Murder: ತಾನೇ ದೂರು ನೀಡಿ ಸಿಕ್ಕಿಬಿದ್ದ ಉತ್ತರಾಖಂಡದ ಬಿಜೆಪಿ ನಾಯಕನ ಮಗ; 19 ವರ್ಷದ ಯುವತಿಯ ಕೊಲೆ ರಹಸ್ಯ ಬಯಲು
ತನ್ನ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪುಲ್ಕಿತ್ ಆರ್ಯನನ್ನು ಬಂಧಿಸಲಾಗಿದೆ. ಆ ಯುವತಿ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದಳು.
ಉತ್ತರಾಖಂಡ: ಉತ್ತರಾಖಂಡದ (Uttarakhand) ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯೊಬ್ಬಳನ್ನು ಕೊಲೆ ಮಾಡಿದ ಆರೋಪದ ಮೇಲೆ ಆ ರೆಸಾರ್ಟ್ ಮಾಲೀಕ ಹಾಗೂ ಬಿಜೆಪಿ ನಾಯಕನ (BJP Leader) ಪುತ್ರನೂ ಆಗಿರುವ ಪುಲ್ಕಿತ್ ಆರ್ಯ ಎಂಬಾತನನ್ನು ಬಂಧಿಸಲಾಗಿದೆ. ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯನನ್ನು ಉತ್ತರಾಖಂಡದಲ್ಲಿ ಪೊಲೀಸ್ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ತನ್ನ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪುಲ್ಕಿತ್ ಆರ್ಯನನ್ನು ಬಂಧಿಸಲಾಗಿದೆ. ಆ ಯುವತಿ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಆ ಯುವತಿಯ ಕುಟುಂಬದವರು ದೂರನ್ನು ಸಲ್ಲಿಸಿದ ನಂತರ ಪೊಲೀಸರು ತನಿಖೆ ನಡೆಸಿದ್ದರು. ನಾಪತ್ತೆಯಾಗಿದ್ದ ಯುವತಿಯನ್ನು ಕೊಂದು, ಆಕೆಯ ಶವವನ್ನು ಚೀಲಾ ಕಾಲುವೆಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡ ನಂತರ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಹಿಮಾಚಲ ಪ್ರದೇಶ, ಉತ್ತರಾಖಂಡ, ಒಡಿಶಾದಲ್ಲಿ ಪ್ರವಾಹ; ಮೂರು ದಿನಗಳಲ್ಲಿ ಸಾವಿಗೀಡಾದವರ ಸಂಖ್ಯೆ 50
ಕೊಲೆ ಪ್ರಕರಣದ ಹಿನ್ನೆಲೆ: ಕೊಲೆ ಆರೋಪಿ ಪುಲ್ಕಿತ್ ಆರ್ಯ ಹರಿದ್ವಾರದ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ. ವಿನೋದ್ ಆರ್ಯ ಅವರಿಗೆ ರಾಜ್ಯ ಸಚಿವ ಶ್ರೇಣಿಯ ಸ್ಥಾನವನ್ನು ನೀಡಲಾಗಿದೆ. ಆದರೆ, ಅವರು ಉತ್ತರಾಖಂಡ ಸರ್ಕಾರದಲ್ಲಿ ಯಾವುದೇ ಇಲಾಖೆಯ ಜವಾಬ್ದಾರಿಯನ್ನು ಹೊಂದಿಲ್ಲ. ತನ್ನ ರೆಸಾರ್ಟ್‌ನ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಪುಲ್ಕಿತ್ ಆರ್ಯ ಅವರೇ ಸೋಮವಾರ ಪೊಲೀಸರಿಗೆ ದೂರು ನೀಡಿದ್ದರು. ಇದು ಅಧಿಕಾರಿಗಳನ್ನು ದಾರಿತಪ್ಪಿಸುವ ಯತ್ನವಾಗಿತ್ತು ಎಂಬುದು ಆರೋಪಿಯನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ಗೊತ್ತಾಗಿತ್ತು.
ಇದನ್ನೂ ಓದಿ: ಪತಿಯನ್ನ ಕೊಂದು ಆತ್ಮಹತ್ಯೆಯ ಬಣ್ಣ ಕಟ್ಟಿದ್ಲಾ ಐನಾತಿ ಪತ್ನಿ? ಮಂಡ್ಯ ಜಿಲ್ಲೆಯಲ್ಲೊಂದು ವಿಚಿತ್ರ ಕೊಲೆ ಪ್ರಕರಣ ಬೆಳಕಿಗೆ
ಈ ವಿಷಯದ ಬಗ್ಗೆ ಸಾಮಾಜಿಕ ಮಾಧ್ಯಮ, ಆ ಯುವತಿಯ ಕುಟುಂಬ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗಿದ್ದರಿಂದ ಪೊಲೀಸರು ಈ ವಿಷಯವನ್ನು ಹೆಚ್ಚು ಆಳವಾಗಿ ತನಿಖೆ ಮಾಡಲು ಪ್ರಾರಂಭಿಸಿದರು. ದೂರು ನೀಡಿದ್ದ ಪುಲ್ಕಿತ್ ಆರ್ಯ ಮತ್ತು ಹೋಟೆಲ್‌ನ ಸಿಬ್ಬಂದಿಯನ್ನು ಕೂಡ ವಿಚಾರಣೆ ಮಾಡಿದರು. ಆಗ ಪುಲ್ಕಿತ್ ಆರ್ಯ ಮತ್ತು ಅವನ ಸಹಚರರು ಆ ಹುಡುಗಿಯ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಪುಲ್ಕಿತ್ ಆರ್ಯ ಆ ಯುವತಿಯನ್ನು ವೇಶ್ಯಾವಾಟಿಕೆಗೆ ಬಲವಂತ ಮಾಡುತ್ತಿದ್ದ. ಅದಕ್ಕೆ ಆಕೆ ಒಪ್ಪದಿದ್ದುದರಿಂದ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.