ನಾನು ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆಯಲ್ಲ. ಪೂರ್ಣಾವಧಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಸೋನಿಯಾಗಾಂಧಿ (Sonia Gandhi) ಇಂದು ಹೇಳಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ (CWC Meeting)ಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿರುವ ಪ್ರತಿಯೊಬ್ಬರಿಗೂ ಒಂದು ಸ್ಪಷ್ಟತೆಯನ್ನು ನೀಡಲು ಈ ಸಭೆ ಕರೆಯಲಾಗಿದೆ. ಪಕ್ಷದ ಪ್ರತಿ ಸದಸ್ಯನೂ ಈಗ ಕಾಂಗ್ರೆಸ್ನ ಪುನರುಜ್ಜೀವನವನ್ನು ಬಯಸುತ್ತಿದ್ದಾರೆ. ಹಾಗೇ ಕಾಂಗ್ರೆಸ್ ಮತ್ತೆ ಪುಟಿದೇಳಬೇಕೆಂದರೆ ನಮ್ಮಲ್ಲಿ ಏಕತೆ ಇರಬೇಕು. ಪಕ್ಷದ ಹಿತಾಸಕ್ತಿಯನ್ನು ಪ್ರಧಾನವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಸೋನಿಯಾ ಗಾಂಧಿ ಜಿ23 ನಾಯಕರಿಗೆ ಒಂದು ಸ್ಪಷ್ಟ ಸಂದೇಶವನ್ನು ನೀಡಿದರು. ನಾನೀಗ ಕಾಂಗ್ರೆಸ್ನ ಪೂರ್ಣಾವಧಿ ಅಧ್ಯಕ್ಷೆಯಂತೆಯೇ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನಾಯಕರು ಯಾರೇ ಇರಲಿ, ಯಾವುದೇ ವಿಷಯದ ಬಗ್ಗೆ ಮಾಧ್ಯಮಗಳ ಮೂಲಕ ಮಾತನಾಡಿ, ಅದನ್ನು ನನಗೆ ತಲುಪಿಸುವ ಅಗತ್ಯವಿಲ್ಲ. ಏನೇ ಇದ್ದರೂ ನನ್ನ ಬಳಿ ನೇರವಾಗಿ ಮಾತನಾಡಿ. ನನ್ನ ಬಳಿ ಯಾವುದೇ ವಿಷಯ ಚರ್ಚೆ ಮಾಡಲು ನಿಮಗೆಲ್ಲ ಸ್ವಾತಂತ್ರ್ಯವಿದೆ. ನಾವು ನಂತರ ಅದರ ಬಗ್ಗೆ ಪ್ರಾಮಾಣಿಕವಾಗಿ ಚರ್ಚೆ ನಡೆಸೋಣ ಎಂದು ಕರೆ ನೀಡಿದರು.
ಸೋನಿಯಾ ಗಾಂಧಿ ತಾನು ಕಾಂಗ್ರೆಸ್ನ ಪೂರ್ಣಾವಧಿ ಸದಸ್ಯೆ ಮತ್ತು ಯಾವುದೇ ವಿಷಯವನ್ನೂ ನೇರವಾಗಿ, ಮುಕ್ತವಾಗಿ ನನ್ನ ಬಳಿ ಮಾತನಾಡಿ ಎಂದು ಹೇಳಲು ಕಾರಣವಿದೆ. ಜಿ 23 ನಾಯಕರಲ್ಲಿ ಒಬ್ಬರಾದ ಕಪಿಲ್ ಸಿಬಲ್ ಕಳೆದ ತಿಂಗಳು ಸೋನಿಯಾ ಗಾಂಧಿಯವರಿಗೆ ಒಂದು ಪತ್ರ ಬರೆದಿದ್ದರು. ಕಾಂಗ್ರೆಸ್ಗೆ ಇನ್ನೂ ಪೂರ್ಣಾವಧಿ ಅಧ್ಯಕ್ಷರ ನೇಮಕವಾಗಿಲ್ಲ. ಹೀಗಿದ್ದಾಗ್ಯೂ ಪಕ್ಷ ಯಾರ ನೇತೃತ್ವದಲ್ಲಿ ಮಹತ್ವದ ವಿಚಾರಗಳ ನಿರ್ಧಾರ ಕೈಗೊಳ್ಳುತ್ತಿದೆ. ಪೂರ್ಣಾವಧಿ ಅಧ್ಯಕ್ಷ ಅನುಪಸ್ಥಿತಿಯಲ್ಲಿ ಯಾರು ನಿರ್ಣಯಗಳನ್ನು ರೂಪಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಈ ಪತ್ರಕ್ಕೆ ಉಳಿದ ಜಿ23 ನಾಯಕರು ಸಹಿಯನ್ನೂ ಹಾಕಿದ್ದರು. ಈ ಪತ್ರ ಬರೆದ ಜಿ23 ನಾಯಕರನ್ನು ಗುರಿಯಾಗಿಸಿ ಇಂದಿನ ಸಭೆಯಲ್ಲಿ ಅವರು ತಿರುಗೇಟು ನೀಡಿದ್ದಾರೆ.
ಸಾಂಸ್ಥಿಕ ಚುನಾವಣೆ, ಮುಂಬರುವ ವಿಧಾನಸಭಾ ಚುನಾವಣೆ, ಸದ್ಯದ ರಾಜಕೀಯ ಪರಿಸ್ಥಿತಿ ಸೇರಿ ಮತ್ತಿತರ ವಿಚಾರಗಳನ್ನು ಚರ್ಚಿಸುವ ಸಲುವಾಗಿ ಇಂದು ಕಾಂಗ್ರೆಸ್ ಉನ್ನತಮಟ್ಟದ ಸಭೆ ನಡೆಸಿತ್ತು. ಇದರಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆರ್ಥಿಕ ಹಿಂಜರಿತ ಮುಚ್ಚಿಡಲು ಸರ್ಕಾರಿ ಆಸ್ತಿ ಮಾರಾಟ ಆಗುತ್ತಿದೆ. ಎಸ್ಎಸ್ಟಿ, ಹಿಂದುಳಿದ ವರ್ಗದವರ ಉದ್ಯೋಗಕ್ಕೂ ಹೊಡೆತ ಬಿದ್ದಿದೆ. ಪೆಟ್ರೋಲ್ ದರ, ಡೀಸೆಲ್ ದರವೆಲ್ಲ ಗಗನಕ್ಕೇರಿದೆ. ಇದರಿಂದಾಗಿ ಸಾರ್ವಜನಿಕರ ಜೀವನಕ್ಕೆ ತೊಂದರೆಯಾಗಿದೆ ಎಂದು ಹೇಳಿದರು. ಹಾಗೇ, ಭಾರತಕ್ಕೆ ಗಡಿಯಲ್ಲಿ ಗಂಭೀರವಾದ ಸಮಸ್ಯೆ ಎದುರಾಗಿದೆ. ಚುನಾವಣೆಗೂ ವಿದೇಶಾಂಗ ನೀತಿಯನ್ನು ಬಳಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಗಡಿ ಸಮಸ್ಯೆ ಪರಿಹರಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Bangalore Crime: ಸೈಡ್ ಕೊಡದ ಬೆಂಗಳೂರಿನ ಬೈಕ್ ಸವಾರನಿಗೆ ಶೂಟ್ ಮಾಡಿದ ಲ್ಯಾಂಡ್ ರೋವರ್ ಕಾರು ಚಾಲಕ
Kalaburagi Earthquake: ಲಘು ಭೂಕಂಪನ; ಬೆಳಿಗ್ಗೆ 11.40ರ ಸುಮಾರಿಗೆ ಭೂಮಿಯಿಂದ ಭಾರೀ ಸದ್ದು