ನಾನೂ ಹುತಾತ್ಮರ ಮಗ, ಈ ಅವಮಾನ ಸಹಿಸುವುದಿಲ್ಲ; ಜಲಿಯನ್ ವಾಲಾಬಾಗ್ ಸ್ಮಾರಕದ ನವೀಕರಣಕ್ಕೆ ರಾಹುಲ್ ಗಾಂಧಿ ಕಿಡಿ

Jallianwala Bagh Memorial Revamp | ನಾನೂ ಕೂಡ ಹುತಾತ್ಮರ ಮಗ. ಹುತಾತ್ಮರಿಗೆ ಆಗಿರುವ ಈ ಅವಮಾನವನ್ನು ನಾನೆಂದೂ ಸಹಿಸುವುದಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ನಾನೂ ಹುತಾತ್ಮರ ಮಗ, ಈ ಅವಮಾನ ಸಹಿಸುವುದಿಲ್ಲ; ಜಲಿಯನ್ ವಾಲಾಬಾಗ್ ಸ್ಮಾರಕದ ನವೀಕರಣಕ್ಕೆ ರಾಹುಲ್ ಗಾಂಧಿ ಕಿಡಿ
ರಾಹುಲ್ ಗಾಂಧಿ

ನವದೆಹಲಿ: ಪಂಜಾಬ್​ನಲ್ಲಿನ ಜಲಿಯನ್ ವಾಲಾಬಾಗ್ ನವೀಕೃತ ಸ್ಮಾರಕವನ್ನು ಕೆಲವು ದಿನಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದರು. ಈ ವೇಳೆ, ಇತಿಹಾಸವನ್ನು ರಕ್ಷಿಸುವುದು ನಮ್ಮ ದೇಶದ ಕರ್ತವ್ಯ. ಹಿಂದಿನ ಘಟನೆಗಳು ನಮಗೆ ಅನೇಕ ಪಾಠಗಳನ್ನು ಕಲಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ನವೀಕರಣಗೊಂಡ ಜಲಿಯನ್ ವಾಲಾಬಾಗ್ ಸ್ಮಾರಕದ ಬಗ್ಗೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪ್ರತಿಕ್ರಿಯೆ ನೀಡಿದ್ದು, 102 ವರ್ಷಗಳ ಹಿಂದೆ ಈ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ 1 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಸಾವಿರಾರು ಮಹಿಳೆಯರು ಮತ್ತು ಪುರುಷರು ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವಾಗ ಬ್ರಿಟಿಷರು ಗುಂಡಿನ ದಾಳಿ ನಡೆಸಿದ್ದರು. ಜಲಿಯನ್ ವಾಲಾಬಾಗ್ ಸ್ಮಾರಕವನ್ನು ನವೀಕರಣಗೊಳಿಸಿದ್ದು ಹುತಾತ್ಮರಿಗೆ ಮಾಡಿದ ಅವಮಾನ. ನಾನೂ ಕೂಡ ಹುತಾತ್ಮರ ಮಗ. ಹುತಾತ್ಮರಿಗೆ ಆಗಿರುವ ಈ ಅವಮಾನವನ್ನು ನಾನೆಂದೂ ಸಹಿಸುವುದಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಟ್ವೀಟ್‌ ಮಾಡಿರುವ ರಾಹುಲ್ ಗಾಂಧಿ, ಹುತಾತ್ಮ ಎಂಬುದರ ಅರ್ಥ ತಿಳಿಯದ ವ್ಯಕ್ತಿ ಮಾತ್ರ ಹೀಗೆ ಹುತಾತ್ಮರಿಗೆ ಅವಮಾನ ಮಾಡಲು ಸಾಧ್ಯ. ನಾನು ಕೂಡ ಹುತಾತ್ಮರ ಮಗ. ಹುತಾತ್ಮರಿಗೆ ಮಾಡಿರುವ ಅವಮಾನವನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇದರ ವಿರುದ್ಧ ನಾವೆಲ್ಲರೂ ಹೋರಾಡುತ್ತೇವೆ ಎಂದಿದ್ದಾರೆ.

ನವೀಕೃತಗೊಂಡ ಜಲಿಯನ್​ ವಾಲಾಬಾಗ್​ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದ್ದರು. 1919ರ ಏಪ್ರಿಲ್ 13ರಂದು ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದವರ ಸ್ಮಾರಕ ಇದಾಗಿದೆ. ಜಲಿಯನ್ ವಾಲಾಬಾಗ್ ಸ್ಮಾರಕವನ್ನು ಮೊದಲ ಬಾರಿಗೆ ಏಪ್ರಿಲ್ 13, 1961 ರಲ್ಲಿ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಉದ್ಘಾಟಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರಾದ ಸೈಫುದ್ದೀನ್ ಕಿಚ್ಲು ಮತ್ತು ಸತ್ಯಪಾಲ್ ಅವರ ಬಂಧನವನ್ನು ವಿರೋಧಿಸಿ ನಡೆಸಿದ ಶಾಂತಿಯುತ ಪ್ರತಿಭಟನೆಯ ವೇಳೆ ಸಾವಿರಾರು ಜನರ ಮೇಲೆ ಗುಂಡಿನ ದಾಳಿ ನಡೆಸಿ, ಕೊಲ್ಲಲಾಗಿತ್ತು.


ಬ್ರಿಟಿಷರ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಮಕ್ಕಳು, ವಯಸ್ಕರು ಬಾವಿಗೆ ಹಾರಿದ್ದರು. ಆ ಬಾವಿಯನ್ನು ಗ್ಲಾಸ್​ಶೀಲ್ಡ್ ಹಾಕಿ ಪ್ರದರ್ಶನಕ್ಕೆ ಇಡಲಾಗಿದೆ. ಹತ್ಯಾಕಾಂಡದಲ್ಲಿ ಹುತಾತ್ಮರಾದವರ ಹಲವು ಪ್ರತಿಮೆಗಳನ್ನು ಪ್ರವಾಸಿಗರು ಭೇಟಿ ನೀಡುವ ಸ್ಥಳದಲ್ಲಿ ನಿರ್ಮಿಸಲಾಗಿದೆ. ಹಾಗೇ, ಗುರುನಾನಕ್ ದೇವ್, ಸಿಖ್ ಹೋರಾಟಗಾರ ಬಂದಾ ಸಿಂಗ್ ಬಹದ್ದೂರ್ ಮತ್ತು ಮಹಾರಾಜ ರಂಜೀತ್ ಸಿಂಗ್ ಪ್ರತಿಮೆಗಳು ಕೂಡ ಅಲ್ಲಿದೆ.

ಇದನ್ನೂ ಓದಿ:

(I am A Martyr’s Son: Rahul Gandhi slams BJP Governments Jallianwala Bagh Memorial Revamp)

Read Full Article

Click on your DTH Provider to Add TV9 Kannada