ನಿಮಗೆ ಧೈರ್ಯವಿದ್ದರೆ ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ: ಮಹಾರಾಷ್ಟ್ರ ಸಿಎಂಗೆ ಸವಾಲೆಸೆದ ಸಂಸದೆ ನವನೀತ್ ರಾಣಾ

| Updated By: ರಶ್ಮಿ ಕಲ್ಲಕಟ್ಟ

Updated on: May 08, 2022 | 7:23 PM

ನಿಮ್ಮ ಹಿರಿಯರ ಹೆಸರಿನಿಂದಾಗಿ ನಿಮಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಚುನಾವಣಾ ಪ್ರಕ್ರಿಯೆಗೆ ಬನ್ನಿ. ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲುವಂತೆ ನಾನು ನಿಮಗೆ ಸವಾಲು ಹಾಕುತ್ತೇನೆ. ಶ್ರೀರಾಮನ ಹೆಸರು ಹೇಳಿದ್ದಕ್ಕೆ ನನ್ನ ಮೇಲೆ ದೌರ್ಜನ್ಯ ಎಸಗಿದ್ದಕ್ಕೆ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಕ್ಕೆ....

ನಿಮಗೆ ಧೈರ್ಯವಿದ್ದರೆ ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ: ಮಹಾರಾಷ್ಟ್ರ ಸಿಎಂಗೆ ಸವಾಲೆಸೆದ ಸಂಸದೆ ನವನೀತ್ ರಾಣಾ
ಸಂಸದೆ ನವನೀತ್ ರಾಣಾ
Follow us on

ಮುಂಬೈ: ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಸಂಸದೆ ನವನೀತ್ ರಾಣಾ (Navneet Rana) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಠಾಕ್ರೆ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಭಗವಾನ್ ರಾಮನ ಹೆಸರನ್ನು ಬಳಸಿದ್ದಕ್ಕಾಗಿ ಲಾಕಪ್ ಮತ್ತು ಜೈಲಿನಲ್ಲಿ ಕಿರುಕುಳ ಮತ್ತು ಚಿತ್ರಹಿಂಸೆ ನೀಡಿದ್ದಾರೆ ಎಂದು ನವನೀತ್ ಆರೋಪಿಸಿದ್ದಾರೆ. ರಾಜ್ಯದ ಯಾವುದೇ ಜಿಲ್ಲೆಯಿಂದ ತನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ನೋಡಿ ಎಂದು ರಾಣಾ ಠಾಕ್ರೆಗೆ ಸವಾಲು ಹಾಕಿದರು. ನಿಮಗೆ ಧೈರ್ಯವಿದ್ದರೆ ರಾಜ್ಯದ ಯಾವುದೇ ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧಿಸಿ. ನಾನು ನಿಮ್ಮ ವಿರುದ್ಧ ಸ್ಪರ್ಧಿಸುತ್ತೇನೆ. ಆಮೇಲೆ ರಾಜ್ಯದ ಜನ ಯಾರನ್ನು ಆಯ್ಕೆ ಮಾಡ್ತಾರೆ ನೋಡಿ ಎಂದು ರಾಣಾ ಹೇಳಿದ್ದಾರೆ. ಅಮರಾವತಿ ಸಂಸದೆ ಸ್ಪಾಂಡಿಲೋಸಿಸ್ ಚಿಕಿತ್ಸೆಗಾಗಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಭಾನುವಾರ ಡಿಸ್ಚಾರ್ಜ್ ಆಗಿದ್ದಾರೆ.  “ಹನುಮಾನ್ ಚಾಲೀಸಾ (Hanuman Chalisa) ಪಠಿಸುವುದು ಅಪರಾಧವಾದರೆ, ನಾನು ಕೇವಲ 14 ದಿನವಲ್ಲ, 14 ವರ್ಷಗಳ ಕಾಲ ಜೈಲಿನಲ್ಲಿ ಇರಲು ಸಿದ್ಧಳಿದ್ದೇನೆ. ಮಹಿಳೆಯನ್ನು 14 ದಿನಗಳ ಕಾಲ ಜೈಲಿನಲ್ಲಿಡುವ ಮೂಲಕ  ದನಿಯನ್ನು ಹತ್ತಿಕ್ಕಬಹುದು ಎಂದು ಅವರು ಭಾವಿಸಿದರೆ ಅದು ಆಗುವುದಿಲ್ಲ. ನಮ್ಮ ಹೋರಾಟವು ದೇವರ ಹೆಸರಿನಲ್ಲಿದೆ ಮತ್ತು ಅದು ಮುಂದುವರಿಯಲಿದೆ ಎಂದಿದ್ದಾರೆ ರಾಣಾ.

ಏಪ್ರಿಲ್ 23 ರಂದು ಮುಖ್ಯಮಂತ್ರಿಗಳ ಖಾಸಗಿ ನಿವಾಸವಾದ ಮಾತೋಶ್ರೀ ಮುಂದೆ ಹನುಮಾನ್ ಚಾಲೀಸಾ ಪಠಣವನ್ನು ಘೋಷಿಸಿದ ನಂತರ ರಾಣಾ ಮತ್ತು ಅವರ ಪತಿ ಶಾಸಕ ರವಿ ಅವರನ್ನು ದೇಶದ್ರೋಹದ ಆರೋಪದಡಿ ಬಂಧಿಸಲಾಯಿತು. ಠಾಕ್ರೆ ವಿರುದ್ಧದ ಅವರ “ಆಪಾದನೀಯ” ಹೇಳಿಕೆಗಳಲ್ಲಿ ಅವರು “ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಗೆರೆಗಳನ್ನು ದಾಟಿದ್ದಾರೆ” ಎಂದು ವಿಶೇಷ ನ್ಯಾಯಾಲಯವು ಹೇಳಿದ ನಂತರ ಅವರಿಗೆ ಜಾಮೀನು ನೀಡಲಾಯಿತು.

ನಿಮ್ಮ ಹಿರಿಯರ ಹೆಸರಿನಿಂದಾಗಿ ನಿಮಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಚುನಾವಣಾ ಪ್ರಕ್ರಿಯೆಗೆ ಬನ್ನಿ. ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲುವಂತೆ ನಾನು ನಿಮಗೆ ಸವಾಲು ಹಾಕುತ್ತೇನೆ. ಶ್ರೀರಾಮನ ಹೆಸರು ಹೇಳಿದ್ದಕ್ಕೆ ನನ್ನ ಮೇಲೆ ದೌರ್ಜನ್ಯ ಎಸಗಿದ್ದಕ್ಕೆ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಕ್ಕೆ ರಾಜ್ಯದ ಜನತೆ ನಿಮಗೆ ಉತ್ತರ ನೀಡಲಿದ್ದಾರೆ ಎಂದು ರಾಣಾ ಹೇಳಿದರು.  ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ರಾಜ್ಯ ಸರ್ಕಾರದ ವಿರುದ್ಧ ಹಾಗೂ ತನಗೆ ಹಾಗೂ ಪತಿ ರವಿಗೆ ಜೀವ ಬೆದರಿಕೆ ಹಾಕಿರುವ ಶಿವಸೇನಾ ನಾಯಕ ಸಂಜಯ್ ರಾವತ್ ವಿರುದ್ಧ ದೂರು ನೀಡುವುದಾಗಿ ರಾಣಾ ಹೇಳಿದ್ದಾರೆ.

ಇದನ್ನೂ ಓದಿ
ಹನುಮಾನ್ ಚಾಲೀಸಾ ವಿವಾದ; ಸಂಸದೆ ನವನೀತ್ ರಾಣಾ-ಶಾಸಕ ರವಿ ರಾಣಾಗೆ ಅಂತೂ ಸಿಕ್ತು ಜಾಮೀನು, ಕೋರ್ಟ್​​ನಿಂದ ಎಚ್ಚರಿಕೆ

ಹನುಮಾನ್ ಚಾಲೀಸಾ ವಿವಾದ: ಸಂಸದೆ-ಶಾಸಕ ದಂಪತಿಯ ಜಾಮೀನು ಪ್ರಶ್ನಿಸಲಿದೆ ಮಹಾರಾಷ್ಟ್ರ ಸರ್ಕಾರ

ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಮಹಾರಾಷ್ಟ್ರ ಸರ್ಕಾರವು ನ್ಯಾಯಾಲಯಕ್ಕೆ ಮನವಿ ಮಾಡಲಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಡ್ವೊಕೇಟ್ ಪ್ರದೀಪ್ ಘರತ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಜಾಮೀನು ಷರತ್ತುಗಳನ್ನು ಉಲ್ಲಂಘಿಸಿರುವುದರಿಂದ ಮಾಧ್ಯಮಗಳಲ್ಲಿ ದಂಪತಿಗಳ ಹೇಳಿಕೆಗಳು ನ್ಯಾಯಾಲಯದ ಸ್ಪಷ್ಟ ನಿಂದನೆಯಾಗಿದೆ ಎಂದು ಘರತ್ ಹೇಳಿದರು. ಸೋಮವಾರ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸುವುದಾಗಿ ಘರತ್ ತಿಳಿಸಿದ್ದಾರೆ.

ರಾಣಾ ದಂಪತಿಗೆ ಜಾಮೀನು ನೀಡುವಾಗ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು ಷರತ್ತು ವಿಧಿಸಿತ್ತು. ತಮ್ಮ ಪತ್ನಿ ಹಾಗೂ ಅಮರಾವತಿಯ ಪಕ್ಷೇತರ ಸಂಸದೆ ನವನೀತ್ ರಾಣಾ ಅವರು ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡಿ ಆಸ್ಪತ್ರೆಗೆ ದಾಖಲಾಗುವಂತೆ ಮನವಿ ಮಾಡಿದಾಗ ಜೈಲು ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ರವಿ ರಾಣಾ ಗುರುವಾರ ಆರೋಪಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 7:17 pm, Sun, 8 May 22