ದೀಪ್ ಸಿಧು ಮೃತಪಟ್ಟ ದಿನ ಅಪಘಾತಕ್ಕೀಡಾದ ಕಾರಿನಲ್ಲಿದ್ದಿದ್ದು ಪ್ರೇಯಸಿ; ಲವ್ ಯೂ ಮೈ ಜಾನ್ ಎಂದು ಭಾವನಾತ್ಮಕ ಪೋಸ್ಟ್ ಹಾಕಿದ ರೀನಾ ರೈ
ನಟ ದೀಪ್ ಸಿಧು ಮತ್ತು ರೀನಾ ರೈ ಒಬ್ಬರಿಗೊಬ್ಬರು ಕಳೆದ ಕೆಲವು ವರ್ಷಗಳಿಂದಲೂ ಪ್ರೀತಿಸುತ್ತಿದ್ದರು ಮತ್ತು ಒಟ್ಟಿಗೇ ಇದ್ದರು. ಕಳೆದ ಮೇ ತಿಂಗಳಲ್ಲಿ ರೀನಾರನ್ನು ಉದ್ದೇಶಿಸಿ ದೀಪ್ ಸಿಧು ಕೂಡ ಒಂದು ಪೋಸ್ಟ್ ಹಾಕಿದ್ದರು.
ಈಗೆರಡು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪಂಜಾಬಿ ನಟ, ರೈತ ಪರ ಹೋರಾಟಗಾರನಾಗಿದ್ದ ದೀಪ್ ಸಿಧು (Deep Sidhu) ಪ್ರೇಯಸಿ ರೀನಾ ರೈ ಇಂದು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ದೀಪ್ ಸಿಧುನನ್ನು ಕಳೆದುಕೊಂಡು ನಾನೀಗ ಜೀವಂತ ಶವದಂತೆ ಆಗಿದ್ದೇನೆ. ನನ್ನ ದೇಹದಲ್ಲಿ ಜೀವವಿದ್ದರೂ, ಆಂತರ್ಯದಲ್ಲಿ ಸತ್ತು ಹೋಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಂದಹಾಗೇ, ಅಂದು ಕಾರು ಅಪಘಾತಕ್ಕೀಡಾದ ಸಂದರ್ಭದಲ್ಲಿ ರೀನಾ ಕೂಡ ಅದೇ ಕಾರಿನಲ್ಲಿ ಇದ್ದರು. ಏರ್ಬ್ಯಾಗ್ ಇದ್ದುದರಿಂದ ಅವರು ಬದುಕುಳಿದಿದ್ದಾರೆ.
ದೀಪ್ ಸಿಧು ಪಂಜಾಬ್ ನಟನಾಗಿ ಹೆಸರು ಮಾಡಿದ್ದರೂ ಕೂಡ ಅವರು ರಾಷ್ಟ್ರದ ಗಮನಸೆಳೆದಿದ್ದು, ಕಳೆದ ಗಣರಾಜ್ಯೋತ್ಸವದ ಸಂದರ್ಭದಲ್ಲಿ. ಅಂದರೆ 2021ರ ಜನವರಿ 26ರಂದು ದೆಹಲಿ ಕೆಂಪುಕೋಟೆ ಬಳಿ ನಡೆದ ಹಿಂಸಾಚಾರ, ಕೆಂಪುಕೋಟೆ ಮೇಲೆ ಸಿಖ್ ಧ್ವಜವನ್ನು ಹಾರಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಇವರು ಜೈಲಿಗೆ ಹೋಗಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಪರ ನಿಂತಿದ್ದ ದೀಪ್ ಸಿಧು, ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ದೀಪ್ ಸಿಧು ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ, ರೈತ ಮುಖಂಡ ರಾಕೇಶ್ ಟಿಕಾಯಿತ್ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.
ಫೆ.15ರಂದು ದೀಪ್ ಸಿಧು ತಮ್ಮ ಸ್ನೇಹಿತೆ, ನಟಿ ರೀನಾ ರೈ ಜತೆ ದೆಹಲಿಯಿಂದ ಭಟಿಂಡಾಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಕುಂಡ್ಲಿ-ಮಾನೆಸರ್-ಪಲ್ವಾಲ್ ಎಕ್ಸ್ಪ್ರೆಸ್ ವೇನಲ್ಲಿ ಪಿಪ್ಲಿ ಟೋಲ್ ಸಮೀಪ ನಿಂತಿದ್ದ ಲಾರಿಗೆ ಇವರ ಕಾರು ಡಿಕ್ಕಿಯಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ದೀಪ್ ಸಿಧುರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿದ್ದರು. ದೀಪ್ ನಿಧನದ ಎರಡು ದಿನಗಳ ಬಳಿಕ ರೀನಾ ಇನ್ಸ್ಟಾಗ್ರಾಂನಲ್ಲಿ ತಮ್ಮಿಬ್ಬರ ಫೋಟೋ ಪೋಸ್ಟ್ ಮಾಡಿಕೊಂಡು, ಭಾವನಾತ್ಮಕ ಸಂದೇಶ ಬರೆದುಕೊಂಡಿದ್ದಾರೆ.
‘ನನಗೆ ಈ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಉಸಿರಾಡುತ್ತಿರಬಹುದು ಆದರೆ ನನ್ನ ಮನಸು ಸತ್ತುಹೋಗಿದೆ. ಜೀವನದಲ್ಲಿ ನಿನ್ನನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ ಎಂದು ನನಗೆ ಪ್ರಾಮಿಸ್ ಮಾಡಿದ್ದೆ. ಈ ನಿನ್ನ ಆತ್ಮ ಬಂಧುವಿಗಾಗಿ ವಾಪಸ್ ಬಾ. ಐ ಲವ್ ಯೂ.. ನೀನು ನನ್ನ ಆತ್ಮವಾಗಿದ್ದೆ, ನೀನೇ ನನ್ನ ಹೃದಯದ ಬಡಿತವೂ ಆಗಿದ್ದೆ. ನಾನು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾಗ, ನೀನು ನನ್ನ ಬಳಿ ಬಂದು, ಐ ಲವ್ ಯೂ ಮೈ ಜಾನ್ ಎಂದು ಪಿಸುಗುಟ್ಟಿದ್ದು ನನಗೆ ಕೇಳಿದೆ. ನಾವಿಬ್ಬರೂ ಸೇರಿ ಭವಿಷ್ಯದ ಬಗ್ಗೆ ಯೋಜನೆ ಹಾಕಿಕೊಂಡಿದ್ದೆವಲ್ಲ, ಆದರೆ ನೀನು ಅರ್ಧದಲ್ಲೇ ಹೋಗಿಬಿಟ್ಟೆ. ಆತ್ಮ ಬಂಧುಗಳು ಎಂದಿಗೂ ಒಬ್ಬರನ್ನೊಬ್ಬರು ತೊರೆಯುವುದಿಲ್ಲ. ಆ ಇನ್ನೊಂದು ಜಗತ್ತಿನಲ್ಲಿ ನಾನು ನಿನ್ನನ್ನು ಮತ್ತೆ ಭೇಟಿಯಾಗುತ್ತೇನೆ’ ಎಂದು ರೀನಾ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
View this post on Instagram
ನಟ ದೀಪ್ ಸಿಧು ಮತ್ತು ರೀನಾ ರೈ ಒಬ್ಬರಿಗೊಬ್ಬರು ಕಳೆದ ಕೆಲವು ವರ್ಷಗಳಿಂದಲೂ ಪ್ರೀತಿಸುತ್ತಿದ್ದರು ಮತ್ತು ಒಟ್ಟಿಗೇ ಇದ್ದರು. ಕಳೆದ ಮೇ ತಿಂಗಳಲ್ಲಿ ರೀನಾರನ್ನು ಉದ್ದೇಶಿಸಿ ದೀಪ್ ಸಿಧು ಕೂಡ ಒಂದು ಪೋಸ್ಟ್ ಹಾಕಿದ್ದರು. ಆಗ ಅವರು ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದಲ್ಲಿ ಸಿಲುಕಿ, ಅನೇಕಾನಕರಿಂದ ಟೀಕೆಗೆ ಒಳಗಾಗಿದ್ದರು. ಅವರೇ ಆರೋಪಿಯೆಂದಾಗಿತ್ತು. ಆಗ ರೀನಾ ಜತೆಗೆ ನಿಂತಿದ್ದ ಫೋಟೋ ಪೋಸ್ಟ್ ಮಾಡಿಕೊಂಡಿದ್ದ ದೀಪ್ ಸಿಧು, ಇಡೀ ಜಗತ್ತು ನನಗೆ ವಿರುದ್ಧವಾಗಿ ನಿಂತಾಗಲೂ ನೀನು ನನಗೆ ಬೆಂಬಲವಾಗಿ ನಿಂತೆ. ನೀನು ನನ್ನ ರಕ್ಷಣೆ ಮಾಡಿದೆ. ನನ್ನ ಗೌರವವನ್ನು ಎತ್ತಿ ಹಿಡಿದೆ. ನನಗೆ ಬಲ ತುಂಬಿದೆ..ನನಗಾಗಿ ಪ್ರಾರ್ಥಿಸಿದೆ. ಅದೆಲ್ಲಕ್ಕೂ ಮಿಗಿಲಾಗಿ ನೀನು ನನಗಾಗಿ ನಿನ್ನ ಜೀವನವನ್ನೇ ಅರ್ಪಿಸಿದೆ. ಇದು ನನ್ನ ಹೃದಯ ಮತ್ತು ಮನಸನ್ನು ತುಂಬ ಸ್ಪರ್ಶಿಸಿತು ನಿನ್ನಂಥ ಸಂಗಾತಿಯನ್ನು ಪಡೆದದ್ದು ನನಗೆ ದೇವರು ಕೊಟ್ಟ ಆಶೀರ್ವಾದ ಎಂದು ಹೇಳಿದ್ದರು. ದೀಪ್ ಸಿಧು ಅವರ ಮೊದಲ ಪಂಜಾಬಿ ಸಿನಿಮಾ ರಾಮ್ತಾ ಜೋಗಿ 2015ರಲ್ಲಿ ತೆರೆಕಂಡಿತ್ತು. ಹಾಗೇ, ಎರಡನೇ ಸಿನಿಮಾ ಜೋರಾ ದಾಸ್ ನಂಬ್ರಿಯಾ 2018ರಲ್ಲಿ ತೆರೆಕಂಡಿದೆ.
ಇದನ್ನೂ ಓದಿ: ಯೋಗಿಯೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಂಡ ಆರೋಪ: ಎನ್ಎಸ್ಇ ಮಾಜಿ ಎಂಡಿ ಮನೆಗೆ ಐಟಿ ದಾಳಿ
Published On - 1:36 pm, Thu, 17 February 22