ಉತ್ತರಾಖಂಡ್​​ನ ರೆಸಾರ್ಟ್​​​ನಲ್ಲಿ ಯುವತಿಯ ಹತ್ಯೆ ಪ್ರಕರಣ: ಬಿಜೆಪಿ ನಾಯಕನ ಪುತ್ರ ಬಂಧನ

ಯುವತಿಯನ್ನು ಕೊಂದು ಶವವನ್ನು ಕಾಲುವೆಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡ ನಂತರ ಪುಲ್ಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಬಂಧಿಸಲಾಗಿದೆ ಎಂದು

ಉತ್ತರಾಖಂಡ್​​ನ ರೆಸಾರ್ಟ್​​​ನಲ್ಲಿ ಯುವತಿಯ ಹತ್ಯೆ ಪ್ರಕರಣ: ಬಿಜೆಪಿ ನಾಯಕನ ಪುತ್ರ ಬಂಧನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 23, 2022 | 8:28 PM

ಉತ್ತರಾಖಂಡದ (Uttarakhand) ಪೌರಿ ಜಿಲ್ಲೆಯಲ್ಲಿ 19 ವರ್ಷದ ಯುವತಿಯನ್ನು  ಹತ್ಯೆಗೈದ ಆರೋಪದ ಮೇಲೆ ಬಿಜೆಪಿ  ನಾಯಕನ ಮಗನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಉತ್ತರಾಖಂಡದ ಬಿಜೆಪಿ ನಾಯಕ, ಮಾಜಿ ಸಚಿವ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ (Pulkit Arya) ಅವರು ರೆಸಾರ್ಟ್ ಹೊಂದಿದ್ದಾರೆ.  ಅಲ್ಲಿ ಅಂಕಿತಾ ಭಂಡಾರಿ ಎಂದು ಗುರುತಿಸಲಾದ ಹುಡುಗಿ ರೆಸಪ್ಶನಿಸ್ಟ್ ಕೆಲಸ ಮಾಡುತ್ತಿದ್ದರು. ಸೋಮವಾರದಿಂದ ಆಕೆ ನಾಪತ್ತೆಯಾಗಿದ್ದಳು. ನಾಪತ್ತೆಯಾಗಿದ್ದ ಯುವತಿಯನ್ನು ಕೊಂದು ಶವವನ್ನು ಕಾಲುವೆಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡ ನಂತರ ಪುಲ್ಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಬಂಧಿಸಲಾಗಿದೆ ಎಂದು ಪೌರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಚಂದ್ರ ಸುಯಲ್ ಪಿಟಿಐಗೆ ತಿಳಿಸಿದ್ದಾರೆ. ಮೂವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 201 (ಅಪರಾಧದ ಸಾಕ್ಷ್ಯಾಧಾರಗಳು ನಾಪತ್ತೆ) ಮತ್ತು ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಯುವತಿಯ ಶವ ಇನ್ನೂ ಪತ್ತೆಯಾಗಿಲ್ಲ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಅದನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಕುಮಾರ್ ಹೇಳಿದರು. ಸೋಮವಾರ ಬೆಳಗ್ಗೆ ಯುವತಿಯ ಪೋಷಕರು ಕೊಠಡಿಯಲ್ಲಿ ಕಾಣದ ಹಿನ್ನೆಲೆಯಲ್ಲಿ ಮಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

Published On - 8:10 pm, Fri, 23 September 22