ಅಂತರ್ಜಾತಿ ವಿವಾಹ: ಹೈದರಾಬಾದ್‌ನಲ್ಲಿ 22ರ ಹರೆಯದ ಯುವಕನ ಕಗ್ಗೊಲೆ
ನೀರಜ್ ಕುಮಾರ್ ಪನ್ವಾರ್, ಅಪ್ಪ ರಾಜೇಂದರ್ ಪನ್ವಾರ್ ತಮ್ಮ ಅಂಗಡಿಯನ್ನು ಮುಚ್ಚಿ ಮನೆಗೆ ಮರಳುತ್ತಿದ್ದ ಹೊತ್ತಲ್ಲಿ ದುಷ್ಕರ್ಮಿಗಳು ಹಿಂದಿನಿಂದ ಬಂದು ಗ್ರಾನೈಟ್ ಕಲ್ಲಿನಿಂದ ಹೊಡೆದು ಕುಡುಗೋಲಿನಿಂದ ಇರಿದಿದ್ದಾರೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ (Hyderabad) ಅಂತರ್ಜಾತಿ ಪ್ರೇಮ (intercaste marriage) ವಿವಾಹವಾಗಿದ್ದಕ್ಕೆ 22 ವರ್ಷದ ಯುವಕನನ್ನು ಐದು ಜನರು ಇರಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಘಟನೆ ಶುಕ್ರವಾರ, ಮೇ 20 ರಂದು ನಡೆದಿದೆ. ಅಂದು ರಾತ್ರಿ ಶಾಹಿನಾಯತ್‌ಗುಂಜ್ (Shahinayathgunj) ಪೊಲೀಸ್ ಠಾಣಾ ವ್ಯಾಪ್ತಿಯ ಬೇಗಂ ಬಜಾರ್ ಪ್ರದೇಶದ ಜನನಿಬಿಡ ಮೀನು ಮಾರುಕಟ್ಟೆ ಬಳಿ ನೀರಜ್ ಕುಮಾರ್ ಪನ್ವಾರ್ ಎಂಬ ಯುವಕನನ್ನು ಆತನ ಪತ್ನಿಯ ಸಂಬಂಧಿಕರು ಎಂದು ಹೇಳಲಾದ ಐವರು ವ್ಯಕ್ತಿಗಳು ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ನೀರಜ್ ಕುಮಾರ್ ಪನ್ವಾರ್, ಅಪ್ಪ ರಾಜೇಂದರ್ ಪನ್ವಾರ್ ತಮ್ಮ ಅಂಗಡಿಯನ್ನು ಮುಚ್ಚಿ ಮನೆಗೆ ಮರಳುತ್ತಿದ್ದ ಹೊತ್ತಲ್ಲಿ ದುಷ್ಕರ್ಮಿಗಳು ಹಿಂದಿನಿಂದ ಬಂದು ಗ್ರಾನೈಟ್ ಕಲ್ಲಿನಿಂದ ಹೊಡೆದು ಕುಡುಗೋಲಿನಿಂದ ಇರಿದಿದ್ದಾರೆ. ಬೇಗಂ ಬಜಾರ್‌ನ ಕೋಲ್ಸವಾಡಿ ನಿವಾಸಿ ಪನ್ವಾರ್ ಕಡಲೆ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದು, ಸುಮಾರು ಒಂದೂವರೆ ವರ್ಷಗಳ ಹಿಂದೆ ಅದೇ ಪ್ರದೇಶದ ಆದರೆ ಬೇರೆ ಜಾತಿಯ ಸಂಜನಾ (20) ಅವರನ್ನು ವಿವಾಹವಾದರು. ಇವರಿಗೆ ಒಂದೂವರೆ ತಿಂಗಳಿನ ಮಗುವಿದೆ. ಸಂಜನಾ ಅವರ ಕುಟುಂಬದ ಸದಸ್ಯರು ಅವರನ್ನು ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರು ತಿಂಗಳಿನಿಂದ ಕೊಲೆಗೆ ಸಂಚು ರೂಪಿಸುತ್ತಿದ್ದರು. ನೀರಜ್ ಅವರು ಅಂಗಡಿಯಿಂದ ಮನೆಗೆ ಬರುವ ಹೊತ್ತು ಪತ್ತೆಹಚ್ಚಲು ಒಂದು ವಾರದವರೆಗೆ ನಿಗಾ ಇರಿಸಿದ್ದರು. ಎರಡು ದ್ವಿಚಕ್ರವಾಹನಗಳಲ್ಲಿ ಬಂದ ದುಷ್ಕರ್ಮಿಗಳು ಘಟನೆಯ ನಂತರ ಪ್ರದೇಶದಿಂದ ಪರಾರಿಯಾಗಿದ್ದಾರೆ. ನೀರಜ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಘಟನೆ ಬಳಿಕ ರಸ್ತೆಯಲ್ಲಿ ಜಮಾಯಿಸಿದ ವ್ಯಾಪಾರಿಗಳು ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಹಲವು ಶಂಕಿತರನ್ನು ಗುರುತಿಸಿದ್ದಾರೆ. ಹೈದರಾಬಾದ್‌ನಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಕರ್ನಾಟಕದ ಗುರುಮಿಟ್‌ಕಲ್‌ನಲ್ಲಿ ಅವರು ಶನಿವಾರ ನಾಲ್ವರು ಶಂಕಿತರನ್ನು ವಿವಿಧ ಸುಳಿವುಗಳನ್ನಾಧರಿಸಿ ಬಂಧಿಸಿದ್ದಾರೆ. ಸಂತ್ರಸ್ತೆಯ ಸಂಬಂಧಿಕರ ಪ್ರಕಾರ ತನಗೆ ಜೀವ ಬೆದರಿಕೆ ಹಾಕುತ್ತಿರುವ ಪತ್ನಿಯ ಕುಟುಂಬದಿಂದ ರಕ್ಷಣೆ ನೀಡುವಂತೆ ಆತ ಒಂದು ವರ್ಷದ ಹಿಂದೆ ಪೊಲೀಸರನ್ನು ಕೋರಿದ್ದರು.
ಒಂದು ತಿಂಗಳೊಳಗೆ ಹೈದರಾಬಾದ್‌ನಲ್ಲಿ ನಡೆದ ಎರಡನೇ ಮರ್ಯಾದಾ ಹತ್ಯೆ ಇದಾಗಿದೆ. ಮೇ 4ರಂದು ಸರೂರ್‌ನಗರದಲ್ಲಿ ಅಂತರ್‌ಧರ್ಮೀಯ ವಿವಾಹದ ವಿಚಾರವಾಗಿ 25 ವರ್ಷದ ಯುವಕನನ್ನು ಕಡಿದು ಹತ್ಯೆ ಮಾಡಲಾಗಿತ್ತು. ಬಿಲ್ಲಾಪುರಂ ನಾಗರಾಜು ಎಂಬಾತನನ್ನು ಆಕೆಯ ಸಹೋದರ ಹಾಗೂ ಮತ್ತೊಬ್ಬ ಸಂಬಂಧಿ ಸೇರಿ ಪತ್ನಿಯ ಎದುರೇ ಸಾರ್ವಜನಿಕವಾಗಿ ಕೊಲೆ ಮಾಡಿದ್ದರು. ಈ ವರ್ಷದ ಆರಂಭದಲ್ಲಿ ಅಶ್ರಿನ್ ಸುಲ್ತಾನಾ ಅವರೊಂದಿಗೆ ನಾಗರಾಜು ಪ್ರೇಮ ವಿವಾಹ ನಡೆದಿತ್ತು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ