ನನ್ನೊಳಗೆ ಭಾರತದ ಡಿಎನ್‌ಎ ಇದೆ ಎಂದ ಇಂಡೋನೇಷ್ಯಾದ ಅಧ್ಯಕ್ಷ ಸುಬಿಯಾಂಟೋ
ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ್ದ ಔತಣಕೂಟದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ 'ನನ್ನಲ್ಲಿ ಭಾರತೀಯ ಡಿಎನ್‌ಎ ಇದೆ' ಎಂದು ಹೇಳಿದ್ದಾರೆ. ಉಪಾಧ್ಯಕ್ಷ ಜಗದೀಪ್ ಧಂಖರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಅವರು ಉಭಯ ದೇಶಗಳ ನಡುವಿನ ಪ್ರಾಚೀನ ನಾಗರಿಕತೆಯ ಸಂಬಂಧಗಳ ಬಗ್ಗೆ ವಿವರವಾಗಿ ಮಾತನಾಡಿದರು ಮತ್ತು ಇಂಡೋನೇಷ್ಯಾ ಮತ್ತು ಭಾರತವು ನಿಕಟ ಸ್ನೇಹಿತರಾಗಿ ಉಳಿಯಬೇಕೆಂದು ಅವರು ಬಯಸುವುದಾಗಿ ಹೇಳಿದರು.
ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೋ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಣರಾಜ್ಯೋತ್ಸವದ ನಂತರ ರಾತ್ರಿ ಅವರ ಗೌರವಾರ್ಥ ಭೋಜನಕೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ, ಅಧ್ಯಕ್ಷ ಸುಬಿಯಾಂಟೊ ಅವರು ಭಾರತದೊಂದಿಗಿನ ಬಾಂಧವ್ಯದ ಬಗ್ಗೆ ತಮಾಷೆಯಾಗಿ ಮಾತನಾಡಿ, ಡಿಎನ್‌ಎ ಪರೀಕ್ಷೆಯಲ್ಲಿ ಅವರ ಪೂರ್ವಜರು ಭಾರತೀಯರು ಎಂಬುದು ಗೊತ್ತಾಗಿದೆ, ಹಾಗಾಗಿ ನನ್ನೊಳಗೂ ಭಾರತದ ಡಿಎನ್‌ಎ ಇದೆ ಇದೆ ಎಂದು ಹೇಳಿದ್ದಾರೆ.
ಕೆಲವು ವಾರಗಳ ಹಿಂದೆ, ನಾನು ನನ್ನ ಜೆನೆಟಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಮತ್ತು ಡಿಎನ್‌ಎ ಪರೀಕ್ಷೆಯನ್ನು ಮಾಡಿದ್ದೇನೆ, ಅದು ನನ್ನ ಡಿಎನ್‌ಎ ಭಾರತೀಯ ಎಂದು ತಿಳಿದುಬಂದಿದೆ. ನಾನು ಭಾರತೀಯ ಸಂಗೀತವನ್ನು ಕೇಳಿದಾಗ ನಾನು ನೃತ್ಯ ಮಾಡಲು ಪ್ರಾರಂಭಿಸುತ್ತೇನೆ ಎಂದರು.
ಅಧ್ಯಕ್ಷ ಸುಬಿಯಾಂತೋ ಅವರ ಮಾತು ಕೇಳಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉಪಾಧ್ಯಕ್ಷ ಜಗದೀಪ್ ಧಂಖರ್ ಸೇರಿದಂತೆ ಅತಿಥಿಗಳು ನಗಲು ಪ್ರಾರಂಭಿಸಿದರು. ಭಾರತದ 76ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ದೆಹಲಿಗೆ ಬಂದಿದ್ದ ಸುಬಿಯಾಂತೋ, ಉಭಯ ದೇಶಗಳ ನಡುವಿನ ನಿರಂತರ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬಾಂಧವ್ಯದ ಕುರಿತು ಮಾತನಾಡಿದರು.
ಮತ್ತಷ್ಟು ಓದಿ: ರಕ್ಷಣಾ, ವ್ಯಾಪಾರ ಸಂಬಂಧ ಗಟ್ಟಿಗೊಳಿಸಲು ಒಪ್ಪಿಗೆ; ಇಂಡೋನೇಷ್ಯಾ ಅಧ್ಯಕ್ಷ ಸುಬಿಯಾಂಟೊ ಜೊತೆ ಮೋದಿ ಮಾತುಕತೆ
ಉಭಯ ದೇಶಗಳ ನಡುವಿನ ಪಾರಂಪರಿಕ ಪರಂಪರೆಗೆ ಒತ್ತು ನೀಡಿದ ಅವರು, ‘ನಮ್ಮ ಭಾಷೆಯ ಬಹುಮುಖ್ಯ ಭಾಗ ಸಂಸ್ಕೃತದಿಂದ ಬಂದಿದೆ. ಅನೇಕ ಇಂಡೋನೇಷಿಯನ್ ಹೆಸರುಗಳು ಸಂಸ್ಕೃತದಲ್ಲಿವೆ. ನಮ್ಮ ದೈನಂದಿನ ಜೀವನದಲ್ಲಿ, ಪ್ರಾಚೀನ ಭಾರತೀಯ ನಾಗರಿಕತೆಯ ಪ್ರಭಾವವು ತುಂಬಾ ಪ್ರಬಲವಾಗಿದೆ ಎಂದು ಹೇಳಿದರು.
ಇಂಡೋನೇಷ್ಯಾದ ಅಧ್ಯಕ್ಷರು ಸಹ ಪ್ರಧಾನಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ಇದು ಸ್ಪೂರ್ತಿದಾಯಕ ಎಂದು ಬಣ್ಣಿಸಿದರು. ಭಾರತದಲ್ಲಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಅವರು ಹೇಳಿದರು. ನಾನು ವೃತ್ತಿಪರ ರಾಜಕಾರಣಿಯೂ ಅಲ್ಲ, ಉತ್ತಮ ರಾಜತಾಂತ್ರಿಕನೂ ಅಲ್ಲ, ನನ್ನ ಮನದಾಳದಲ್ಲಿರುವುದನ್ನು ಹೇಳುತ್ತೇನೆ. ನಾನು ಇಲ್ಲಿಗೆ ಬಂದು ಕೆಲವು ದಿನಗಳಾಗಿವೆ, ಆದರೆ ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಬದ್ಧತೆಯಿಂದ ಬಹಳಷ್ಟು ಕಲಿತಿದ್ದೇನೆ ಎಂದರು.
ಪ್ರಧಾನಿ ಮೋದಿಯವರ ನಾಯಕತ್ವ, ಬಡತನ ನಿರ್ಮೂಲನೆಗೆ ನಿಮ್ಮ ಬದ್ಧತೆ, ಅಂಚಿನಲ್ಲಿರುವ ಜನರು ಮತ್ತು ಸಮಾಜದ ದುರ್ಬಲ ವರ್ಗದವರಿಗೆ ಸಹಾಯ ಮಾಡುವುದು ನಮಗೆ ಸ್ಫೂರ್ತಿಯಾಗಿದೆ.
ಅಧ್ಯಕ್ಷ ಸುಬಿಯಾಂಟೊ ಅವರನ್ನು ಸ್ವಾಗತಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಭಾರತ ಮತ್ತು ಇಂಡೋನೇಷ್ಯಾ ನಡುವಿನ ನಾಗರಿಕತೆಯ ಸಂಬಂಧವು ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ಹೇಳಿದರು. ‘ಬಹುತ್ವದ ಮೌಲ್ಯಗಳು, ಒಳಗೊಳ್ಳುವಿಕೆ ಮತ್ತು ಕಾನೂನಿನ ನಿಯಮಗಳು ಎರಡೂ ದೇಶಗಳಿಗೆ ಸಾಮಾನ್ಯವಾಗಿದೆ ಮತ್ತು ಈ ಮೌಲ್ಯಗಳು ನಮ್ಮ ಸಮಕಾಲೀನ ಸಂಬಂಧಗಳಿಗೆ ಮಾರ್ಗದರ್ಶನ ನೀಡಿವೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ