸಾರ್ಟ್‌ನಲ್ಲಿ ಬಂಧಿಸಲಾಗಿದೆ. ಆತನ ರೆಸಾರ್ಟ್ ಮುಖ್ಯ ಪಟ್ಟಣವಾದ ಹೃಷಿಕೇಶದಿಂದ ಸುಮಾರು 10 ಕಿಮೀ ದೂರದಲ್ಲಿದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಆದೇಶದ ಮೇರೆಗೆ ಅಧಿಕಾರಿಗಳು ರಾತ್ರೋರಾತ್ರಿ ಆ ರೆಸಾರ್ಟ್ ಅನ್ನು ನೆಲಸಮಗೊಳಿಸಿದ್ದರು.

ಇದನ್ನೂ ಓದಿHassan police: ತಾನು ಹತ್ಯೆ ಮಾಡಿ, ಕುಡುಕನ ತಲೆಗೆ ಕಟ್ಟಲು ಯತ್ನಿಸಿದ್ದ ಖದೀಮ ಅರೆಸ್ಟ್; ಪೊಲೀಸರಿಗೆ ಶಹಬ್ಬಾಸ್ ಎಂದ ಹಾಸನ ಜನ

ಇಂದು ಬೆಳಗ್ಗೆ ಕಾಲುವೆಯಲ್ಲಿ ಆ ಯುವತಿಯ ಶವ ಪತ್ತೆಯಾಗಿದೆ. ಆರೋಪಿಯ ತಂದೆ ವಿನೋದ್ ಆರ್ಯ ಉತ್ತರಾಖಂಡದ ಆಡಳಿತ ಪಕ್ಷ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜೊತೆಗೆ ಗುರುತಿಸಿಕೊಂಡಿದ್ದರು. ಅಲ್ಲದೆ, ವಿನೋದ್ ಆರ್ಯ ಅವರು ಪ್ರಸ್ತುತ ಉತ್ತರಾಖಂಡ ಸರ್ಕಾರದಲ್ಲಿ ರಾಜ್ಯ ಸಚಿವ ಸ್ಥಾನವನ್ನು ಹೊಂದಿದ್ದಾರೆ. ಅವರನ್ನು ಬಿಜೆಪಿಯಿಂದ ಇಂದು ಉಚ್ಛಾಟಿಸಲಾಗಿದೆ.

ಪುಲ್ಕಿತ್ ಆರ್ಯ ಮಾತ್ರವಲ್ಲದೆ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಕೂಡ ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ರೆಸಾರ್ಟ್‌ನ ರಿಸೆಪ್ಷನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಪುಲ್ಕಿತ್ ಆರ್ಯ ಅವರೇ ಸೋಮವಾರ ಪೊಲೀಸರಿಗೆ ದೂರು ನೀಡಿದ್ದರು. ಇದು ಅಧಿಕಾರಿಗಳನ್ನು ದಾರಿತಪ್ಪಿಸುವ ಯತ್ನವಾಗಿತ್ತು ಎಂಬುದು ಆರೋಪಿಯನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ಗೊತ್ತಾಗಿತ್ತು.

ಈ ವಿಷಯದ ಬಗ್ಗೆ ಸಾಮಾಜಿಕ ಮಾಧ್ಯಮ, ಆ ಯುವತಿಯ ಕುಟುಂಬ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗಿದ್ದರಿಂದ ಪೊಲೀಸರು ಈ ವಿಷಯವನ್ನು ಹೆಚ್ಚು ಆಳವಾಗಿ ತನಿಖೆ ಮಾಡಲು ಪ್ರಾರಂಭಿಸಿದರು. ದೂರು ನೀಡಿದ್ದ ಪುಲ್ಕಿತ್ ಆರ್ಯ ಮತ್ತು ಹೋಟೆಲ್‌ನ ಸಿಬ್ಬಂದಿಯನ್ನು ಕೂಡ ವಿಚಾರಣೆ ಮಾಡಿದರು. ಆಗ ಪುಲ್ಕಿತ್ ಆರ್ಯ ಮತ್ತು ಅವನ ಸಹಚರರು ಆ ಹುಡುಗಿಯ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Murder: ತಾನೇ ದೂರು ನೀಡಿ ಸಿಕ್ಕಿಬಿದ್ದ ಉತ್ತರಾಖಂಡದ ಬಿಜೆಪಿ ನಾಯಕನ ಮಗ; 19 ವರ್ಷದ ಯುವತಿಯ ಕೊಲೆ ರಹಸ್ಯ ಬಯಲು

19 ವರ್ಷದ ಅಂಕಿತಾ ಭಂಡಾರಿ ಎಂಬ ಯುವತಿ ಪುಲ್ಕಿತ್ ಆರ್ಯ ಒಡೆತನದ ವನಂತ್ರ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದಳು. 5 ದಿನಗಳ ಹಿಂದೆ ಆಕೆ ಕಾಣೆಯಾಗಿದ್ದಳು. ಹೀಗಾಗಿ, ಆಕೆಯ ಕುಟುಂಬದವರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ನಂತರ ಪುಲ್ಕಿತ್ ಆರ್ಯ ಕೂಡ ತಮ್ಮ ರೆಸಾರ್ಟ್​ನಲ್ಲಿ ಕೆಲಸ ಮಾಡುವ ಯುವತಿ ನಾಪತ್ತೆಯಾಗಿದ್ದಾಳೆಂದು ದೂರು ದಾಖಲಿಸಿದ್ದರು. ಪೊಲೀಸರ ಅನುಮಾನ ತಮ್ಮೆಡೆಗೆ ತಿರುಗಬಾರದು ಎಂದು ಅವರು ಈ ರೀತಿ ಮಾಡಿದ್ದರು.

ಪುಲ್ಕಿತ್ ಆರ್ಯ ಅವರ ರೆಸಾರ್ಟ್​ನಲ್ಲಿರುವ ಅತಿಥಿಗಳಿಗೆ ಲೈಂಗಿಕವಾಗಿ ಸಹಕರಿಸಲು ಆತ ಅಂಕಿತಾಗೆ ಆಮಿಷವೊಡ್ಡಿದ್ದ ಎನ್ನಲಾಗಿದೆ. ಆದರೆ, ವೇಶ್ಯಾವಾಟಿಕೆಗೆ ಒಳಗಾಗಲು ಆಕೆ ನಿರಾಕರಿಸಿದ್ದಳು. ಇದೇ ವಿಚಾರವಾಗಿ ಆಕೆಯೊಂದಿಗೆ ಜಗಳವಾಡಿದ ನಂತರ ಪುಲ್ಕಿತ್ ಅಂಕಿತಾಳನ್ನು ಕೊಲೆ ಮಾಡಿದ್ದ. ಪೊಲೀಸ್ ವಿಚಾರಣೆಯ ಬಳಿಕ ಈ ವಿಚಾರ ಬಯಲಾಗಿತ್ತು. ಇಂದು ಮುಂಜಾನೆ ಆಕೆಯ ಶವ ಕಾಲುವೆಯಲ್ಲಿ ಪತ್ತೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ