ರಾತ್ರೋರಾತ್ರಿ ಪುಣೆಯಿಂದ ದೆಹಲಿಗೆ 2 ಕಿಡ್ನಿ, ಲಿವರ್ ರವಾನಿಸಿ ಜೀವ ಉಳಿಸಲು ನೆರವಾದ ಐಎಎಫ್
ಈ ತಿಂಗಳ ಆರಂಭದಲ್ಲಿ ಬೆಂಗಳೂರಿನಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಅಂಗಾಂಗ ದಾನದಿಂದ ದೇಶದ ಐದು ಕಡೆಗಳಲ್ಲಿ ರೋಗಿಗಳಿಗೆ ಪುನರ್ಜನ್ಮ ದೊರೆತಿತ್ತು. ಅದರಲ್ಲಿ ಒಂದು ಕಿಡ್ನಿ ಮತ್ತು ಕಣ್ಣುಗಳನ್ನು ಭಾರತೀಯ ವಾಯುಪಡೆಯ ವಿಮಾನ ದೆಹಲಿಗೆ ಒಯ್ದು ಜೀವ ಉಳಿಸಲು ನೆರವಾಗಿತ್ತು. ಇದೀಗ ಪುಣೆಯಿಂದ ದೆಹಲಿಗೆ ಕಿಡ್ನಿಗಳು ಮತ್ತು ಲಿವರ್ ಸಾಗಿಸಿ ನೆರವಾಗಿದೆ.

ನವದೆಹಲಿ, ಜೂನ್ 21: ಭಾರತೀಯ ವಾಯುಪಡೆ (IAF) ಅಂದರೆ ಹಾಗೆಯೇ. ಶತ್ರುಗಳನ್ನು ನುಗ್ಗಿ ಹೊಡೆಯುವುದರಲ್ಲಿಯೂ ಮುಂದೆ, ಅದೇ ರೀತಿ ಜೀವ ಉಳಿಸುಂಥ ಸಂದರ್ಭ ಬಂದರೆ ಅದಕ್ಕೂ ಸೈ. ಇದಕ್ಕೆ ತಕ್ಕ ಉದಾಹರಣೆಯಾಗಿ, ಶುಕ್ರವಾರ ರಾತ್ರೋರಾತ್ರಿ ಪುಣೆಯ ಕಮಾಂಡ್ ಆಸ್ಪತ್ರೆಯಿಂದ ದೆಹಲಿಯ ಸೇನಾ ಆಸ್ಪತ್ರೆಗೆ (R&R) 1 ಲಿವರ್, 2 ಕಿಡ್ನಿಗಳನ್ನು ರವಾನಿಸಿ ರೋಗಿಗಳ ಜೀವ ಉಳಿಸಲು ನೆರವಾಗಿದೆ. ಈ ಕುರಿತು ಶನಿವಾರ ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿರುವ ಐಎಎಫ್, ಕಾರ್ಯಾಚರಣೆಯ ವಿವರಗಳನ್ನು, ಛಾಯಾಚಿತ್ರಗಳು ಮತ್ತು ಏರ್‌ಲಿಫ್ಟ್‌ನ ವೀಡಿಯೊವನ್ನು ಹಂಚಿಕೊಂಡಿದೆ.
ರಾತ್ರಿಯ ಕ್ಷಿಪ್ರ ಕಾರ್ಯಾಚರಣೆಯಲ್ಲಿ, ಭಾರತೀಯ ವಾಯುಪಡೆಯು ಪುಣೆಯ ಕಮಾಂಡ್ ಆಸ್ಪತ್ರೆಯಿಂದ ದೆಹಲಿಯ ಸೇನಾ ಆಸ್ಪತ್ರೆಗೆ ಒಂದು ಯಕೃತ್ತು ಮತ್ತು ಎರಡು ಮೂತ್ರಪಿಂಡಗಳನ್ನು ವಿಮಾನದ ಮೂಲಕ ಸಾಗಿಸಿತು. ಯೋಧರೊಬ್ಬರ ಅವಲಂಬಿತ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡಿತ್ತು. ಅವರು ದಾನ ಮಾಡಿದ ಅಂಗಗಳು ಬಹು ಇತರ ವ್ಯಕ್ತಿಗಳಿಗೆ ಹೊಸ ಜೀವನವನ್ನು ನೀಡಿವೆ. ಎಎಫ್‌ಎಂಎಸ್ ಮತ್ತು ಐಎಎಫ್ ಜಂಟಿಯಾಗಿ ನಿರ್ವಹಿಸಿವೆ ಎಂದು ಭಾರತೀಯ ವಾಯುಪಡೆ ಎಕ್ಸ್ ಸಂದೇಶದಲ್ಲಿ ತಿಳಿಸಿದೆ.
ಭಾರತೀಯ ವಾಯುಪಡೆ ಎಕ್ಸ್ ಸಂದೇಶ
In a swift overnight mission today, the Indian Air Force airlifted a liver and two kidneys from CH Pune to Army Hospital (R&R), Delhi.
The organs, donated by a brain-dead dependent of a soldier, will give new life to multiple recipients. Jointly executed by AFMS & IAF. Service… pic.twitter.com/2YR4j8lkQc
— Indian Air Force (@IAF_MCC) June 21, 2025
ಈ ತಿಂಗಳ ಆರಂಭದಲ್ಲಿ, ಬೆಂಗಳೂರಿನಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಗಳನ್ನು ದೇಶದ ವಿವಿಧ ಭಾಗಗಳಿಗೆ ಕಳುಹಿಸಲಾಗಿತ್ತು. ಪರಿಣಾಮವಾಗಿ ಐದು ಜನರಿಗೆ ಜೀವದಾನವಾಗಿತ್ತು. ಒಂದು ಮೂತ್ರಪಿಂಡ ಮತ್ತು ಕಣ್ಣುಗಳನ್ನು ಐಎಎಫ್ ವಿಮಾನವು ಬೆಂಗಳೂರಿನಿಂದ ದೆಹಲಿಗೆ ವಿಮಾನದ ಮೂಲಕ ಸಾಗಿಸಿತ್ತು.
ಐಎಎಫ್ ಪ್ರಕಾರ, ಒಂದು ಮೂತ್ರಪಿಂಡ ಮತ್ತು ಕಣ್ಣುಗಳನ್ನು ದೆಹಲಿಯ ಸೇನಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇನ್ನೊಂದು ಮೂತ್ರಪಿಂಡ, ಕಾರ್ನಿಯಾವನ್ನು ಹಾಗೂ ಚರ್ಮದ ಅಂಗಾಂಶವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ತಂಡದ ಸಹಯೋಗದೊಂದಿಗೆ ಸಿಎಚ್ಎಎಫ್ಬಿಯಲ್ಲಿ ಕಸಿ ಮಾಡಲಾಗಿತ್ತು. ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ಯಕೃತ್ತನ್ನು ಯಶಸ್ವಿಯಾಗಿ ಕಸಿ ಮಾಡಲಾಗಿತ್ತು.
ಇದನ್ನೂ ಓದಿ: ನೇಪಾಳ, ಶ್ರೀಲಂಕಾ ನಾಗರಿಕರ ಸ್ಥಳಾಂತರಕ್ಕೆ ಭಾರತ ಸಿದ್ಧತೆ, 517 ಭಾರತೀಯರ ಸ್ಥಳಾಂತರ
ಕರ್ನಾಟಕ ಸರ್ಕಾರದ ‘‘ಜೀವನಸಾರ್ಥಕತೆ’’ ಸಹಯೋಗದೊಂದಿಗೆ ಸುಗಮ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಇದು ಸಶಸ್ತ್ರ ಪಡೆಗಳ ವೈದ್ಯಕೀಯ ಸಮುದಾಯದ ಅಸಾಧಾರಣ ಬದ್ಧತೆ ಮತ್ತು ವೈದ್ಯಕೀಯ ಪರಿಣತಿಯನ್ನು ಪ್ರತಿಬಿಂಬಿಸಿದೆ ಎಂದು ಎಂದು ಐಎಎಫ್ ಪ್ರಕಟಣೆ ತಿಳಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ