
ನವದೆಹಲಿ, ಸೆಪ್ಟೆಂಬರ್ 03: ಭಾರತೀಯ ಸಂಪ್ರದಾಯದಲ್ಲಿ ಗೃಹಿಣಿಯೊಬ್ಬಳು ದಿನವಿಡೀ ಮಾಡುವ ಮನೆಗೆಲಸ, ಅಡುಗೆ ಮತ್ತು ಕುಟುಂಬದ ಆರೈಕೆಯನ್ನು ಕೇವಲ ಆಕೆಯ ಕರ್ತವ್ಯ ಎಂದು ಪರಿಗಣಿಸುವುದು ಸಾಮಾನ್ಯ. ಆದರೆ, ಸರ್ಕಾರಿ ಅಧಿಕಾರಿಯಾಗಿರುವ ಪತಿಯೊಬ್ಬ ತನ್ನ ಗೃಹಿಣಿ ಪತ್ನಿಯ ಮನೆಗೆಲಸವನ್ನು ಗುರುತಿಸಿ ಪ್ರತಿ ತಿಂಗಳು ಆಕೆಗೆ ಪ್ರತ್ಯೇಕವಾಗಿ ನಿರ್ದಿಷ್ಟ ಮೊತ್ತದ ‘ಸಂಬಳ’ ನೀಡುತ್ತಿರುವ ವಿಚಾರ ಸಾಮಾಜಿಕ ಜಾಲತಾಣ ‘ರೆಡ್ಡಿಟ್’ನಲ್ಲಿ ಭಾರಿ ಸಂಚಲನ ಮತ್ತು ಮೆಚ್ಚುಗೆಗೆ ಕಾರಣವಾಗಿದೆ.
ರೆಡ್ಡಿಟ್ ಬಳಕೆದಾರರೊಬ್ಬರು ತಮ್ಮ ಹಿರಿಯ ಸಹೋದರ ಕುಟುಂಬದ ಆರ್ಥಿಕತೆಯನ್ನು ನಿಭಾಯಿಸುವ ಈ ವಿಶಿಷ್ಟ ವಿಧಾನವನ್ನು ಪೋಸ್ಟ್ ಮಾಡಿದ ಬೆನ್ನಲ್ಲೇ, ಮದುವೆಯಲ್ಲಿ ಆರ್ಥಿಕ ಸ್ವಾವಲಂಬನೆ ಮತ್ತು ಸಮಾನ ಪಾಲುದಾರಿಕೆಯ ಕುರಿತು ಆರೋಗ್ಯಕರ ಚರ್ಚೆ ಮುನ್ನೆಲೆಗೆ ಬಂದಿದೆ.
ಶ್ರಮಕ್ಕೆ ಶೂನ್ಯ ಮೌಲ್ಯ ಏಕೆ?: ಮನೆಯ ಅಡುಗೆ, ಸ್ವಚ್ಛತೆ ಮತ್ತು ನಿರ್ವಹಣೆಗೆ ಹೊರಗಿನಿಂದ ಅಡುಗೆಯವರು ಅಥವಾ ಮನೆಗೆಲಸದವರನ್ನು ನೇಮಿಸಿಕೊಂಡರೆ ಮಾರುಕಟ್ಟೆ ದರದಲ್ಲಿ ಸಂಬಳ ನೀಡಬೇಕಾಗುತ್ತದೆ. ಹಾಗಿರುವಾಗ ಸಂಗಾತಿಯೊಬ್ಬರು ಅದನ್ನು ಪ್ರೀತಿಯಿಂದ ನಿರ್ವಹಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಆ ಶ್ರಮದ ಮೌಲ್ಯ ಶೂನ್ಯ ಆಗಲು ಹೇಗೆ ಸಾಧ್ಯ? ಎಂಬುದು ಆ ಪತಿಯ ಗಟ್ಟಿ ತರ್ಕ.
ಸಂಪೂರ್ಣ ಆರ್ಥಿಕ ಸ್ವಾತಂತ್ರ್ಯ: ದಿನಸಿ, ಕರೆಂಟ್ ಬಿಲ್, ಬಾಡಿಗೆ ಸೇರಿದಂತೆ ಮನೆಯ ಸಂಪೂರ್ಣ ಖರ್ಚುಗಳನ್ನು ಪತಿಯೇ ಪ್ರತ್ಯೇಕವಾಗಿ ಭರಿಸುತ್ತಾನೆ. ಹೆಂಡತಿಗೆ ನೀಡುವ ಈ ಮಾಸಿಕ ಮೊತ್ತವು ಆಕೆಯ ವೈಯಕ್ತಿಕ ಖಾತೆಗೆ ಜಮೆಯಾಗಲಿದ್ದು, ಆಕೆ ಅದನ್ನು ಉಳಿತಾಯ ಮಾಡಬಹುದು, ಸ್ವಂತಕ್ಕೆ ಖರ್ಚು ಮಾಡಬಹುದು ಅಥವಾ ಯಾರ ಅನುಮತಿಯೂ ಇಲ್ಲದೆ ತನ್ನ ತವರು ಮನೆಯ ಪೋಷಕರಿಗೆ ನೆರವಾಗಲು ಬಳಸಬಹುದು.
ಮತ್ತಷ್ಟು ಓದಿ: ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ವೇತನ ಹಿಂಬಾಕಿ ಪಾವತಿಗೆ 450 ಕೋಟಿ ರೂ. ಬಿಡುಗಡೆ!
ಕೈಚಾಚುವ ಅನಿವಾರ್ಯತೆಗೆ ಮುಕ್ತಿ: ಭಾರತೀಯ ಕುಟುಂಬಗಳಲ್ಲಿ ಹೆಂಡತಿ ಸಣ್ಣಪುಟ್ಟ ಖರ್ಚಿಗೂ ಗಂಡನ ಮುಂದೆ ಕೈಚಾಚುವ ಪದ್ಧತಿಗೆ ಇದು ಮುಕ್ತಿ ನೀಡಿದ್ದು, ಆಕೆಗೆ ಗೌರವಯುತ ಸ್ವಾಯತ್ತತೆಯನ್ನು ತಂದುಕೊಟ್ಟಿದೆ.
ಮಹಿಳಾ ಸಬಲೀಕರಣಕ್ಕೆ ಮಾದರಿ: ಹೆಚ್ಚಿನ ನೆಟ್ಟಿಗರು ಈ ಉಪಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದಿನದ 24 ಗಂಟೆಯೂ ರಜೆಯಿಲ್ಲದೆ ದುಡಿಯುವ ಗೃಹಿಣಿಯರಿಗೆ ಇದು ಆತ್ಮವಿಶ್ವಾಸ ಮತ್ತು ಆರ್ಥಿಕ ಭದ್ರತೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
My brother pays his housewife wife a monthly “salary” for household work. What do you think about this?
by
u/bait_rage in
TwentiesIndia
ವಹಿವಾಟಿನಂತಾಗಬಾರದು ಎಂಬ ಎಚ್ಚರಿಕೆ: ಕೆಲವರು, ಇದು ದಾಂಪತ್ಯವನ್ನು ಕೇವಲ ಹಣಕಾಸಿನ ವಹಿವಾಟಿನಂತೆ ಬಿಂಬಿಸಬಾರದು. ಬದಲಿಗೆ ಪತಿ-ಪತ್ನಿ ಜಂಟಿ ಖಾತೆ ಹೊಂದುವುದು ಅಥವಾ ಸಂಪೂರ್ಣ ಆದಾಯವನ್ನು ಪತ್ನಿಯ ನಿರ್ವಹಣೆಗೆ ಬಿಡುವುದು ಇನ್ನಷ್ಟು ನೈಜ ಸಮಾನತೆ ಎಂದು ವಾದಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶ: ಭಾರತದ ಸುಪ್ರೀಂ ಕೋರ್ಟ್ ಈ ಹಿಂದೆ ಹಲವು ಅಪಘಾತ ಪರಿಹಾರ ಪ್ರಕರಣಗಳಲ್ಲಿ, ಗೃಹಿಣಿಯೊಬ್ಬಳು ಮನೆಯಲ್ಲಿ ನೀಡುವ ಸೇವೆ ಮತ್ತು ಶ್ರಮವು ಕಚೇರಿಯಲ್ಲಿ ದುಡಿಯುವ ವ್ಯಕ್ತಿಯ ಆದಾಯಕ್ಕಿಂತ ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ ಎಂದು ಐತಿಹಾಸಿಕ ತೀರ್ಪು ನೀಡಿ ಆಕೆಯ ಶ್ರಮವನ್ನು ಆರ್ಥಿಕವಾಗಿ ಗುರುತಿಸಿತ್ತು.
ಸರ್ಕಾರಗಳ ಗೃಹಿಣಿ ಭತ್ಯೆ ಯೋಜನೆಗಳು: ಕರ್ನಾಟಕ ಸರ್ಕಾರದ ‘ಗೃಹಲಕ್ಷ್ಮಿ’ ಹಾಗೂ ತಮಿಳುನಾಡಿನ ‘ಕಲೈಂಜರ್ ಮಗಲಿರ್ ಉರಿಮೈ ತೊಗೈ’ ಮುಂತಾದ ಯೋಜನೆಗಳು ಗೃಹಿಣಿಯರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೆ ತರಲಾದ ಪ್ರಮುಖ ಹೆಜ್ಜೆಗಳಾಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ