ಆಕ್ಸಿಜನ್ ಸಿಗುತ್ತಿಲ್ಲ ಎಂದ ವ್ಯಕ್ತಿಯಲ್ಲಿ ‘ಹೀಗೆ ಕೇಳಿದ್ರೆ ಕಪಾಳಕ್ಕೆ ಎರಡೇಟು ಸಿಗುತ್ತದೆ’ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್

Prahlad Patel in Madhya Pradesh: ದಮೋಹ್ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರತಿನಿಧಿ ಹಾಗೂ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಪಟೇಲ್ ಅವರಲ್ಲಿ ಕೊವಿಡ್ ರೋಗಿಯ ಸಂಬಂಧಿಯೊಬ್ಬರು ಆಕ್ಸಿಜನ್ ಸಿಗುತ್ತಿಲ್ಲ ಎಂದು ಹೇಳಿದಾಗ ಹೀಗೆ ಹೇಳಿದ್ರೆ ಕಪಾಳಕ್ಕೆ ಎರಡೇಟು ಸಿಗುತ್ತದೆ ಎಂದು ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಆಕ್ಸಿಜನ್ ಸಿಗುತ್ತಿಲ್ಲ ಎಂದ ವ್ಯಕ್ತಿಯಲ್ಲಿ ಹೀಗೆ ಕೇಳಿದ್ರೆ ಕಪಾಳಕ್ಕೆ ಎರಡೇಟು ಸಿಗುತ್ತದೆ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್
ಆಸ್ಪತ್ರೆಯ ಹೊರಗಡೆ ಪ್ರಹ್ಲಾದ್ ಪಟೇಲ್

Updated on: Apr 22, 2021 | 7:56 PM

ದೆಹಲಿ: ಮಧ್ಯ ಪ್ರದೇಶದ ದಮೋಹ್ ಎಂಬಲ್ಲಿರುವ ಆಸ್ಪತ್ರೆಯ ಹೊರಗೆ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಕೊವಿಡ್ ರೋಗಿಯ ಸಂಬಂಧಿಯೊಬ್ಬರಲ್ಲಿ ದುಡುಕಿ, ಹೀಗೆ ಹೇಳಿದ್ರೆ ಕಪಾಳಕ್ಕೆ ಎರಡೇಟು ಸಿಗುತ್ತದೆ ಎಂದು ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ‘ನಾವು ತುಂಬಾ ಹತಾಶೆಯಿಂದ ಇದ್ದೇವೆ. ನಮಗೆ ಸಿಲಿಂಡರ್ ಸಿಗುತ್ತಿಲ್ಲ. ನಿಮಗೆ ಆಕ್ಸಿಜನ್ ಸಿಲಿಂಡರ್ ಕೊಡುವುದಿಲ್ಲ ಎಂದು ಅವರು ಹೇಳಲಿ’ ಎಂದು ವ್ಯಕ್ತಿಯೊಬ್ಬರು ಸಚಿವ ಪಟೇಲ್ ಅವರಲ್ಲಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ನೀನು ಈ ರೀತಿ ಹೇಳಿದರೆ ಎರಡೇಟು ಸಿಗುತ್ತದೆ, ಶಾಂತವಾಗಿರಿ ಎಂದಿದ್ದಾರೆ. ದಮೋಹ್ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರತಿನಿಧಿಯಾಗಿದ್ದಾರೆ ಪ್ರಹ್ಲಾದ್ ಪಟೇಲ್.

ಸಚಿವರ ಈ ಉತ್ತರ ಕೇಳಿ ಕಣ್ಣೀರು ಸುರಿಸಿದ ಆ ವ್ಯಕ್ತಿ,ಹೌದು ನನಗೆ ಸಿಗುವುದು ಅದೇ. ನನ್ನ ಅಮ್ಮ ಅಲ್ಲಿ ಮಲಗಿದ್ದಾಳೆ ಎಂದಿದ್ದಾರೆ. ನಿಮಗೆ ಯಾರಾದರೂ ಆಕ್ಸಿಜನ್ ಸಿಲಿಂಡರ್ ನಿರಾಕರಿಸಿದರೆ? ಎಂದು ಸಚಿವರು ಕೇಳಿದಾಗ ‘ಹೌದು ಅವರು ನಿರಾಕರಿಸಿದರು. ನಮಗೆ ಐದು ನಿಮಿಷದ ಅವಧಿಗೆ ಒಂದು ಸಿಲಿಂಡರ್ ಸಿಕ್ಕಿತು. ಇದಕ್ಕಿಂತ ಖಡಾಖಂಡಿತವಾಗಿ ಇಲ್ಲ ಎಂದು ಹೇಳುವುದೇ ಒಳ್ಳೆಯದು ಎಂದು’ ಆ ವ್ಯಕ್ತಿ ಉತ್ತರಿಸಿದ್ದಾರೆ.

ಕೊವಿಡ್ ರೋಗಿಗಳ ಸಂಬಂಧಿಕರು ಮಂಗಳವಾರ ಆಮ್ಲಜನಕ ಸಿಲಿಂಡರ್‌ಗಳನ್ನು ಲೂಟಿ ಮಾಡಿದ್ದ ಕೊವಿಡ್ ರೋಗಿಗಳಿಗಾಗಿರುವ ದಮೋಹ್ ಜಿಲ್ಲಾ ಆಸ್ಪತ್ರೆಯ ಹೊರಗೆ ಈ ಘಟನೆ ನಡೆದಿದೆ. ಕುಪಿತಗೊಂಡ ಸಂಬಂಧಿಕರು ಸಿಲಿಂಡರ್‌ಗಳನ್ನು ಕಸಿದುಕೊಳ್ಳುತ್ತಿರುವುದು ಆಮ್ಲಜನಕದ ಸಂಗ್ರಹದ ಕೋಣೆಯನ್ನು ದರೋಡೆ ಮಾಡುತ್ತಿರುವ ದೃಶ್ಯ ಇಲ್ಲಿ ಕಂಡಿತ್ತು. ಈ ಘಟನೆಯ ನಂತರ ಪ್ರಕಟಣೆ ಬಿಡುಗಡೆ ಮಾಡಿದ ಮಧ್ಯಪ್ರದೇಶ ಸರ್ಕಾರವು ಹೆಚ್ಚುವರಿ ಆಮ್ಲಜನಕವನ್ನು ಹೊಂದಿದೆ ಎಂದು ಹೇಳಿತ್ತು.

ದಮೋಹ್ ಜಿಲ್ಲೆಯಲ್ಲಿ 3,320 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ ಪ್ರಕರಣಗಳ ಸಂಖ್ಯೆ 101 ರಷ್ಟು ಏರಿಕೆಯಾಗಿದೆ.

ಕೊರೊನಾವೈರಸ್ ಪ್ರಕರಣಗಳು ತೀವ್ರವಾಗಿ ಏರುತ್ತಿರುವ ಕಾರಣ ಮಧ್ಯಪ್ರದೇಶವು ಹಲವಾರು ನಗರಗಳಲ್ಲಿ ನಿರ್ಬಂಧ ಮತ್ತು ಕರ್ಫ್ಯೂ ಜಾರಿಗೊಳಿಸಿದೆ. ಏಪ್ರಿಲ್ 17 ರಂದು ನಗರಸಭೆ ಉಪಚುನಾವಣೆಗಾಗಿ ರಾಜಕಾರಣಿಗಳು ಪ್ರಚಾರ ನಡೆಸಿ ಜನ ಸೇರಿಸಿದ್ದು ಕೊವಿಡ್ ಪ್ರಕರಣ ಏರಲು ಕಾರಣವಾಗಿತ್ತು.

ಸದ್ಯ ದೇಶದ ಆರೋಗ್ಯ ವ್ಯವಸ್ಥೆಯಲ್ಲೂ ಏರುಪೇರಾಗಿದ್ದು ಆಕ್ಸಿಜನ್​ ಕೊರತೆ, ಐಸಿಯು ಕೊರತೆ, ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ, ರೆಮ್​ಡೆಸಿವರ್​ ಇಂಜೆಕ್ಷನ್ ಅಭಾವ ಎದುರಾಗಿದೆ. ಏಪ್ರಿಲ್ 15 ರಿಂದೀಚೆಗೆ ಪ್ರತಿನಿತ್ಯ ಸುಮಾರು 2 ಲಕ್ಷ ಕೊರೊನಾ ಪ್ರಕರಣಗಳು ಹೊಸದಾಗಿ ದಾಖಲಾಗುತ್ತಿದ್ದು, ಕೊರೊನಾ ಎರಡನೇ ಅಲೆ ಉತ್ತುಂಗಕ್ಕೆ ಹೋದಾಗ ಇನ್ನೂ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳಲಿವೆ ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಲವು ರಾಜ್ಯಗಳು ಕಳೆದ ಬಾರಿಯಂತೆಯೇ ಕೊರೊನಾ ನಿಯಂತ್ರಣಕ್ಕೆ ಕಠಿಣ ನಿಯಮಾವಳಿಗಳ ಮೊರೆ ಹೋಗಿದ್ದು, ನಿಯಮ ಪಾಲಿಸುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿವೆ.

ಭಾರತದಲ್ಲಿ ಕಳೆದ  24 ಗಂಟೆಯ ಅವಧಿಯಲ್ಲಿ 3.14 ಲಕ್ಷ ಹೊಸ ಪ್ರಕರಣಗಳಿಗೆ ಸಾಕ್ಷಿಯಾಗುವ ಮೂಲಕ ವಿಶ್ವದಲ್ಲಿ ಒಂದೇ ದಿನದಲ್ಲಿ ಅತ್ಯಧಿಕ ಸೋಂಕು ದಾಖಲಾದ ದೇಶ ಎಂದು ಗುರುತಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ದಾಖಲಾದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 1.59 ಲಕ್ಷದ ಗಡಿ ದಾಟಿದೆ.

ಇದನ್ನೂ ಓದಿ: ಮುಂಬೈಯಲ್ಲಿ ಉಚಿತ ಆಕ್ಸಿಜನ್ ಪೂರೈಕೆ ಯೋಜನೆ ಆರಂಭಿಸುವುದಕ್ಕಾಗಿ ಎಸ್​ಯುವಿ ಮಾರಿದ ಶಹನವಾಜ್ ಶೇಖ್

ವೇಗವಾಗಿ ಆಕ್ಸಿಜನ್ ಪೂರೈಕೆ ಮಾಡುವಂತೆ ಉನ್ನತ ಮಟ್ಟದ ಸಭೆಯಲ್ಲಿ ಸೂಚನೆ ನೀಡಿದ ಪ್ರಧಾನಿ ಮೋದಿ